ಅಭಿವೃದ್ಧಿ, ಸಮಾಜ ಸುಧಾರಣೆಯಲ್ಲಿ ಉತ್ತಮ ಪೈಪೋಟಿ ಅಗತ್ಯ

KannadaprabhaNewsNetwork |  
Published : Jun 25, 2025, 01:17 AM ISTUpdated : Jun 25, 2025, 01:18 AM IST
ಫೋಟೋ : ೨೪ಕೆಎಂಟಿ_ಜೆಯುಎನ್_ಕೆಪಿ೧ : ಮಣಕಿ ಗ್ರಾಮ ಒಕ್ಕಲು ಸಭಾಭವನದಲ್ಲಿ ಸ್ವಸಹಾಯ ಸಂಘಗಳ ಮಹಿಳಾ ಸಮಾವೇಶವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಸೂರಜ ನಾಯ್ಕ, ರಾಜೇಂದ್ರ ಭಟ್, ಗಣಪತಿ ಭಟ್, ಪ್ರೀತಿ ಭಂಡಾರಕರ, ಸಾವಿತ್ರಿ ನಾಯ್ಕ, ಸುಜಾತಾ ಕಾಮತ, ರಾಜು ಕಲ್ಲಪ್ಪ ಇತರರು ಇದ್ದರು. | Kannada Prabha

ಸಾರಾಂಶ

ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಸೌಲಭ್ಯಗಳು ಎಷ್ಟೇ ಸಿಕ್ಕರೂ ಮಕ್ಕಳು ಶಿಕ್ಷಣವಂತರಾದರೆ ಮಾತ್ರ ಅವರು ಸಮಾಜಕ್ಕೆ ಶ್ರೇಷ್ಠ ಕೊಡುಗೆಯಾಗುತ್ತಾರೆ

ಕುಮಟಾ: ಅಭಿವೃದ್ಧಿ ಮತ್ತು ಸಮಾಜ ಸುಧಾರಣೆಯಲ್ಲಿ ನಮ್ಮ ಸುತ್ತಮುತ್ತಲೂ ಉತ್ತಮ ಪೈಪೋಟಿ ಇರಬೇಕು. ಮನುವಿಕಾಸ ಸಂಸ್ಥೆ ಅಂಥ ಸ್ಪರ್ಧಾತ್ಮಕತೆಗೆ ಪ್ರೇರಣೆಯಾಗಿದೆ. ಮಹಿಳೆಯರು ಸ್ವಾವಲಂಬಿಯಾಗುವಂತೆ ಪ್ರೋತ್ಸಾಹಿಸಿ, ತರಬೇತಿ ನೀಡಿ, ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಮಣಕಿಯ ಗ್ರಾಮ ಒಕ್ಕಲು ಸಭಾಭವನದಲ್ಲಿ ಮಂಗಳವಾರ ಮನುವಿಕಾಸ ಸಂಸ್ಥೆ ಮತ್ತು ಈಡಲ್‌ಗೀವ್ ಫೌಂಡೇಶನ್‌ನ ಸ್ವಸಹಾಯ ಸಂಘಗಳ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಸೌಲಭ್ಯಗಳು ಎಷ್ಟೇ ಸಿಕ್ಕರೂ ಮಕ್ಕಳು ಶಿಕ್ಷಣವಂತರಾದರೆ ಮಾತ್ರ ಅವರು ಸಮಾಜಕ್ಕೆ ಶ್ರೇಷ್ಠ ಕೊಡುಗೆಯಾಗುತ್ತಾರೆ. ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಿ. ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಮಾನವೀಯ ಕಾರ್ಯಗಳ ಜತೆಗೆ ಶಾಸಕನಾಗಿ ಗರಿಷ್ಠ ಸೇವೆ ಮಾಡಿದ್ದೇನೆ. ಯಾವುದೇ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕಮಲಾ ಬಾಳಿಗಾ ಪ್ರಶಿಕ್ಷಣ ಕಾಲೇಜಿನ ಪ್ರಾಚಾರ್ಯೆ ಡಾ.ಪ್ರೀತಿ ಭಂಡಾರಕರ ಮಾತನಾಡಿ, ಮಹಿಳೆ ಮಾನಸಿಕ, ಸಂವೇದನಾತ್ಮಕ, ಆರ್ಥಿಕವಾಗಿ ಸಬಲೆಯಾಗುವ ಎಲ್ಲ ಅರ್ಹತೆ ಹೊಂದಿದ್ದು, ಇಂದಿನ ಕಾಲದಲ್ಲಿ ಕೌಟುಂಬಿಕ ಶಕ್ತಿ ಮತ್ತು ಸಮಾಜದ ಆಸ್ತಿಯಾಗಿದ್ದಾಳೆ.ಸಂಸಾರದಿಂದ ಸಮಾಜ ನಿರ್ಮಾಣದ ಹೊಣೆ ಮಹಿಳೆಯರ ಮೇಲಿದ್ದು ಸಮರ್ಥವಾಗಿ ನಿಭಾಯಿಸುತಿದ್ದಾಳೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ರಾಜ್ಯ ಕಾರ್ಯಕಾರಿ ಸದಸ್ಯ ಸೂರಜ ನಾಯ್ಕ ಮಾತನಾಡಿ, ಕಷ್ಟದ ಬದುಕಿಗೆ ವಿಕಾಸದ ಮಾರ್ಗ ತೋರಿಸುವುದು ಉತ್ತಮ ಕಾರ್ಯ. ಸಮಾಜ ಕಾರ್ಯಗಳಲ್ಲಿ ವಿಶ್ವಾಸಾರ್ಹತೆ ಮೂಡಿಸಿದ ಮನುವಿಕಾಸ ಸಂಸ್ಥೆಯು ಕೆರೆ ಹೂಳೆತ್ತುವುದು, ಕೃಷಿ ಹೊಂಡ ಮುಂತಾದ ಜೀವಜಲದ ಸಂವರ್ಧನಾ ಕಾರ್ಯದಲ್ಲೂ ತೊಡಗಿರುವುದು ವಿಶೇಷ ಎಂದರು.

ತಾಪಂ ಇಒ ರಾಜೇಂದ್ರ ಭಟ್, ಕೆನರಾ ಬ್ಯಾಂಕ್ ಆರ್‌ಸೆಟಿ ನಿರ್ದೇಶಕ ರಾಜು ಕಲ್ಲಪ್ಪ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಆನಂದ ಕೊಂಡ್ಲಿ, ಪಿಎಸ್‌ಐ ಸಾವಿತ್ರಿ ನಾಯ್ಕ, ಸಿಡಿಪಿಒ ಶೀಲಾ ಪಾಟೀಲ, ಕಮಲಾ ಬಾಳಿಗಾ ಪ್ರಶಿಕ್ಷಣ ಕಾಲೇಜು ಪ್ರಾಚಾರ್ಯೆ ಡಾ.ಪ್ರೀತಿ ಭಂಡಾರಕರ, ಉದ್ಯಮಿ ಸುಜಾತಾ ಕಾಮತ, ಜಿಲ್ಲಾ ಅಗ್ರಣೀಯ ಬ್ಯಾಂಕಿನ ಅಧಿಕಾರಿ ಕುಲಕರ್ಣಿ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಉತ್ತಮ ಸ್ವಉದ್ಯಮಶೀಲರು ಹಾಗೂ ಮಾದರಿ ಸ್ವಸಹಾಯ ಸಂಘಗಳಿಗೆ ಗೌರವಿಸಲಾಯಿತು. ಸ್ವ ಉದ್ಯಮಿ ಮಂಗಲಾ ಗೌಡ, ಶೋಭಾ ಹರಿಕಾಂತ, ಅಪರ್ಣ ಪಡ್ತರ್, ಗಾಯತ್ರಿ ಆಚಾರಿ, ಕಲ್ಪನಾ ನಾಯ್ಕ, ಲಲಿತಾ ಮಡಿವಾಳ, ಕಮಲಾ ಗೌಡ ಅನಿಸಿಕೆ ಹಂಚಿಕೊಂಡರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ನೆಲ್ಲಿಕೇರಿ ಶಾಂತಿಕಾ ಸ್ವಸಹಾಯ ಸಂಘದ ಸದಸ್ಯರಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮನುವಿಕಾಸ ಸಂಸ್ಥೆ ನಿರ್ದೇಶಕ ಗಣಪತಿ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಶ್ವತ್ಥ ನಾಯ್ಕ, ಗೀತಾ ನೀಲೇಕಣಿ, ಸೃಜನ್ ನಿರೂಪಿಸಿದರು. ಮನುವಿಕಾಸದ ವಲಯ ನಿರ್ವಾಹಕ ನವೀನ ನಾಯ್ಕ ವಂದಿಸಿದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು