ಆಡಳಿತ ಮಂಡಳಿ ಭ್ರಷ್ಟಾಚಾರದಿಂದ ಕಾರ್ಖಾನೆಗೆ ನಷ್ಟ

KannadaprabhaNewsNetwork |  
Published : Jun 23, 2025, 12:33 AM IST
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲರಿಗೆ ಕಾರ್ಖಾನೆ ನಷ್ಟದ ಬಗ್ಗೆ ರೈತ ಮುಖಂಡರು, ಆಡಳಿತ ಮಂಡಳಿ ಪದಾಧಿಕಾರಿಗಳು, ಕಾರ್ಮಿಕರು ವಿವರಣೆ ನೀಡಿದರು. | Kannada Prabha

ಸಾರಾಂಶ

ಕಬ್ಬು ಬೆಳೆಗಾರರ ಹಿತರಕ್ಷಣೆ ಬದಲಿಗೆ ಆಡಳಿತ ಮಂಡಳಿಯ ಕೆಲವರು ಲೂಟಿಗೆ ಇಳಿದ ಪರಿಣಾಮ ಕೋಟ್ಯಂತರ ರು. ಸಾಲದ ಸುಳಿಗೆ ಸಿಲುಕಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಅನಿರೀಕ್ಷಿತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾರ್ಖಾನೆಯ ದುಸ್ಥಿತಿಯ ಬಗ್ಗೆ ರೈತ ಮುಖಂಡರು, ಕಾರ್ಮಿಕರು ಹಾಗೂ ಆಡಳಿತ ಮಂಡಳಿಯಿಂದ ಪರಸ್ಪರ ದೂರುಗಳ ಸುರಿಮಳೆಯೇ ಆಯಿತು.

ಆಡಳಿತ ಮಂಡಳಿಗಳ ಭ್ರಷ್ಟಾಚಾರದಿಂದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಷ್ಟಕ್ಕೀಡಾಗಿದೆ. ಕಬ್ಬು ಬೆಳೆಗಾರರ ಹಿತರಕ್ಷಣೆ ಬದಲಿಗೆ ಆಡಳಿತ ಮಂಡಳಿಯ ಕೆಲವರು ಲೂಟಿಗೆ ಇಳಿದ ಪರಿಣಾಮ ಕೋಟ್ಯಂತರ ರು. ಸಾಲದ ಸುಳಿಗೆ ಸಿಲುಕಿದೆ. ಕಬ್ಬು ಬೆಳೆಗಾರರಿಗೆ ಕಬ್ಬು ಪೂರೈಕೆ ಮಾಡಿದ ಹಣ ಪಾವತಿ ಮಾಡಿಲ್ಲ ಎಂದು ರೈತ ಸಂಘದ ಮುಖಂಡರು ದೂರಿದರು.

ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಹಾಗೂ ರೈತ ಮುಖಂಡರ ತಿಕ್ಕಾಟದಿಂದ ಈ ಸಹಕಾರಿ ಸಕ್ಕರೆ ಕಾರ್ಖಾನೆ ನಷ್ಟಕ್ಕೆ ಬರಲು ಕಾರಣ ಎಂದು ಆಡಳಿತ ಮಂಡಳಿ ಅಧ್ಯಕ್ಷರು ಸಚಿವರಿಗೆ ವಿವರಿಸಿದರು. ಈ ಕಾರ್ಖಾನೆಯನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಸರ್ಕಾರ ಸೂಕ್ತ ನಿರ್ದಾರ ಕೈಗೊಂಡು ಕಾರ್ಖಾನೆ ನಡೆಸಲು ಮುಂದೆ ಬರಬೇಕು ಎಂದು ಕಾರ್ಮಿಕರು ಸಚಿವ ಶಿವಾನಂದ ಪಾಟೀಲರಿಗೆ ಮನವಿ ಮಾಡಿದರು.

ಸಚಿವರು ಮುನ್ಸೂಚನೆ ಇಲ್ಲದೆ ಕಾರ್ಖಾನೆಗೆ ಭೇಟಿ ನೀಡಿ ಸ್ಥಳದಲ್ಲಿದ್ದ ಕಾರ್ಮಿಕರಿಂದ ಮಾಹಿತಿ ಪಡೆಯುತ್ತಿರುವ ವಿಷಯ ತಿಳಿದ ರೈತ ಮುಖಂಡರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಆಗ ಪರಸ್ಪರ ದೂರುಗಳು ಕೇಳಿ ಬಂದವು.

ನಷ್ಟದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ರೈತ ಸಂಘದ ಮುಖಂಡ ಆನಂದ ಹುಚ್ಚಗೌಡರ್‌, ಈ ಹಿಂದಿನ ಆಡಳಿತ ಮಂಡಳಿ ಹಾಗೂ ಪ್ರಸ್ತುತ ಆಡಳಿತ ಮಂಡಳಿಯ ಲೋಪವೇ ಕಾರ್ಖಾನೆ ದುಸ್ಥಿತಿಗೆ ಕಾರಣ. ಆಡಳಿತ ಮಂಡಳಿಗಳು ಸಕ್ಕರೆ ಇಳುವರಿ ಕಡಿಮೆ ತೋರಿಸಿದವು. ದೊಡ್ಡ ಪ್ರಮಾಣದ ಸಕ್ಕರೆ ದಾಸ್ತಾನನ್ನು ಅಕ್ರಮವಾಗಿ ದಾಸ್ತಾನು ಮಾಡಿ ದುರ್ಬಳಕೆ ಮಾಡಿಕೊಂಡರು. ಅಕ್ರಮ ದಾಸ್ತಾನನ್ನು ಅಕ್ರಮವಾಗಿ ಮಾರಾಟ ಮಾಡಿದರು. ಈ ಅಕ್ರಮವನ್ನು ಪತ್ತೆ ಮಾಡಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದೆವು. ಆಗ ಅಕ್ರಮ ಸಾಬೀತಾಗಿದೆ ಎಂದು ವಿವರಿಸಿದರು.

ಅಕ್ರಮಗಳ ಬಗ್ಗೆ ದಾಖಲೆಗಳೊಂದಿಗೆ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಅಕ್ರಮದಲ್ಲಿ ಭಾಗಿಯಾದವರು ಪಾರಾಗಲು ನಡೆಸಿದ ದೂರವಾಣಿ ಸಂಭಾಷಣೆಯ ದಾಖಲೆಗಳನ್ನೂ ಲೋಕಾಯುಕ್ತರಿಗೆ ನೀಡಿದ್ದೇವೆ. ಸೆಕ್ಯುರಿಟಿ ಅಧಿಕಾರಿಗಳೂ ಮಾತನಾಡಿದ ದಾಖಲೆಗಳಿವೆ ಎಂದು ಸಚಿವರಿಗೆ ವಿವರಿಸಿದರು. ಏನು ಅಕ್ರಮ ನಡೆದಿದೆ ಎಂಬುದು ದೂರವಾಣಿ ಮಾತುಕತೆಯಲ್ಲಿ ಸ್ಪಷ್ಟವಾಗಿದೆ . ಆಡಳಿತ ಮಂಡಳಿಯನ್ನು ಯಾವ ಕಾರಣಕ್ಕೆ ಸೂಪರ್‌ ಸೀಡ್‌ ಮಾಡಬೇಕು ಎಂಬ ಬಗ್ಗೆ ವಿವರಣೆ ನೀಡಿದ್ದೇವೆ ಎಂದು ತಿಳಿಸಿದರು.

ಸರ್ಕಾರ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಅಧಿಕಾರಿಯನ್ನು ನೇಮಕ ಮಾಡಿದರೂ ಸಹ ಆಡಳಿತ ಮಂಡಳಿ ಅವರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡದೆ ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ. ಕಾರ್ಖಾನೆ ನಷ್ಟದಲ್ಲಿದ್ದರೂ ಅವರಿಗೆ ವೇತನ ಹೆಚ್ಚಳ ಮಾಡಿದ್ದಾರೆ ಎಂದು ದೂರಿದರು.

ಸ್ಥಳಕ್ಕೆಆಗಮಿಸಿದ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ, ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿರುವುದೂ ಕೂಡ ನಷ್ಟದ ಕಾರಣಗಳಲ್ಲಿ ಒಂದು. ಅಗತ್ಯ ಪ್ರಮಾಣದ ಕಬ್ಬು ನಮ್ಮ ಕಾರ್ಖಾನೆಗೆ ಬರುತ್ತಿಲ್ಲ. ರೈತ ಸಂಘದ ಮುಖಂಡರ ಅಸಹಕಾರ ಧೋರಣೆಯೂ ಸಹ ಇದೆ ಎಂದು ಹೇಳಿದರು. ನಷ್ಟಕ್ಕೆ ಕಾರಣವೇನು ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸದ ಕಾರ್ಮಿಕರು, ಈ ಕಾರ್ಖಾನೆಯನ್ನು ಪುನರಾರಂಭ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ನಮ್ಮ ತಂದೆ ರುದ್ರಪ್ಪ ಮೊಕಾಶಿ ಅವರ ತಂಡ ಆಡಳಿತದ ಜವಾಬ್ದಾರಿ ವಹಿಸಿಕೊಂಡಿದ್ದಾಗ ಕಾರ್ಖಾನೆ ನಷ್ಟದಲ್ಲಿತ್ತು. ಮೂರು ವರ್ಷಗಳ ಅವಧಿಯಲ್ಲಿ ಈ ಕಾರ್ಖಾನೆಯ ಸಾಲ ತೀರಿಸಿ ಲಾಭದತ್ತ ಮುನ್ನಡೆಸಿ ₹15 ಕೋಟಿ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರು. ಆದರೆ ನಂತರ ಅಧಿಕಾರಕ್ಕೆ ಬಂದವರ ದುರಾಡಳಿತದಿಂದ ಕಾರ್ಖಾನೆ ನಷ್ಟಕ್ಕೀಡಾಗಿದೆ ಎಂದು ರೈತ ಮುಖಂಡ ಬಸವರಾಜ ಮೊಕಾಶಿ ವಿವರಿಸಿದರು.

₹160 ಕೋಟಿ ಸಾಲ:

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ವಿವಿಧ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಒಟ್ಟು ₹135 ಕೋಟಿ ಸಾಲ ಪಡೆದಿದ್ದು, ಬಡ್ಡಿ ಸೇರಿ ₹160 ಕೋಟಿ ಗಳಷ್ಟಾಗಿದೆ. ಮತ್ತೊಂದು ಬ್ಯಾಂಕಿನಲ್ಲಲಿ ₹14 ಕೋಟಿ ಕಟಾವು ಮತ್ತು ಸಾಗಾಟ ಸಾಲ ಇದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು. ಕಬ್ಬು ಪೂರೈಕೆ ಮಾಡಿದ ರೈತರಿಗೆ ₹2.10 ಕೋಟಿ ಪಾವತಿ ಮಾಡಬೇಕಿದೆ. 7 ಲಕ್ಷ ಲೀಟರ್‌ ರೆಕ್ಟಿಫೈಡ್‌ ಸ್ಪಿರೀಟ್‌ ಮಾರಾಟ ಮಾಡಿ ರೈತರ ಬಾಕಿ ಪಾವತಿ ಮಾಡಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ