ಪುಣ್ಯ ಕರ್ಮಗಳೇ ಮುಕ್ತಿಗೆ ದಾರಿ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Sep 01, 2024, 01:52 AM IST
ಶ್ರೀಗಳ ತುಲಾಭಾರ ನೆರವೇರಿತು. | Kannada Prabha

ಸಾರಾಂಶ

ಜೀವನದ ಭವಿಷ್ಯವನ್ನು ಮಾತ್ರವಲ್ಲದೇ ಸಾವಿನ ಬಳಿಕದ ಸ್ಥಿತಿಯನ್ನೂ ಜಾತಕದ ಮೂಲಕ ತಿಳಿಯಬಹುದು ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.

ಗೋಕರ್ಣ: ಮನುಷ್ಯನಾಗಿ ಹುಟ್ಟಿದ ಎಲ್ಲರಿಗೂ ಮುಕ್ತಿಗೆ ಅವಕಾಶವಿದೆ. ಇದಕ್ಕೆ ಜಾತಿ, ಲಿಂಗ, ದೇಶ ಅಡ್ಡ ಬರುವುದಿಲ್ಲ. ಪುಣ್ಯಕರ್ಮಗಳು ಮುಕ್ತಿಗೆ ದಾರಿ. ಜಾತಕದಲ್ಲಿ ಏನೇ ಇದ್ದರೂ ಸತ್ಕರ್ಮಗಳ ಮೂಲಕ ಭವಿಷ್ಯವನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು 42ನೇ ದಿನವಾದ ಶನಿವಾರ ಕಾಲ ಪ್ರವಚನ ಸರಣಿಯಲ್ಲಿ ಆಶೀರ್ವಚನ ಅನುಗ್ರಹಿಸಿದರು.

ಜೀವನದ ಭವಿಷ್ಯವನ್ನು ಮಾತ್ರವಲ್ಲದೇ ಸಾವಿನ ಬಳಿಕದ ಸ್ಥಿತಿಯನ್ನೂ ಜಾತಕದ ಮೂಲಕ ತಿಳಿಯಬಹುದು. ಭಾವ, ಭಾವಾಧಿಪತಿ, ಭಾವಕಾರಕ ಈ ಅಂಶಗಳನ್ನು ನೋಡಬೇಕು ಎಂದರು.

ರೋಗ ಪ್ರಶ್ನೆಯಲ್ಲಿ ಪೃಷ್ಟೋದಯ ರಾಶಿ, ಜಲಹ್ರಾಸ, ಚರ ರಾಶಿ ಮತ್ತು ಅಧೋಮುಖ ರಾಶಿಗಳು ಲಗ್ನದಲ್ಲಿ ಬಂದರೆ ರೋಗ ಗುಣವಾಗುತ್ತದೆ ಎಂಬ ನಿರ್ಧಾರಕ್ಕೆ ಬರಬೇಕು. ಲಗ್ನಾಧಿಪತಿ ಲಗ್ನಕೇಂದ್ರದಲ್ಲಿ, ಬಲಿಷ್ಠನಾಗಿದ್ದು, ಚರ ರಾಶಿಯಲ್ಲಿ ಅಥವಾ ನವಾಂಶ ಚರ ರಾಶಿಗಳಲ್ಲಿ ಬಂದರೆ ಸ್ವಾಸ್ಥ್ಯ ಮರುಕಳಿಸುತ್ತದೆ. ಲಗ್ನಾಧಿಪತಿ 12 ಮತ್ತು 6ನೇ ಭಾವನದಲ್ಲಿದ್ದರೆ, ಸ್ಥಿರ ರಾಶಿಯಲ್ಲಿದ್ದರೆ, ನವಾಂಶ ಸ್ಥಿರ ರಾಶಿಯಲ್ಲಿದ್ದರೆ ಮತ್ತು ಬಲಹೀನನಾಗಿದ್ದರೆ ಮಹಾವ್ಯಾಧಿ ಇದೆ ಎಂಬ ಅರ್ಥ ಎಂದು ಅಭಿಪ್ರಾಯಪಟ್ಟರು.

ನವಮಾಧಿಪತಿ ಶುಭಗ್ರಹನಾಗಿದ್ದರೆ, ಬಲಶಾಲಿಯಾಗಿದ್ದರೆ, ಅಭೀಷ್ಟ ಸ್ಥಿತಿಯಲ್ಲಿದ್ದರೆ, ಲಗ್ನಾಧಿಪತಿ ರವಿ/ ಗುರುದೃಷ್ಟಿಯಲ್ಲಿ ಇದ್ದರೆ ನಿಸ್ಸಂಶಯವಾಗಿ ಆರೋಗ್ಯ ಪ್ರಾಪ್ತಿಯಾಗುತ್ತದೆ. ಲಗ್ನಾಧಿಪತಿ ದೋಷಗ್ರಸ್ತನಾಗಿದ್ದರೆ ಅಥವಾ ನವಮ ಭಾವ ದೋಷಗ್ರಸ್ತವಾಗಿದ್ದರೆ, ರೋಗ ಪರಿಹಾರವಾಗದ ಸ್ಥಿತಿ ಎಂದು ವಿಶ್ಲೇಷಿಸಿದರು.

ಪರಂಪರೆಯ 31ನೇ ಗುರುಗಳ ದಾಖಲೆಗಳ ಅನಾವರಣ ಶನಿವಾರ ನೆರವೇರಿದೆ. ಆದ್ಯ ರಘೂತ್ತಮ ಮಠ, ಕೆಕ್ಕಾರು ಮಠ ಹಾಗೂ ರಾಮಚಂದ್ರಾಪುರ ಮಠವಾಗಿ ಕವಲಾಯಿತು. ಕೆಲ ತಲೆಮಾರುಗಳ ಬಳಿಕ ಅದು ಇವರ ಕಾಲದಲ್ಲಿ ಮತ್ತೆ ಒಂದಾಯಿತು. ಭಾಗವಾಗಿದ್ದ ಮಠ ಒಂದಾದದ್ದು ಐತಿಹಾಸಿಕ ಕ್ಷಣ. ಹನ್ನೆರಡನೇ ವಯಸ್ಸಿನಲ್ಲೇ ಪೀಠಕ್ಕೆ ಬಂದ ಪರಮಪೂಜ್ಯರ ಮಾಗರ್ದಶನಕ್ಕೆ ಬಂದ ಕೆಕ್ಕಾರು ಮಠದ ದೊಡ್ಡ ಗುರುಗಳು ಮತ್ತೆ ಶಿಷ್ಯಸ್ವೀಕಾರ ಮಾಡದೇ ಆ ಮಠವನ್ನು ರಾಮಚಂದ್ರಾಪುರ ಮಠದಲ್ಲೇ ವಿಲೀನಗೊಳಿಸಿದರು ಎಂದು ಸ್ವಾಮೀಜಿ ಬಣ್ಣಿಸಿದರು. ಅಂಥ ಗುರುಗಳ ಕೃಪಾಕಟಾಕ್ಷದಿಂದ ಇಡೀ ಸಮಾಜಕ್ಕೆ ದಾರಿ ತಪ್ಪದ ಬುದ್ಧಿ ಬರಲಿ. ಗುರುಕಾರಣ್ಯ ಎಲ್ಲರಿಗೂ ಲಭಿಸಲಿ ಎಂದು ಪ್ರಾರ್ಥಿಸಿದರು.

ಶ್ರೀಮಠದ 31ನೇ ಗುರುಗಳಾದ ರಾಮಚಂದ್ರ ಭಾರತೀ ಸ್ವಾಮೀಜಿಯವರ ಜೀವನ-ಸಾಧನೆ ಕುರಿತ ಅನಾವರಣವನ್ನು ಹಿಂದೂಸ್ತಾನ್ ಪೆಟ್ರೋಲಿಯಂನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ವರ್ಮುಡಿ ಕುಮಾರಸ್ವಾಮಿ ನೆರವೇರಿಸಿದರು.

ಚಾತುರ್ಮಾಸ್ಯ ಅಂಗವಾಗಿ ಶುಕ್ರವಾರ ನಡೆದ ಶ್ರೀಗಳ ತುಲಾಭಾರದಲ್ಲಿ 101 ಮಂದಿ ತುಲಾಭಾರ ಸೇವೆ ಸಮರ್ಪಿಸಿದರು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾರಕರ ಬಡಗಣಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಸಿದ್ದಾಪುರ ಮಂಡಲದ ಅಧ್ಯಕ್ಷ ಮಹೇಶ್ ಚಟ್ನಳ್ಳಿ, ಕಾರ್ಯದರ್ಶಿ ಚಂದನ್ ಶಾಸ್ತ್ರಿ, ಶಾಂತಾರಾಮ ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ಶಾಸ್ತ್ರಿಗಳಾದ ಶ್ರೀಶ ಶಾಸ್ತ್ರಿ, ತುಲಾಭಾರ ಸೇವಾ ಸಮಿತಿಯ ವಿ.ಡಿ. ಹೆಗಡೆ, ರಾಜಾರಾಂ ಭಟ್ ಮುರೂರು ಮತ್ತಿತರರು ಉಪಸ್ಥಿತರಿದ್ದರು. ಎಸ್.ಜಿ. ಭಟ್ ಕಬ್ಬಿನಗದ್ದೆ ಕಾರ್ಯಕ್ರಮ ನಿರೂಪಿಸಿದರು.

PREV