ಮೂಡಲಗಿ ತಾಲೂಕಿನ ಜನತೆಗೆ ಅಚ್ಛೇ ದಿನ್ ಬರಲಿದೆ

KannadaprabhaNewsNetwork |  
Published : Jun 23, 2025, 12:33 AM IST
ಮೂಡಲಗಿ ಪಟ್ಟಣದ ಸಂಗಪ್ಪಣ್ಣ ವೃತ್ತದ ಬಳಿ ಒಟ್ಟು ₹7.58 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ವಾಣಿಜ್ಯ ಮಳಿಗೆಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಶೀಘ್ರದಲ್ಲೇ ₹8.60 ಕೋಟಿ ವೆಚ್ಚದ‌ ಮಿನಿ ವಿಧಾನಸೌಧ ಕಟ್ಟಡ ಮತ್ತು ₹3 ಕೋಟಿ ವೆಚ್ಚದ ಅಗ್ನಿ ಶಾಮಕ ಠಾಣೆಗೆ ಹೊಸ ಕಟ್ಟಡಗಳಿಗೆ ಸರ್ಕಾರದ ಅನುಮೋದನೆ ದೊರಕಲಿವೆ.

ಕನ್ನಡಪ್ರಭ ವಾರ್ತೆ ಮೂಡಲಗಿ

ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಾಗರಿಕರ ಅಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಸಂಗಪ್ಪಣ್ಣ ವೃತ್ತದ ಬಳಿ ಪುರಸಭೆಯಿಂದ ನಿರ್ಮಿಸಲು ಉದ್ದೇಶಿಸಿರುವ ಒಟ್ಟು ₹7.68 ಕೋಟಿ ವೆಚ್ಚದ ವಾಣಿಜ್ಯ ಮಳಿಗೆಗಳ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣದ ಸರ್ವತೋಮುಖ ಏಳ್ಗೆಯೇ ನನ್ನ ಗುರಿಯಾಗಿದೆ ಎಂದರು.

ಮೂಡಲಗಿ ತಾಲೂಕು ಕೇಂದ್ರಕ್ಕೆ ಹೊಸ ಸ್ವರೂಪ ನೀಡಲು ಬದ್ಧನಿದ್ದೇನೆ. ಈಗಾಗಲೇ ಸಾರ್ವಜನಿಕರಿಗೆ ಅಗತ್ಯವಿರುವ ಬಹುತೇಕ ಸರ್ಕಾರಿ ಕಚೇರಿಗಳನ್ನು ತರಲಾಗಿದೆ. ಶೀಘ್ರದಲ್ಲೇ ₹8.60 ಕೋಟಿ ವೆಚ್ಚದ‌ ಮಿನಿ ವಿಧಾನಸೌಧ ಕಟ್ಟಡ ಮತ್ತು ₹3 ಕೋಟಿ ವೆಚ್ಚದ ಅಗ್ನಿ ಶಾಮಕ ಠಾಣೆಗೆ ಹೊಸ ಕಟ್ಟಡಗಳಿಗೆ ಸರ್ಕಾರದ ಅನುಮೋದನೆ ದೊರಕಲಿವೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಈಗಾಗಲೇ ಅಗತ್ಯವಿರುವ ಕಾಮಗಾರಿಗಳನ್ನು ಮಂಜೂರು ಮಾಡುವಂತೆ ಕೋರಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಮೂಡಲಗಿ ಜನತೆಗೆ ಅಚ್ಛೇ ದಿನ್ ಬರಲಿದೆ ಎಂದು ತಿಳಿಸಿದರು.

ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಎರಡು ಹೊಸ ವಾಣಿಜ್ಯ ಮಳಿಗೆಗಳು ತಲೆಯೆತ್ತಲಿವೆ. ಇದಕ್ಕಾಗಿ ಐಡಿಎಸ್ಎಂಟಿ ಯೋಜನೆಯಡಿ ಒಟ್ಟು ₹7.68 ಕೋಟಿ ಅನುದಾನ ಬಿಡುಗಡೆಯಾಗಿದೆ. ಸಣ್ಣ ಪುಟ್ಟ ತರಕಾರಿ ವ್ಯಾಪಾರಿಗಳ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೂ ಪರ್ಯಾಯ ವ್ಯವಸ್ಥೆ ಮಾಡುವ ಇಂಗಿತ ವ್ಯಕ್ತಪಡಿಸಿದರು.

₹4.99 ಕೋಟಿ ವೆಚ್ಚದ ಸಂಗಪ್ಪಣ್ಣ ವೃತ್ತದ ಗಣಪತಿ ಮಂದಿರದ ದಕ್ಷಿಣ ಭಾಗದಿಂದ ಬಿಎಸ್ಎನ್ಎಲ್ ಕಚೇರಿ ಮತ್ತು ₹2.58 ಕೋಟಿ ವೆಚ್ಚದ ಗಣಪತಿ ಮಂದಿರದ ಉತ್ತರ ಭಾಗದಲ್ಲಿ ಹೊಸ ಮಳಿಗೆಗಳಿಗೆ ಭೂಮಿಪೂಜೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೆರವೇರಿಸಿದರು. ಶಿವಬೋಧರಂಗ ಮಠದ ಪೀಠಾಧಿಪತಿ ಅಮೃತಬೋಧ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಪುರಸಭೆ ಅಧ್ಯಕ್ಷೆ ಖುರ್ಷಾದಾ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಸದಸ್ಯರಾದ ಸಂತೋಷ ಸೋನವಾಲಕರ, ರವೀಂದ್ರ ಸಣ್ಣಕ್ಕಿ, ಹಣಮಂತ. ಗುಡ್ಲಮನಿ, ಜಯಾನಂದ ಪಾಟೀಲ, ಶಿವು ಚಂಡಕಿ, ಭೀಮಶಿ ಸಣ್ಣಕ್ಕಿ, ಆನಂದ ಟಪಾಲದಾರ, ಮುಖ್ಯಾಧಿಕಾರಿ ತುಕಾರಾಮ ಮಾದರ, ಗುತ್ತಿಗೆದಾರ ಗಜಾನನ ವಶೇದಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ