ಮಣ್ಣುಗಳ್ಳರ ಹಾವಳಿಗೆ ನಲುಗಿದ ಗೋಮಾಳ

KannadaprabhaNewsNetwork | Published : Feb 17, 2025 12:31 AM

ಸಾರಾಂಶ

ಹಿರಿಯೂರು ತಾಲೂಕಿನ ಬಿದರಕೆರೆ ಶಿವಗಂಗಾ ಮಧ್ಯದ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ದೋಚಿರುವುದು.

ಎಗ್ಗಿಲ್ಲದೆ ಸಾಗಿದೆ ಅಕ್ರಮ ಮಣ್ಣು ಸಾಗಣೆ । ಕಂದಾಯ, ಅರಣ್ಯ ಇಲಾಖೆಯಿಂದ ಜಾಣ ಕುರುಡು ನೀತಿ । ಜಾಗ ನಮ್ಮದಲ್ಲವೆಂದು ಸಬೂಬುರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಬಿದರಕೆರೆ-ಶಿವಗಂಗಾ ಗ್ರಾಮಗಳ ಮಧ್ಯೆ ಇರುವ ನೂರಾರು ಎಕರೆ ಗೋಮಾಳ ಜಮೀನಿನಲ್ಲಿ ಅಕ್ರಮ ಮಣ್ಣು ಸಾಗಣೆ ಎಗ್ಗಿಲ್ಲದೇ ನಡೆದಿದ್ದು ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಪರಸ್ಪರ ಅದು ನಮಗೆ ಸಂಬಂಧಿಸಿದ ಪ್ರದೇಶವಲ್ಲವೆಂದು ಸಬೂಬು ಹೇಳುತ್ತಿದ್ದಾರೆ. ತಮಾಷೆ ಎಂದರೆ ಎರಡೂ ವ್ಯಾಪ್ತಿಯಲ್ಲಿ ಮರಗಳ ಕಡಿಯಲಾಗಿದೆ. ಮಣ್ಣು ದೋಚಲಾಗಿದೆ.

ಸ.ನಂ 26ರಲ್ಲಿ ದನಗಳ ಮುಫತ್ತು ಎಂದು 108.11 ಗುಂಟೆ ಇದ್ದಿದ್ದು, ಇದೀಗ 2024-25 ಪಹಣಿಯಲ್ಲಿ ಎಷ್ಟು ಎಕರೆ ಎಂಬುದು ನಮೂದಾಗಿಲ್ಲ. ಮತ್ತೊಂದು ಸರ್ವೇ ನಂ.28ರ ಪಹಣಿಯಲ್ಲಿ 67.10 ಗುಂಟೆ ಮುಫತ್ತು ದಾಖಲಾಗಿದೆ. ಈ ಎರಡೂ ಸರ್ವೇ ನಂ. ನೆಲದಲ್ಲಿ ಆಳುದ್ದ ಗುಂಡಿಗಳನ್ನಿಟ್ಟು ಮಣ್ಣು ದೋಚಲಾಗಿದೆ. ಜೆಸಿಬಿ, ಟ್ರಾಕ್ಟರ್ ಗಳ ಹೆಜ್ಜೆ ಈಗಲೂ ಕಣ್ಣಿಗೆ ರಾಚುತ್ತಿವೆ. ಮಣ್ಣು ಸಾಗಣೆದಾರರು ಗೋಮಾಳ, ಅರಣ್ಯ ಭೂಮಿಗಳನ್ನೇ ಗುರಿಯಾಗಿಸಿಕೊಂಡು ಮಣ್ಣು ದೋಚುತ್ತಿರುವುದು ವಿಪರ್ಯಾಸ.

ಅಧಿಕಾರಿಗಳು ನಮ್ಮ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಸಾಗಣೆ ಆಗಿಲ್ಲ ಎಂಬ ಸಿದ್ದ ಉತ್ತರಗಳನ್ನು ನೀಡುತ್ತಾ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿರುವುದರ ಪರಿಣಾಮ ಮಣ್ಣು ಲೂಟಿಕೋರರಿಗೆ ಭಯವೇ ಇಲ್ಲದಂತಾಗಿದೆ. ಇಡೀ ಜೆಸಿಬಿ ಮತ್ತು ಟ್ರಾಕ್ಟರ್‌ಅನ್ನು ಮಣ್ಣು ಎತ್ತಿರುವ ಗುಂಡಿಗಳಲ್ಲಿ ಮುಚ್ಚಿಬಿಡಬಹುದು ಅಷ್ಟು ಆಳಕ್ಕೆ ಒಂದೆರಡು ಕಡೆ ಮಣ್ಣು ಎತ್ತಲಾಗಿದೆ.

ಈ ಹಿಂದೆ ಅರಣ್ಯ ಇಲಾಖೆಯವರು ಟ್ರೆಂಚ್ ಹೊಡೆಸಿ ಅಲ್ಲಿಂದ ಮೇಲಕ್ಕೆ ಗಿಡ ನೆಟ್ಟು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇತ್ತೀಚಿಗೆ ಅವರು ಸಹ ಯಾರು ಕಾಣುತ್ತಿಲ್ಲ ಎನ್ನಲಾಗಿದೆ. ಕಂದಾಯ ಭೂಮಿ ಮತ್ತು ಅರಣ್ಯ ಇಲಾಖೆ ಸೇರುವ ಭೂಮಿಯ ಗಡಿಗೆ ದೊಡ್ಡದೊಂದು ಬದು ನಿರ್ಮಾಣ ಮಾಡಲಾಗಿತ್ತು. ಆ ಬದುವಿನ ಬುಡಕ್ಕೆ ಜೆಸಿಬಿ ಇಟ್ಟು ಮಣ್ಣು ಎತ್ತಲಾಗಿದೆ. ಕೆರೆಗೆ ಹೊಂದಿಕೊಂಡಿರುವ ಗೋಮಾಳ ಶುರುವಾಗುವುದು ಎಲ್ಲಿಂದ, ಕೆರೆಯ ಜಾಗ ಎಲ್ಲಿಯವರೆಗೆ ಇದೆ ಎಂಬುದೇ ಗೊತ್ತಾಗದಷ್ಟು ಅದ್ವಾನದ ಪರಿಸ್ಥಿತಿ ಇದೆ.

Share this article