ಯಲ್ಲಾಪುರ: ಸಮಾಜದಲ್ಲಿಂದು ಅನೇಕ ಪ್ರತಿಭಾವಂತ ಮಕ್ಕಳು ಶೇ.೯೫ಕ್ಕಿಂತ ಅಂಕ ಪಡೆದು ಸಾಧನೆ ಮಾಡಿದ್ದಾರೆ. ಅಂತಹ ಅನೇಕ ಮಕ್ಕಳಿಗೆ ಸಾಮಾನ್ಯ ಜ್ಞಾನದ ಅರಿವು ಇರದು. ವಿನಯ, ಸಂಸ್ಕಾರ ಮತ್ತು ಹಿರಿಯರನ್ನು ಗೌರವಿಸುವ ತಿಳಿವಳಿಕೆ ಇದ್ದಾಗ ಮಾತ್ರ ಉತ್ತಮ ನಾಗರಿಕನಾಗಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ವೈಟಿಎಸ್ಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಸತ್ತು, ಸಾಂಸ್ಕೃತಿಕ, ಕ್ರೀಡಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ದೇವರು ಎಲ್ಲರಿಗೂ ಮೆದುಳು ನೀಡಿದ್ದಾನೆ. ಅದು ಒಂದೇ ರೀತಿಯಾಗಿರುತ್ತದೆ. ಕೆಲವರಿಗೆ ಗ್ರಹಿಸುವ ಜಾಣ್ಮೆಯಿದ್ದರೆ, ಕೆಲವರಲ್ಲಿ ಗ್ರಹಿಸುವ ಶಕ್ತಿ ಕಡಿಮೆ ಇರುತ್ತದೆ. ಆದರೆ ಯಾರಿಗೂ ಅಸಾಧ್ಯವಾದುದಲ್ಲ. ಯಾರು ನಿರಂತರ ಪರಿಶ್ರಮ, ನಿಷ್ಠೆ, ಶ್ರದ್ಧೆಯಿಂದಿರುತ್ತಾನೋ ಆತನು ಎಲ್ಲದನ್ನೂ ಸಾಧಿಸುತ್ತಾನೆ. ೨೧ನೇ ಶತಮಾನ ಜ್ಞಾನದ ಯುಗ. ಕೌಶಲ್ಯದ ಯುಗ. ಜಗತ್ತಿನಲ್ಲಿ ಜ್ಞಾನಕ್ಕಿಂತ ದೊಡ್ಡದಿನ್ನೊಂದಿಲ್ಲ. ಅಧಿಕಾರ, ಹಣ, ಯಾವುದೂ ಶಾಶ್ವತವಲ್ಲ. ನಾವು ಗಳಿಸಿದ ಜ್ಞಾನದಿಂದ ನಾವು ಮಾಡಿದ ಸಾಧನೆಗಳು ಮಾತ್ರ ಉಳಿಸುತ್ತದೆ. ಅದನ್ನು ವಿದ್ಯಾರ್ಥಿಗಳು ಜೀವನದಲ್ಲಿ ರೂಪಿಸಿಕೊಳ್ಳಬೇಕು ಎಂದರು.
ಉಪ ಅರಣ್ಯ ಸಂರಕ್ಷಣಧಿಕಾರಿ ಹರ್ಷಭಾನು ಜಿ.ಪಿ. ಮಾತನಾಡಿ, ಅಂಕ ಪಡೆಯಬೇಕು, ಜೀವನದ ಪಂಕ ತಿರುಗಲು. ಹಣವಿರಬೇಕು, ಸುಂಕದವರಿಗೆ ಕಟ್ಟಲು. ಸುಂಕ ಕಟ್ಟಬೇಕು, ರಾಷ್ಟ್ರ ಕಟ್ಟಲು. ಅಂಕ ಪಡೆಯುವ ಜೊತೆಗೆ ಬಿಂಕ ಬಿಡಬೇಕು. ಎಲ್ಲರೊಳಗೆ ಒಂದಾಗಬೇಕು. ಈ ಚಿಂತನೆಯನ್ನು ಯಾವ ವ್ಯಕ್ತಿ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾನೋ ಅವನು ಸಮಾಜಮುಖಿಯಾಗಿ ಬದುಕುತ್ತಾನೆ ಎಂದರು.ಸಂಸ್ಥೆಯ ಅಧ್ಯಕ್ಷ ರವಿಕುಮಾರ ಲಕ್ಷ್ಮಣ ಶಾನಭಾಗ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ಟ, ನಿರ್ದೇಶಕ ನಾಗರಾಜ ಮದ್ಗುಣಿ ಇದ್ದರು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಾಚಾರ್ಯ ಆನಂದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಾಗಶ್ರೀ ಹೆಬ್ಬಾರ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ವಿನೋದ ಭಟ್ಟ ನಿರ್ವಹಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯಾಧ್ಯಾಪಕ ಎನ್.ಎಸ್. ಭಟ್ಟ ವಂದಿಸಿದರು.