ಹಾನಗಲ್ಲ: ಭವಿಷ್ಯದ ಮಕ್ಕಳ ಬದುಕಿಗಾಗಿ ಉತ್ತಮ ಶಿಕ್ಷಣ ಸಂಸ್ಕಾರ ತೀರ ಅಗತ್ಯವಿದ್ದು, ನಾವು ಮಕ್ಕಳಿಗೆ ಆಸ್ತಿ ಮಾಡಲು ಹೊರಟಿದ್ದೇವೆ, ಆದರೆ ಮಕ್ಕಳನ್ನೇ ಆಸ್ತಿ ಮಾಡುವತ್ತ ಎಲ್ಲರ ಚಿತ್ತ ಮುಂದಾಗಬೇಕು ಎಂದು ನ್ಯಾಯವಾದಿ ರವಿಬಾಬು ಪೂಜಾರ ತಿಳಿಸಿದರು.ಹಾನಗಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಕರ್ನಾಟಕ ಸರ್ಕಾರದ ವಿಕಲ ಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಾಲೂಕು ನಿವೃತ್ತ ನೌಕರರ ಸಂಘ ಆಯೋಜಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ತಂದೆ-ತಾಯಿಗಳು ಮಕ್ಕಳ ಬದುಕನ್ನು ರೂಪಿಸುವ ಮಹತ್ತರ ಜವಾಬ್ದಾರಿ ವಹಿಸುವ ಅಗತ್ಯ ಸಂದರ್ಭದಲ್ಲಿ ಮಕ್ಕಳಿಗೆ ಸರಿಯಾದ ಸಾಮಾಜಿಕ ಶಿಕ್ಷಣ ನೀಡುವ ಅಗತ್ಯವಿದೆ. ನಮ್ಮ ಆಸ್ತಿಯನ್ನು ಮಕ್ಕಳಿಗೆ ಮೊದಲೆ ಪಾಲು ಮಾಡಿಕೊಟ್ಟು ಮಕ್ಕಳಿಂದ ಆಸ್ತಿಯ ದುರುಪಯೋಗಕ್ಕೆ ಅವಕಾಶ ಮಾಡಿಕೊಡಬೇಡಿ. ಎಲ್ಲ ಸಂದರ್ಭದಲ್ಲಿ ಮಕ್ಕಳ ಮೇಲೆ ನಿಗಾ ಇಡುವ ಮೂಲಕ ಅವರ ಭವಿಷ್ಯದ ಬದುಕು ರೂಪಿಸಲು ಮುಂದಾಗಿ. ಮಕ್ಕಳಿಗೆ ಬದುಕಿನ ನಿಜವಾದ ಚಿತ್ರಣವನ್ನು ಹಾಗೂ ನಾಳೆಗಾಗಿ ಬೇಕಾದ ಅಗತ್ಯಗಳ ಬಗ್ಗೆ ಅರಿವು ಮೂಡಿಸಿ. ಇಲ್ಲದಿದ್ದರೆ ಕೇವಲ ಒಂದು ಕುಟುಂಬಕ್ಕಲ್ಲ, ಇಡೀ ಸಮಾಜದಕ್ಕೆ ಯುವ ಪೀಳಿಗೆ ಕಂಟಕಪ್ರಾಯವಾದೀತು ಎಂದು ಎಚ್ಚರಿಸಿದರು. ವಿಕಲಚೇತರನರ ಜಿಲ್ಲಾ ಕಲ್ಯಾಣಾಧಿಕಾರಿ ಆಶು ನದಾಫ್ ಮಾತನಾಡಿ, ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಾನೂನಾತ್ಮಕ ಹಾಗೂ ಸಾಮಾಜಿಕ ಗೌರವವನ್ನು ಉಳಿಸುವ ಅಗತ್ಯವೂ ಇದೆ. ಸರ್ಕಾರವೂ ಕೂಡ ಹಿರಿಯ ನಾಗರಿಕರಿಗೆ ಉತ್ತಮ ಅವಕಾಶ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳ ಸರಿಯಾದ ಬಳಕೆಯೂ ಬೇಕಾಗಿದೆ. ಎಲ್ಲ ಸಂದರ್ಭದಲ್ಲಿ ಹಿರಿಯ ನಾಗರಿಕರು ಆರೋಗ್ಯದತ್ತ ಲಕ್ಷ್ಯವಹಿಸಿರಿ. ನಾಳೆಗಳಾಗಿ ಇಂದೇ ಎಚ್ಚರಿಕೆವಹಿಸೋಣ. ಯುವ ಪೀಳಿಗೆಗೆ ಹಿರಿಯರ ಮಾರ್ಗದರ್ಶನ, ಕೊಡುಗೆ ಅತ್ಯಂತ ಆವಶ್ಯಕ ಎಂದರು. ಪೊಲೀಸ ಸಬ್‌ಇನ್ಸಪೆಕ್ಟರ್ ದೀಪಾಲಿ ಗುಡೋಡಗಿ ಮುಖ್ಯ ಅತಿಥಿಯಾಗಿ ಮಾತನಾಡಿ, ಅಪರಾಧಗಳ ನಡುವೆ ಬದುಕುವಂತಹ ವಿಚಿತ್ರ ಸಂಗತಿಗಳು ಸಮಾಜದ ಶಾಂತಿಯನ್ನು ಕದಡುತ್ತಿವೆ. ಅಪರಾಧಿಗಳು, ಅಪರಾಧ ಪ್ರಕರಣಗಳು ಗಮನಕ್ಕೆ ಬಂದಾಗ ನಿರ್ಭೀತಿಯಿಂದ ಪೊಲೀಸರಿಗೆ ಮಾಹಿತಿ ನೀಡಲು ಹಿರಿಯರು ಮುಂದಾಗಬೇಕು. ಮಹಿಳಾ ದೌರ್ಜನ್ಯಗಳು ಇಡೀ ಸಮಾಜವನ್ನು ಆತಂಕಕ್ಕೆ ಸಿಲುಕಿಸುತ್ತಿವೆ. ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ಎಚ್ಚರಿಸಿದರು. ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಎನ್. ಪಾಟೀಲ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುನಾಥ ಗವಾಣಿಕರ, ಪಿ.ಎಂ.ಪಾಟೀಲ, ಬಿ.ಎನ್.ಸಂಗೂರ, ಕೆ.ಜಿ.ಹೊಸಳ್ಳಿ, ರಾಮು ಬಯಲುಸೀಮಿ, ಸುಶೀಲಾ ತಳವಾರ, ಡಾ.ಅಂಕಿತ್, ಸಿ.ಮಂಜುನಾಥ, ನಾರಾಯಣ ಚಿಕ್ಕೊರ್ಡೆ, ಲಕ್ಷö್ಮಣ ಬಾರ್ಕಿ, ಡಾ.ಕಮ್ಮಾರ, ಎನ್.ಎಂ.ಪೂಜಾರ, ಬಿ.ಆರ್.ಶೆಟ್ಟರ ಪಾಲ್ಗೊಂಡಿದ್ದರು. ಲೀಲಾವತಿ ಗುಡಿ ಸಂಗಡಿಗರು ಪ್ರಾರ್ಥಿಸಿದರು. ಆರ್.ಎಫ್. ತಿರುಮಲೆ ಸ್ವಾಗತಿಸಿದರು. ಅಶೋಕ ದಾಸರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.