ಮಹಾನ್‌ ಸಾಧಕ ಹೆಗಡೆ ಸಹೋದರರಿಗೆ ಆತ್ಮೀಯ ಸನ್ಮಾನ

KannadaprabhaNewsNetwork |  
Published : Sep 14, 2025, 01:04 AM IST
ಎಂ.ಎಸ್. ವೆಂಕಟೇಶ ಹೆಗಡೆ ಹಾಗೂ ಎಂ.ಎಸ್. ವಿನಾಯಕ ಹೆಗಡೆ ದಂಪತಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ಸನ್ಮಾನಿಸಲಾಯಿತು. ಪದಾಂಕಿತ ಹಿರಿಯ ವಕೀಲ ವಿಘ್ನೇಶ್ವರ ಶಾಸ್ತ್ರಿ, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಯೋಗಗುರು ಡಾ. ಮಾರುತಿ ರಾಮ್,  ವಿಘ್ನೇಶ್ವರ ಗಾಯತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ಸಾಧಕರಾದ ಎಂ.ಎಸ್. ವೆಂಕಟೇಶ ಹೆಗಡೆ ಹಾಗೂ ಎಂ.ಎಸ್. ವಿನಾಯಕ ಹೆಗಡೆ ದಂಪತಿಯನ್ನು ಸನ್ಮಾನಿಸಲಾಯಿತು.

  ಬೆಂಗಳೂರು :  ಉದ್ಯೋಗ ಅರಸಿ ಸುಮಾರು 4 ದಶಕಗಳ ಹಿಂದೆ ಬೆಂಗಳೂರಿಗೆ ಬಂದು, ಅವಿನ್ಯೂ ರಸ್ತೆಯ ಹೊಟೇಲ್‌ವೊಂದರಲ್ಲಿ ನೀರಿನ ಲೋಟ ಜೋಡಿಸುತ್ತಿದ್ದ ಸಹೋದರರಿಬ್ಬರು, ಇಂದು 200ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಮೂರು ರೆಸ್ಟೋರೆಂಟ್, ಹೊಟೇಲ್ ಸ್ಥಾಪಿಸುವ ಮೂಲಕ ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಸಾರಿದ್ದಾರೆ.

ಇಂತಹ ಸಾಧನೆ ಮಾಡಿದ ಸಹೋದರರಾದ ಎಂ.ಎಸ್. ವೆಂಕಟೇಶ ಹೆಗಡೆ ಹಾಗೂ ಎಂ.ಎಸ್. ವಿನಾಯಕ ಹೆಗಡೆ ಅವರಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಲೆಕ್ಕಾಧಿಕಾರಿಗಳ ಸಂಘದಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಹೋದರರನ್ನು ಸನ್ಮಾನಿಸಿ ಮಾತನಾಡಿದ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಭಾರತ ಇಂದು ಜಗತ್ತಿನ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದ್ದರೆ ಅದಕ್ಕೆ ಬರೀ ಅದಾನಿ, ರಿಲಯನ್ಸ್, ಇನ್ಫೋಸಿಸ್‌ನಂತಹ ಕಂಪನಿಗಳು ಮಾತ್ರ ಕಾರಣವಲ್ಲ. ಸಣ್ಣ ಸಣ್ಣ ಉದ್ದಿಮೆದಾರರು ಕೂಡ ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಬೃಹತ್ ಸಂಖ್ಯೆಯ ಸಣ್ಣ ಉದ್ಯಮಗಳಿರುವುದರಿಂದ ಭಾರತ ವೈವಿಧ್ಯತೆಯ ಆರ್ಥಿಕತೆಯನ್ನು ಹೊಂದಿದೆ. ಇದೇ ಕಾರಣಕ್ಕೆ ಸ್ಥಿರವಾಗಿ ಪ್ರಗತಿ ಸಾಧಿಸುತ್ತಿದೆ. 

 ಶೀಘ್ರದಲ್ಲೇ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಲಿದೆ ಎಂದರು.ಸಾಮಾಜಿಕ ಮಾಧ್ಯಮ ಎರಡು ಅಲಗಿನ ಕತ್ತಿಯಂತೆ. ನೇಪಾಳದಲ್ಲಿ ಜಾಲತಾಣಗಳನ್ನು ಬ್ಯಾನ್ ಮಾಡಿದ್ದಕ್ಕೆ ರೊಚ್ಚಿಗೆದ್ದ ಜೆನ್ ಜೆಡ್ ಸಮುದಾಯದ ಪ್ರತಿಭಟನೆಯಿಂದ ಸರ್ಕಾರವೇ ಬಿದ್ದು ಹೋಯಿತು. ಮತ್ತೊಂದೆಡೆ ಸಂವಹನಕ್ಕಾಗಿ ಇರುವ ಜಾಲತಾಣಗಳು ಇಂದು ಅಕ್ಕ-ಪಕ್ಕದಲ್ಲಿ ಕುಳಿತಿರುವವರೊಂದಿಗಿನ ಸಂವಹನವನ್ನೇ ಕಡಿತಗೊಳಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮವೊಂದರಿಂದ ಉಪ ಜೀವನಕ್ಕಾಗಿ ನಗರಕ್ಕೆ ಬಂದು ಲಕ್ಷಾಂತರ ಜನರಿಗೆ ಸೇವೆ ನೀಡುವ ಹೊಟೇಲ್‌ ಸ್ಥಾಪಿಸಿದವರನ್ನು ಜನರ ನಡುವೆ ಸನ್ಮಾನಿಸಬೇಕು ಹಾಗೂ ಮತ್ತೊಂದಿಷ್ಟು ಜನರಿಗೆ ಸ್ಫೂರ್ತಿ ನೀಡಬೇಕು ಎನ್ನುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದು ರವಿ ಹೆಗಡೆ ಹೇಳಿದರು.

ಯುವಕರಿಗೆ ಪ್ರೇರಣೆ:

ಹಿರಿಯ ವಕೀಲ ವಿಘ್ನೇಶ್ವರ ಶಾಸ್ತ್ರಿ ಮಾತನಾಡಿ, ಸಹೋದರರ ಈ ಸಾಧನೆ ಯುವಕರು, ಉದ್ಯೋಗ ಅರಸುತ್ತಿರುವವರಿಗೆ ಪ್ರೇರಣೆಯಾಗಿದೆ. ಬಡತನದ ಹಿನ್ನೆಲೆಯಿಂದ ಬಂದು ಕಷ್ಟಪಟ್ಟು ಹೊಟೇಲ್‌ಗಳನ್ನು ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೆ ಬೆಳಕಾಗುವುದು ಸಣ್ಣ ವಿಷಯವಲ್ಲ ಎಂದರು.

ವಿದುಷಿ ರಂಜನಾ ಮತ್ತು ಸಂಗಡಿಗರು ದಾಸರ ಪದನ್ನಾಧರಿಸಿದ ಆಕರ್ಷಕ ಸರ್ವಂ-ತ್ವಮ್ ಭರತನಾಟ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಯೋಗಗುರು ಡಾ. ಮಾರುತಿ ರಾಮ್, ವಿಘ್ನೇಶ್ವರ ಗಾಯತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV
Read more Articles on

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು