ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಅಧ್ಯಕ್ಷರಾಗಿ ಗೋಣಿತುಮಕೂರು ಲಕ್ಷ್ಮೀಕಾಂತ್, ಸದಸ್ಯರಾಗಿ ದಂಡಿನಶಿವರ ಕುಮಾರ್ , ಹಬುಕನಹಳ್ಳಿ ವಸಂತಕುಮಾರ್, ದುಂಡದ ಡಿ.ಬಿ.ಶಿವರಾಜು, ಪಿ.ಮಾಲಿನಿ, ರಾಘದೇವನಹಳ್ಳಿಯ ಎ.ಎಂ.ಸುಧಾಮಣಿ, ಮುದ್ದನಹಳ್ಳಿಯ ಬ್ಯಾಟರಂಗೇಗೌಡ, ತುರುವೇಕೆರೆಯ ರೇವಣ್ಣ, ನದೀಮ್ ಪಾಷಾ, ಬಾಣಸಂದ್ರದ ಸತ್ಯನಾರಾಯಣ, ಬೆಂಡೇಕೆರೆಯ ಬಿ.ಎನ್.ಕೃಷ್ಣೇಗೌಡ, ಅರೇಮಲ್ಲೇನಹಳ್ಳಿಯ ಆರ್.ಶಿವಣ್ಣ, ಮುತ್ತುಗದಹಳ್ಳಿಯ ಎಂ.ಜಿ.ರವಿಕುಮಾರ್, ನಾಗಲಾಪುರ ಜಗದೀಶ್, ಮಾಯಸಂದ್ರದ ಖಾದೀರ್ ಪಾಷರವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನ ಮೇರೆಗೆ ಜಿಲ್ಲಾಧಿಕಾರಿಗಳು ಮಾಡಿರುವ ಆದೇಶವನ್ನು ಜಿಲ್ಲಾ ಪಂಚಾಯಿತಿ ಸಿಇಒ ರವರು ಜಾರಿಗೊಳಿಸಿದ್ದಾರೆಂದು ಗ್ಯಾರಂಟಿ ಯೋಜನಾ ಅನುಷ್ಠಾನಾ ಸಮಿತಿಯ ಕಾರ್ಯದರ್ಶಿಯೂ, ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಅನಂತರಾಜು ಘೋಷಣೆ ಮಾಡಿದರು.ನೂತನ ಅಧ್ಯಕ್ಷ ಹಾಗೂ ಸದಸ್ಯರ ಬೆಂಬಲಿಗರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನೂತನ ಅಧ್ಯಕ್ಷ ಗೋಣಿತುಮಕೂರು ಲಕ್ಷ್ಮೀಕಾಂತ್ ಮಾತನಾಡಿ, ತಮ್ಮನ್ನು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ವಿಧಾನ ಪರಿಷತ್ ನ ಮಾಜಿ ಸದಸ್ಯ ಬೆಮೆಲ್ ಕಾಂತರಾಜುರವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳನ್ನು ಪ್ರತಿಯೊಬ್ಬರೂ ಬಳಸಿಕೊಳ್ಳುವಂತೆ ಮಾಡಲು ತಾವು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ಸರ್ಕಾರದ ಯೋಜನೆ ಇದುವರೆಗೆ ಯಾರಿಗೆ ದೊರೆತಿಲ್ಲವೋ ಅವರೆಲ್ಲರಿಗೂ ಯೋಜನೆಯ ಉಪಯೋಗವನ್ನು ಕೊಡಿಸುವಲ್ಲಿ ತಾವು ಪ್ರಯತ್ನಿಸುವುದಾಗಿ ಹೇಳಿದರು.
ಇದೇ ವೇಳೆ ಹಿಂದಿನ ಅಧ್ಯಕ್ಷರಾಗಿದ್ದ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ಸೇರಿದಂತೆ ಹಿಂದಿನ ಹಲವಾರು ಸದಸ್ಯರು ಪದಗ್ರಹಣ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು ಚರ್ಚಾ ವಿಷಯವಾಗಿತ್ತು.