ಈರಣ್ಣ ಬುಡ್ಡಾಗೋಳ
ಸಾರ್ವಜನಿಕ ಕೆರೆಯಲ್ಲಿ ನೀರು ಕಲುಷಿತಗೊಂಡಿದೆಯೋ ಅಥವಾ ವಿಷಕಾರಿ ಪದಾರ್ಥ ಸೇರಿದ ಪರಿಣಾಮವೋ ಕೆರೆಯಲ್ಲಿನ ಸಾವಿರಾರು ಮೀನುಗಳ ಮಾರಣಹೋಮವಾಗಿದೆ. ಪರಿಣಾಮ ಮೀನು ಸಾಕಾಣಿಕೆದಾರ ಸಂಕಷ್ಟಕ್ಕೀಡಾಗಿದ್ದರೆ, ಇನ್ನೂ ಹರಾಜು ನೀಡಿರುವ ಗ್ರಾಮ ಪಂಚಾಯಿತಿ ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬತೆ ನಡೆದುಕೊಳ್ಳುತ್ತಿದೆ.
ತಾಲೂಕಿನ ಕೆ.ಜುನಿಪೇಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾನಪೇಠದಲ್ಲಿರುವ ಶ್ರೀಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಎದುರಿಗೆ ಬರುವ ಈ ಗ್ರಾಮದಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿ ಸಾರ್ವಜನಿಕ ಕೆರೆಯಿದೆ. ಈ ಕೆರೆಯಲ್ಲಿ ಮೀನು ಸಾಕಾಣಿಕೆಗಾಗಿ ಗ್ರಾಮ ಪಂಚಾಯಿತಿಯವರು ಹರಾಜು ಮೂಲಕ 5 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ. ಆದರೆ ಯಾವುದೇ ಕಾರಣಗಳಿಂದ ಕಳೆದ ಮೂರ್ನಾಲ್ಕು ದಿನಗಳಿಂದ ಪ್ರತಿದಿನ ಸಾವಿರಾರು ಮೀನುಗಳು ಸಾಯುತ್ತಿವೆ. ಮೀನುಗಳ ಸಾವಿಗೆ ನಿಖರವಾದ ಕಾರಣ ಗೊತ್ತಾಗುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಸಹಿತ ಯಾರು ಸ್ಪಂದಿಸುತ್ತಿಲ್ಲ ಎನ್ನುವುದು ಹರಾಜಿನಲ್ಲಿ ಕೆರೆ ಪಡೆದಿರುವ ಬಡ ಮೀನುಗಾರನ ಅಳಲಾಗಿದೆ.ಉತ್ತಮ ಮಳೆಯಾದಗ ಮಾತ್ರ ಗ್ರಾಮದ ಸುತ್ತಲಿನ ಜಮೀನುಗಳ ಮತ್ತು ಗುಡ್ಡದಲ್ಲಿನ ನೀರು ಈ ಕೆರೆಗೆ ಹರಿದು ಬರುತ್ತದೆ. ಈ ಕೆರೆ ಗ್ರಾಮಗಳ ಜಾನುವಾರಗಳಿಗೆ ಉಪಯೋಗವಿದೆ. ಕಳೆದ ಮೂವತ್ತು ವರ್ಷಗಳಿಂದ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಿದರೂ ಈ ತರಹದ ಮೀನುಗಳ ಸಾವು ಗೊತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ 25-30 ವರ್ಷಗಳಿಂದ ಖಾನಪೇಠದ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದು ಎಂದು ಕೂಡಾ ಈ ರೀತಿಯಾಗಿ ಮೀನುಗಳು ಸತ್ತಿರುವುದಿಲ್ಲ. ಈ ವರ್ಷ ಸುಮಾರು 25 ಸಾವಿರ ಮೀನು ಮರಿಗಳನ್ನು ಖಾಸಗಿಯವರಿಂದ ಖರೀದಿ ಮಾಡಿ ಬಿಡಲಾಗಿತ್ತು. ಕಳೆದ ಮುರ್ನಾಲ್ಕು ದಿನಗಳಿಂದ ಮೀನುಗಳು ಸಾಯುತ್ತಿವೆ. ಸಾಲ ಮಾಡಿ ಸಾಕಾಣಿಕೆ ಮಾಡುತ್ತಿದ್ದ ನನಗೆ ತುಂಬಲಾರದ ಹಾನಿಯಾಗಿದೆ.
ಖಾನಪೇಠ ಗ್ರಾಮದ ಸಾರ್ವಜನಿಕ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಪಂಚಾಯಿತಿಯಿಂದ ಅನುಮತಿ ನೀಡಲಾಗಿದೆ. ಇಲ್ಲಿ ಮೀನುಗಳು ಸಾಯುತ್ತಿರುವುದು ಗಮನಕ್ಕೆ ಬಂದಿದೆ. ಕೆರೆಯ ನೀರನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಕೆರೆಯಲ್ಲಿ ಸಾಕಾಣಿಕೆ ಮಾಡಿರುವ ಮೀನುಗಳಿಗೆ ಆಮ್ಲಜನಕದ ಕೊರತೆ ಉಂಟಾದರೆ ಮತ್ತು ನೀರು ಕಲುಷಿತಗೊಂಡರೆ ಮೀನುಗಳು ಸಾಯುತ್ತವೆ. ಕೆರೆಯಲ್ಲಿ ಜನರು ಬಟ್ಟೆ ತೊಳೆದರೆ ಆಮ್ಲಜನಕದಲ್ಲಿ ವ್ಯತ್ಯಾಸವಾಗಿ ಸಾಯಬಹುದು ಮತ್ತು ಕೆರೆಯಲ್ಲಿನ ನೀರಿನ ಸಂಗ್ರಹಕ್ಕೆ ಅನುಗುಣವಾಗಿ ಮೀನುಗಳನ್ನು ಸಾಕಾಣಿಕೆ ಮಾಡಬೇಕು ಹೆಚ್ಚು ಕಡಿಮೆಯಾದಾಗ ಈ ರೀತಿ ಘಟನೆಗಳು ನಡೆಯಬಹುದು.