ಮಾರುಕೇರಿಯಲ್ಲಿ ಸಂಭ್ರಮದ ಹಿಂದೂ ಸಮ್ಮೇಳನಕನ್ನಡಪ್ರಭ ವಾರ್ತೆ ಭಟ್ಕಳ
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಶಿರಸಿ ಆರೆಸ್ಸೆಸ್ ಬೌದ್ಧಿಕ ಪ್ರಮುಖ ಮಧು ಕಿರುಗಾರ, ಧರ್ಮ ಎಂದರೆ ಪೂಜಾ ಪದ್ಧತಿ ಅಲ್ಲ. ಬದಲಾಗಿ ಧರ್ಮ ಅಂದರೆ ಅದೊಂದು ಜೀವನ ಪದ್ಧತಿಯಾಗಿದೆ. ಧರ್ಮವು ಸರಿಯಾದ ದಾರಿ, ನಡವಳಿಕೆ ತಿಳಿಸುತ್ತದೆ. ನಮ್ಮ ಭಾರತೀಯ ಸಂಸ್ಕೃತಿ ಶ್ರೇಷ್ಠವಾಗಿದೆ. ನಮ್ಮ ಸಂಸ್ಕೃತಿ, ಆಚಾರ ವಿಚಾರ ಅಳಿಸಲು ನಾವು ಎಂದಿಗೂ ಬಿಡಬಾರದು. ನಮ್ಮ ಧರ್ಮವನ್ನು ನಾವೇ ಕಾಪಾಡಿಕೊಳ್ಳಬೇಕು. ಹೊರದೇಶದವರೇ ನಮ್ಮ ಧರ್ಮ, ಸಂಸ್ಕೃತಿಯನ್ನು ಇಷ್ಟಪಡಬೇಕಾದರೆ, ನಮಗೆ ನಮ್ಮ ದೇಶದ ಸಂಸ್ಕೃತಿ, ಆಚಾರ ವಿಚಾರ ಬಗ್ಗೆ ನಿರ್ಲಕ್ಷ್ಯ, ಅಸಡ್ಡೆ ಯಾಕೆ ಎಂದು ಪ್ರಶ್ನಿಸಿದರು
ನಮ್ಮಲ್ಲಿ ಹಲವು ಜಾತಿಗಳಿದ್ದರೂ ಅದನ್ನು ನಾವು ಮನೆಯಲ್ಲಿ ಮಾತ್ರ ಪಾಲಿಸಿ ಹೊರಗೆ ಬಂದಾಗ ನಾವೆಲ್ಲರೂ ಒಂದು ಎಂದು ತೋರಿಸಿಕೊಡಬೇಕು. ಪ್ರಪಂಚಕ್ಕೆ ಜ್ಞಾನ ಕೊಡುವ ಭಾರತೀಯರು ಜ್ಞಾನಿಗಳಾಗಬೇಕು. ನಮ್ಮ ಧರ್ಮ, ಆಚಾರ, ವಿಚಾರ, ಸಂಸ್ಕೃತಿ ಬಗ್ಗೆ ನಾವು ತಿಳಿದುಕೊಳ್ಳಬೇಕು. ನಮ್ಮ ಧರ್ಮ, ಸಂಸ್ಕೃತಿ ಬಗ್ಗೆ ನಮಗೇ ತಿಳಿದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಧರ್ಮ ಎಂದರೆ ಒಂದು ಮನೆ ಇದ್ದ ಹಾಗೆ. ನಮ್ಮ ಧರ್ಮದ ಬಗ್ಗೆ ನಾವು ಅಭಿಮಾನ ಹೊಂದಬೇಕು ಎಂದರು.ನಿವೃತ್ತ ಶಿಕ್ಷಕ ಗಜಾನನ ಅವಧಾನಿ, ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಮ್ಮೇಳ ನಸಮಿತಿಯ ಅಧ್ಯಕ್ಷ ನಾರಾಯಣ ಭಟ್ಟ ಮಾತನಾಡಿದರು.
ಶ್ರೀಕಂಠ ಹೆಬ್ಬಾರ, ಬಡಿಯಾ ಗೊಂಡ, ನಾಗೇಂದ್ರ ಶೆಟ್ಟಿ, ಮಂಜುನಾಥ ಮೊಗೇರ,ಗಣಪಯ್ಯ ಗೊಂಡ, ಗೋಪಾಲ ಪ್ರಭು, ಕೇಶವ ಭಂಡಾರಿ, ರೇವತಿ ನಾಯ್ಕ, ಈಶ್ವರ ನಾಯ್ಕ ಸೇರಿದಂತೆ ವಿವಿಧ ಸಮಾಜದ ಪ್ರಮುಖರು ಇದ್ದರು. ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು. ಗಜಾನನ ಹೆಬ್ಬಾರ ಕಿತ್ರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಪಿಲ ಭಟ್ಟ ನಿರೂಪಿಸಿದರು. ಮಹೇಶ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಕೋಟಖಂಡದಿಂದ ಧನ್ವಂತರಿ ದೇವಸ್ಥಾನದ ವರೆಗೆ ಆಕರ್ಷಕ ಶೋಭಾ ಯಾತ್ರೆ ನಡೆಯಿತು. ಮೆರವಣಿಗೆಯಲ್ಲಿ ಗಣಪಯ್ಯ ಗೊಂಡ ಮಾರುಕೇರಿ ಅವರು ತಲೆ ಮೇಲೆ ಕಳಸ ಹೊತ್ತು ನೃತ್ಯ ಮಾಡಿದ್ದು ಎಲ್ಲರ ಗಮನ ಸೆಳೆಯಿತು.