ಪ್ರವಾಹದಲ್ಲೇ ತೆರಳಿ ಸ್ಥಳೀಯರ ರಕ್ಷಿಸಿದ ಕಾಪು ತಹಸೀಲ್ದಾರ್‌

KannadaprabhaNewsNetwork |  
Published : Jul 18, 2025, 12:55 AM IST
17ಪ್ರತಿಭಾ | Kannada Prabha

ಸಾರಾಂಶ

ಸುರಿದ ಭಾರಿ ಮಳೆಗೆ ಕಾಮಿನಿ ನದಿಪಾತ್ರದ ಪಾದೆಬೆಟ್ಟು ಎಂಬಲ್ಲಿ 4 ಮನೆಗಳು ಜಲಾವೃತವಾಗಿದೆ.

ಕನ್ನಡಪ್ರಭ ವಾರ್ತೆ ಕಾಪುಬುಧವಾರ ಸುರಿದ ಭಾರಿ ಮಳೆಗೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಕಾಮಿನಿ ನದಿಪಾತ್ರದ ಪಾದೆಬೆಟ್ಟು ಎಂಬಲ್ಲಿ 4 ಮನೆಗಳು ಜಲಾವೃತವಾಗಿದ್ದು, ರಾತ್ರಿ ಮನೆಯವರು ಆತಂಕದಿಂದ ತಾಲೂಕು ಆಡಳಿತಕ್ಕೆ ಕರೆ ಮಾಡಿದ್ದರು. ಮುಂಜಾನೆ ಕಾಪು ತಹಸೀಲ್ದಾರ್ ಪ್ರತಿಭಾ ಆರ್. ಸ್ಥಳಕ್ಕೆ ಧಾವಿಸಿ ತಾವೇ ಸ್ವತಃ ಬೋಟಿನಲ್ಲಿ ಇಲ್ಲಿನ ಸುಮಾರು 15 ಮಂದಿಯನ್ನು ಸ್ಥಳಾಂತರಗೊಳಿಸಿದ್ದಾರೆ. ಅಲ್ಲದೆ ಇಲ್ಲಿನ ಹೆಜಮಾಡಿ ಗ್ರಾಮದಿಂದ ಒಬ್ಬರು ಹಾಗೂ ಮಲ್ಲಾರು 8 ಜನರನ್ನು ಸ್ಥಳಾಂತರಿಸಲಾಗಿದೆ. ಅವರೆಲ್ಲರೂ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದು, ಸಂಜೆ ಮಳೆ ಕಡಿಮೆಯಾಗುತ್ತಲೇ ಮನೆ ಮರಳಿದ್ದಾರೆ.

ಪರಿಹಾರ ಬೇಡ, ರಸ್ತೆ ಎತ್ತರ ಮಾಡಿ:

ಪಾದೆಬೆಟ್ಟು ಗ್ರಾಮಕ್ಕೆ ತೆರಳುವ ರಸ್ತೆ ತೀರಾ ಗದ್ದೆಯ ಮಟ್ಟದಲ್ಲಿದ್ದು, ಇಲ್ಲಿನ ಮನೆಗಳು ಜಲಾವೃತವಾದಾಗ ಈ ರಸ್ತೆ ಕೂಡ ಮುಳುಗುತ್ತದೆ. ಆದ್ದರಿಂದ ತಾವು ಸುರಕ್ಷಿತ ಸ್ಥಳಕ್ಕೆ ತೆರಳುವುದಕ್ಕೆ ಸಾಧ್ಯವಾಗುತ್ತಿಲ್ಲ, ಪ್ರವಾಹದ ನೀರು ಮನೆಯೊಳಗೆ ನುಗ್ಗಿ ರಾತ್ರಿ ಇಡೀ ಮಕ್ಕಳು, ಮುದುಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಆತಂಕದಿಂದ ಕಳೆದಿದ್ದೇವೆ. ಮನೆಯೊಳ‍ಗಿದ್ದ ಅಕ್ಕಿ ದವಸಧಾನ್ಯ, ಬಟ್ಟೆಬರೆ ಸಂಪೂರ್ಣ ಒದ್ದೆಯಾಗಿವೆ. ತಮಗೆ ಪರಿಹಾರ, ಆಹಾರದ ಕಿಟ್ ಯಾವುದೂ ಬೇಡ, ಆದರೆ ರಸ್ತೆಯನ್ನು ಎತ್ತರ ಮಾಡಿ, ಪ್ರವಾಹ ಬಂದಾಗ ಸುರಕ್ಷಿತ ಸ್ಥಳಕ್ಕೆ ತೆರಳಲು ಅನುವು ಮಾಡಿಕೊಡಿ ಎಂದು ಸ್ಥಳೀಯರು ತಹಸೀಲ್ದಾರ್ ಅವರನ್ನು ಆಗ್ರಹಿಸಿದ್ದಾರೆ.

ಕಾಮಿನಿ ನದಿ ಹೂಳೆತ್ತಲು ಕ್ರಮ:

ಕಾಪು ತಾಲೂಕಿನ ಕಾಮಿನಿ ನದಿ ಅಳಿವೆಕೋಡಿ ಎಂಬಲ್ಲಿ ಸಮುದ್ರ ಸೇರುತ್ತದೆ. ಈ ಪ್ರದೇಶದಲ್ಲಿ ಹೂಳು ಮತ್ತು ತ್ಯಾಜ್ಯಗಳು ಸೇರಿ ನದಿ ನೀರು ಸರಾಗವಾಗಿ ಸಮುದ್ರ ಸೇರುತ್ತಿಲ್ಲ. ಇದರಿಂದ ಇಲ್ಲಿನ ಅಕ್ಕಪಕ್ಕದ ಪ್ರದೇಶಗಳ ಕೃಷಿ ಭೂಮಿಗೆ ನೀರು ನುಗ್ಗುವುದು, ಮನೆಗಳು ಜಲಾವೃತವಾಗುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ನದಿಯಲ್ಲಿ ತುಂಬಿರುವ ಹೂಳು ತೆಗೆಯಲು ಸಣ್ಣ ನೀರಾವರಿ ಇಲಾಖೆಗೆ ಸೂಚಿಸಲಾಗಿದೆ. ಪ್ರವಾಹದ ಸ್ಥಿತಿಯನ್ನು ಎದುರಿಸಲು ತಾಲೂಕು ಆಡಳಿತ ಸಂಪೂರ್ಣ ತಯಾರಿ ಮಾಡಿಕೊಂಡಿದೆ. ಗಂಜಿಕೇಂದ್ರ, ಬೋಟುಗಳು ಕೂಡ ಸನ್ನದ್ಧಗೊಳಿಸಲಾಗಿದೆ ಎಂದು ತಹಸೀಲ್ದಾರ್ ಪ್ರತಿಭಾ ತಿಳಿಸಿದ್ದಾರೆ.

PREV

Latest Stories

ಮಧ್ಯಸ್ಥಿಕೆದಾರರೇ ವಿಶೇಷ ಅಭಿಯಾನ ಯಶಸ್ವಿಗೊಳಿಸಿ: ನ್ಯಾ. ರಾಜೇಶ್ವರಿ ಹೆಗಡೆ ಕರೆ
ಸಮಾಜದ ಅಭಿವೃದ್ಧಿಗೆ ಪೂರಕವಾಗಲಿ ವಿಜ್ಞಾನ, ಸಂಶೋಧನೆ
ಕೊನೆ ಆಷಾಢ ಶುಕ್ರವಾರ ಶಕ್ತಿ ದೇವತೆಗಳಿಗೆ ಭಕ್ತರಿಂದ ವಿಶೇಷ ಪೂಜೆ