ತರೀಕೆರೆಯಲ್ಲಿ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಕುರಿತು ಎದ್ದಿರುವ ವದಂತಿ ಸತ್ಯಕ್ಕೆ ದೂರವಾಗಿದ್ದು, ಇಸ್ಲಾಂ ಜಿಂದಾಬಾದ್ ಎಂದು ಕೂಗಿದ್ದನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತರೀಕೆರೆ ಪುರಸಭೆ ಮಾಜಿ ಅಧ್ಯಕ್ಷ ಎಚ್.ಯು.ಫಾರುಕ್ ಸ್ಪಷ್ಟಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತರೀಕೆರೆಯಲ್ಲಿ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಕುರಿತು ಎದ್ದಿರುವ ವದಂತಿ ಸತ್ಯಕ್ಕೆ ದೂರವಾಗಿದ್ದು, ಇಸ್ಲಾಂ ಜಿಂದಾಬಾದ್ ಎಂದು ಕೂಗಿದ್ದನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತರೀಕೆರೆ ಪುರಸಭೆ ಮಾಜಿ ಅಧ್ಯಕ್ಷ ಎಚ್.ಯು.ಫಾರುಕ್ ಸ್ಪಷ್ಟಪಡಿಸಿದ್ದಾರೆ.ತರೀಕೆರೆಯಲ್ಲಿ ಈದ್ ಮಿಲಾದ್ ಸಿದ್ಧತೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ಕುರಿತು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಅಲ್ಲದೆ, ಈ ಕುರಿತು ಭಾರೀ ಚರ್ಚೆಯಾಗುತ್ತಿದೆ. ಆದರೆ, ಈ ವಿಚಾರ ಸತ್ಯಕ್ಕೆ ದೂರವಾದದ್ದಾಗಿದೆ. ತರೀಕೆರೆಯಲ್ಲಿ ಹಿಂದು-ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ ಜೀವಿಸುತ್ತಿದ್ದೇವೆ. ಈದ್ ಮಿಲಾದ್ ಹಬ್ಬಕ್ಕಾಗಿ ಕೊಡಿಕ್ಯಾಂಪ್ ವೃತ್ತದಲ್ಲಿ ಈದ್‌ಮಿಲಾದ್ ಶುಭಾಶಯವಿದ್ದ ಕಟೌಟ್ ಅಳವಡಿಸಿ ನಂತರ ಇಸ್ಲಾಂ ಜಿಂದಾಬಾದ್ ಎಂದು ಕೆಲ ಯುವಕರು ಘೋಷಣೆ ಕೂಗಿದ್ದಾರೆ. ಈ ಕುರಿತು ವೀಡಿಯೋ ಕೂಡ ಲಭ್ಯವಾಗಿದ್ದು, ಅದನ್ನು ತರೀಕೆರೆ ಪೊಲೀಸರು ತನಿಖೆಗೊಳಪಡಿಸಿ ವಿಧಿವಿಜ್ಞಾನಕ್ಕೂ ಕಳುಹಿಸಿದ್ದಾರೆ.
ಎಫ್‌ಎಸ್‌ಎಲ್ ವರದಿ ಬರುವುದಕ್ಕೂ ಮುನ್ನವೇ ನಿರ್ಣಯಕ್ಕೆ ಬರುವುದು ಸರಿಯಲ್ಲ. ಒಂದು ವೇಳೆ ಯುವಕರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಸಾಬೀತಾದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.
ತರೀಕೆರೆಯಲ್ಲಿ ಈದ್ ಮಿಲಾದ್ ಹಬ್ಬವನ್ನು ಶಾಂತಿ ರೀತಿಯಲ್ಲಿ ಆಚರಿಸಲಾಗಿದೆ. ಹಿಂದು ಸಮುದಾಯದ ಮುಖಂಡರು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾಮರಸ್ಯದಿಂದ ನಡೆದುಕೊಳ್ಳಲಾಗಿದೆ. ಮುಹಮ್ಮದ್ ಪೈಗಂಬರ್ ಮತ್ತು ಭಾರತ ಸಂವಿಧಾನ ನಮ್ಮ ದೇಶ ಪ್ರೀತಿಸುವುದನ್ನು ಕಲಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.