ಮುಂಡರಗಿ: ಸರ್ಕಾರಿ ಅಥವಾ ಸ್ವಯಂ ಉದ್ಯೋಗದಿಂದ ಬದುಕನ್ನು ರೂಪಿಸಿಕೊಳ್ಳಲು ಮತ್ತು ಉತ್ತಮ ವ್ಯಕ್ತಿತ್ವ ಹೊಂದಿ ಬದುಕಬೇಕಾದರೆ ಶಿಕ್ಷಣ ಅತ್ಯಂತ ಅವಶ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ತಿಳಿಸಿದರು.
ಈ ಶಾಲೆ ಶಿಕ್ಷಕರು ಕ್ರಿಯಾಶೀಲವಾಗಿ ಪಾಠ ಮಾಡುತ್ತ ಬಂದಿದ್ದಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಎಲ್ಲ ರೀತಿಯ ಪರೀಕ್ಷೆಗಳನ್ನು ಬರೆಯಲು ಅಣಿಗೊಳಿಸಬೇಕು. ಎಸ್ಎಸ್ಎಲ್‌ಸಿ ಪರೀಕ್ಷೆಗೆ ತಿಂಗಳು ಬಾಕಿ ಉಳಿದಿದ್ದು, ವಿದ್ಯಾರ್ಥಿಗಳು ನಿತ್ಯ 4 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು. ಅಂದಾಗ ಸುಲಭವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ ಎಂದರು.
ಸ್ಥಳೀಯ ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಕಾವೇರಿ ಬೋಲಾ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಎನ್ನುವುದು ಬಿಜಿನೆಸ್ ಆಗಿ ಮಾರ್ಪಾಡಾಗಿದೆ. ಇಲ್ಲಿ ಕಡಿಮೆ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಈ ಶಾಲೆಯ ಗೋಡೆಬರಹಗಳು ಮಕ್ಕಳ ಕಲಿಕೆಗೆ ಪೂರಕವಾಗಿವೆ ಎಂದರು.ಆಡಳಿತ ಮಂಡಳಿಯ ಈಶ್ವರಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಶಾಲೆಗಳು ವೈಯಕ್ತಿಕ ಹೆಸರಿನಲ್ಲಿ ಹುಟ್ಟಿಕೊಂಡಿದ್ದು, ಸ್ವಾಮಿ ವಿವೇಕಾನಂದರ ಹೆಸರನ್ನಿಟ್ಟು ಈ ಶಾಲೆ ಪ್ರಾರಂಭಿಸಿ ಮಕ್ಕಳಿಗೆ ಅವರ ತತ್ವಾದರ್ಶಗಳನ್ನು ಕಲಿಸಲಾಗುತ್ತಿದೆ ಎಂದರು.