ಬಳ್ಳಾರಿ: ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆ ಮಂಗಳವಾರ ಧಾರಾಕಾರ ಮಳೆಯಾಗಿದೆ.
ಸೋಮವಾರ ತಡರಾತ್ರಿಯೂ ಜಿಲ್ಲೆಯ ಕಂಪ್ಲಿ ಹಾಗೂ ಸಂಡೂರು ತಾಲೂಕಿನಲ್ಲಿ ಅಲ್ಲಲ್ಲಿ ಉತ್ತಮ, ಮತ್ತೆ ಕೆಲವೆಡೆ ಸಾಧಾರಣ ಮಳೆಯಾಗಿದೆ. ಮಂಗಳವಾರ ಬೆಳಿಗ್ಗೆಯಿಂದ ಆಗಾಗ್ಗೆ ಸುರಿಯುತ್ತಿದ್ದ ಮಳೆ ರಾತ್ರಿ 7 ಗಂಟೆವರೆಗೆ ಮುಂದುವರಿದಿತ್ತು. ಇದರಿಂದ ದೀಪಾವಳಿ ಹಬ್ಬಕ್ಕೆಂದು ತಂದಿಟ್ಟುಕೊಂಡಿದ್ದ ಪಟಾಕಿಗಳು ಸದ್ದಡಗಿತ್ತು.
ಬಳ್ಳಾರಿಯ ಬಹುತೇಕ ರಸ್ತೆಗಳು ಗುಂಡಿಗಳಿಂದ ತುಂಬಿಕೊಂಡಿರುವುದರಿಂದ ಸಹಜ ಸಂಚಾರಕ್ಕೆ ಅಡ್ಡಿಯಾಗಿತ್ತು.ಸತತವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ನಿಂತಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡಿದರು. ಮಳೆನೀರು ಸರಾಗವಾಗಿ ಹರಿದು ಹೋಗಲು ಪೂರಕ ವ್ಯವಸ್ಥೆ ಇಲ್ಲದಿರುವುದರಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದವು. ಹಳೆಯ ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿಗಳು ಗದ್ದೆಯಂತಾಗಿದ್ದವು.
ಗ್ರಾಮೀಣ ಪ್ರದೇಶದಲ್ಲಿ ಮಳೆಯ ಅಬ್ಬರ:
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಭತ್ತ ಹಾಗೂ ಮೆಣಸಿನಕಾಯಿ ಬೆಳೆಗೆ ಸಂಕಷ್ಟ ತಂದೊಡ್ಡಿದೆ. ಮಳೆಯ ಜೊತೆಗೆ ಜೋರಾಗಿ ಗಾಳಿ ಬೀಸುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಭತ್ತ ಹಾಲು ತುಂಬಿಕೊಂಡು ತೆನೆಕಟ್ಟುವ ಹಂತದಲ್ಲಿದ್ದು ಮಳೆಯ ಜೊತೆಗೆ ಜೋರಾಗಿ ಗಾಳಿ ಬೀಸುತ್ತಿರುವುದರಿಂದ ಭತ್ತ ಬಾಗಿಕೊಳ್ಳುತ್ತಿದೆ. ಭತ್ತ ನೆಲಕ್ಕೊರಗಿದರೆ ಇಳುವರಿಯಲ್ಲಿ ಭಾರೀ ಇಳಿಮುಖವಾಗಲಿದೆ. ಎಕರೆಗೆ 15ರಿಂದ 20 ಚೀಲಗಳಷ್ಟು ನಷ್ಟವಾಗುವ ಸಾಧ್ಯತೆಯಿದೆ ಎಂಬುದು ರೈತರ ಆತಂಕವಾಗಿದೆ.
ಏತನ್ಮಧ್ಯೆ ವರುಣನ ಆಗಮನ ರೈತರನ್ನು ಮತ್ತಷ್ಟೂ ಆತಂಕಕ್ಕೆ ದೂಡಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ಕರೂರು ಅವರು ತಿಳಿಸಿದರು. ಕನ್ನಡಪ್ರಭ ಜತೆ ಮಾತನಾಡಿದ ಅವರು, ಭತ್ತ ಹಾಗೂ ಮೆಣಸಿನಕಾಯಿ ಬೆಳೆಗಾರರು ಮಳೆಯಿಂದ ಕಂಗಾಲಾಗಿದ್ದಾರೆ. ಈ ಬಾರಿ ಯಾವ ಬೆಳೆಗೂ ಉತ್ತಮ ದರವಿಲ್ಲ. ಇದರ ನಡುವೆ ಮಳೆಯಿಂದ ನಷ್ಟವಾದರೆ ರೈತರ ಸ್ಥಿತಿ ಮತ್ತಷ್ಟು ಸಮಸ್ಯೆಗೆ ದೂಡುವ ಸಾಧ್ಯತೆಯಿದೆ ಎನ್ನುತ್ತಾರೆ. ಮೆಕ್ಕೆಜೋಳಕ್ಕೆ ಸದ್ಯ ಮಳೆಯಿಂದ ಯಾವ ಸಮಸ್ಯೆಯಿಲ್ಲವಾದರೂ ದರ ಸಂಪೂರ್ಣ ಕುಸಿತವಾಗಿದೆ. ಕಳೆದ ಬಾರಿ ₹2600 ಇದ್ದ ಮೆಕ್ಕೆಜೋಳ ಈ ಬಾರಿ ₹1600ಕ್ಕೆ ಕುಸಿದಿದೆ ಎಂದು ತಿಳಿಸಿದರು.
ಬೆಳಿಗ್ಗೆಯಿಂದ ಆಗಾಗ್ಗೆ ಮಳೆ ಸುರಿಯುತ್ತಲೇ ಇದ್ದು ಜನರು ಮನೆಯಿಂದ ಹೊರ ಬರದಂತಾಗಿದೆ. ದೀಪಾವಳಿ ಹಬ್ಬದ ಸಡಗರದಲ್ಲಿದ್ದ ಜನರಿಗೆ ವರುಣನ ಆಗಮನ, ಬೇಡದ ಅತಿಥಿಯಾಗಿದೆ. ಹಬ್ಬದ ಹಿನ್ನಲೆಯಲ್ಲಿ ಸದಾ ಗಿಜಿಗುಡುತ್ತಿದ್ದ ಬಳ್ಳಾರಿಯ ಪ್ರಮುಖ ವಾಣಿಜ್ಯ ಕೇಂದ್ರಗಳೆನಿಸಿದ ಬೆಂಗಳೂರು ರಸ್ತೆ, ಬ್ರಾಹ್ಮಣಬೀದಿ, ಶ್ರೀಕನಕ ದುರ್ಗಮ್ಮ ದೇವಸ್ಥಾನ ಮೈದಾನ, ಎಲೆ ಬಜಾರ್, ಗ್ರಹಂ ರಸ್ತೆಗಳು ಜನರಿಲ್ಲದೆ ಬಿಕೋ ಎಂದವು. ಬೆಳಿಗ್ಗೆಯಿಂದ ತುಂತುರು ಮಳೆಯಾಗುತ್ತಿರುವುದರಿಂದ ಜನರು ಹೊರಗಡೆ ಹೆಚ್ಚಾಗಿ ಕಂಡು ಬರಲಿಲ್ಲ. ದೀಪಾವಳಿ ಹಬ್ಬಕ್ಕೆಂದು ತಂದಿದ್ದ ಪಟಾಕಿಗಳು ಸದ್ದು ಮಾಡಲಿಲ್ಲ.