- ಬಸವನಹಳ್ಳಿ ಕಾಲೇಜಿನ ವಾರ್ಷಿಕೋತ್ಸವ, ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿಗಳು ಶ್ರದ್ಧೆಯಿಂದ ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿದರೆ ಮುಂದಿನ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ನಗರದ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಯುವಜನರಿಗೆ ’ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ’ ಎಂದು ಹೇಳಿದ್ದರು. ಡಾ. ಬಿ.ಆರ್.ಅಂಬೇಡ್ಕರ್ ಕೇವಲ ಮಾತು, ಭಾಷಣಗಳಿಂದ ದೇಶ ಮುನ್ನಡೆಸಲು ಆಗುವುದಿಲ್ಲ ಎಂದ ಅವರು, ಸಾಮಾಜಿಕ, ಆರ್ಥಿಕವಾಗಿ ಎಲ್ಲರಿಗೂ ಶಕ್ತಿ ತುಂಬಿದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೆ ಸಾರ್ಥಕ ಎಂದು ಹೇಳಿದರು.ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮೇರು ಸಾಹಿತಿ ಕುವೆಂಪು ಜನಿಸಿದ ಜಿಲ್ಲೆಯಲ್ಲಿ ಹುಟ್ಟಿರುವ ನಾವುಗಳೆಲ್ಲರೂ ಸ್ವಾಮಿ ವಿವೇಕಾನಂದರ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಅಧ್ಯಯನ ಮಾಡಿ ಅವರ ವಿಚಾರಧಾರೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಸರ್ಕಾರಿ ಶಾಲಾ ಕಾಲೇಜುಗಳಿಗೆ ನಗರಸಭೆಯಿಂದ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಎಸ್‌ಡಿಎಂಸಿ ಅಧಿಕಾರ ಚುಕ್ಕಾಣಿ ಹಿಡಿದ ನಂತರ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದಾಗ ಅ ಶಾಲೆ-ಕಾಲೇಜು ಗಳು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದರು.ಐಡಿಎಸ್‌ಜಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಪುಷ್ಪಭಾರತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಓದು ಅಷ್ಟೇ ಆಗಿರದೆ ಪಠ್ಯದ ಜೊತೆಗೆ ಪಠ್ಯೇತರ ಸೇರಿಕೊಂಡಿರುವುದು ಇದೊಂದು ಸಂಯೋಜನೆಯಾಗಿರುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಪ್ರಪಂಚ ಸ್ಪರ್ಧಾಳುಗಳನ್ನು ನಿರೀಕ್ಷೆ ಮಾಡುತ್ತಿದೆ ಎಂದು ಹೇಳಿದರು.
ಹಿಂದೆ ಬಿದ್ದರೆ ಮುಂದೆ ತರುವವರಿಲ್ಲ. ಮುಂದೆ ಇದ್ದರೆ ಹಿಂದಕ್ಕೆ ತಳ್ಳುವವರು ಈ ಕಾಲಘಟ್ಟದಲ್ಲಿ ಇರುವಾಗ ನಮ್ಮ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಇದು ವಿದ್ಯಾರ್ಥಿ ಜೀವನದಲ್ಲೇ ಅಂದರೆ ಚಿಕ್ಕಂದಿನಿಂದಲೇ ರೂಡಿಸಿ ಕೊಳ್ಳಬೇಕು. ಇದಕ್ಕೆ ಪಠ್ಯೇತರ ಚಟುವಟಿಕೆಗಳು ಪೂರಕ ಎಂದರು.ಸಮಾಜದಲ್ಲಿ ಕಡೆಗಣನೆಗೆ ಒಳಗಾಗಿರುವ ಸಮುದಾಯದ ಮಹಿಳೆಯರನ್ನು ಅವರ ಜೀವನದಲ್ಲಿ ಅಸ್ಮಿತೆ ಕಂಡುಕೊಳ್ಳಲು ಸಹಾಯ ಮಾಡುವುದು ನಮ್ಮ ಗುರುತು. ಅದಕ್ಕೆ ಸಮರ್ಥವಾದ ಸಾಧನ ಶಿಕ್ಷಣ ಎಂದು ವಿಶ್ಲೇಷಿಸಿದರು.
ಇಂತಹ ಶಿಕ್ಷಣ ಮಹಿಳೆಗೆ ಖಂಡಿತವಾಗಿ ಅಗತ್ಯವಾಗಿದ್ದು, ಇಂದು ನಾನಾ ರೀತಿಯಲ್ಲಿ ಶಿಕ್ಷಣ ವಂಚಿತರನ್ನು ಗುರುತಿಸು ತ್ತೇವೆ, ಗಾರೆ ಕೆಲಸ, ಹೋಟೆಲ್ ಕೆಲಸ, ಮನೆ ಕೆಲಸ ಮಾಡುವ ಮಹಿಳೆಗೆ ಪ್ರಾಥಮಿಕ ಶಿಕ್ಷಣ ಸಿಕ್ಕಿರಬಹುದು ಅಥವಾ ಸಿಗದೆಯೇ ಇರಬಹುದು. ಉನ್ನತ ಶಿಕ್ಷಣ ದೊರೆತಿದ್ದರೆ ಈ ರೀತಿ ಕೆಲಸಗಳಿಗೆ ಮಹಿಳೆ ಹೋಗುತ್ತಿರಲಿಲ್ಲ ಎಂದು ಹೇಳಿದರು.ಶ್ರಮಶಕ್ತಿ ಹಿಂದೆ ಶಿಕ್ಷಣ ತ್ಯಾಗ ಮಾಡಿದ ಒಂದು ವಿಚಾರವನ್ನು ಸದಾ ಗಮನಿಸುತ್ತಿರಬೇಕು. ಮಹಿಳೆಗೆ ತನ್ನ ಅಸ್ಮಿತೆ ಕಂಡುಕೊಳ್ಳಲು ಶಿಕ್ಷಣ ಬಹಳ ದೊಡ್ಡ ಸಾಧನ, ಅದನ್ನು ನಿಮ್ಮ ಪೋಷಕರು, ಹಿರಿಯರು ನಿಮ್ಮ ಕೈಯಲ್ಲಿಟ್ಟಿದ್ದಾರೆ. ಅದನ್ನು ಅರ್ಥಪೂರ್ಣಗೊಳಿಸಿ ಬೆಳೆಸಿಕೊಂಡು ಹೋಗಬೇಕೆಂಬುದು ನಮ್ಮ ಆಶಯ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಡಾ. ಎಚ್.ಎಸ್ ಸತ್ಯನಾರಾಯಣ, ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟ ನಾಯ್ಕ, ಗಣಿತ ಉಪನ್ಯಾಸಕ ಚಂದ್ರಮೌಳಿ, ನಿವೃತ್ತ ಪ್ರಾಚಾರ್ಯರಾದ ಎಸ್.ಜಿ. ಸಾವಿತ್ರಿ, ಜೆ.ಎಸ್. ದಯಾ ನಂದ್, ಶಭಾನಬಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ , ಪ್ರಾಂಶುಪಾಲ ಕೆ.ಜಿ. ಸತೀಶ್ ಶಾಸ್ತ್ರಿ ಉಪಸ್ಥಿತರಿದ್ದರು. 13 ಕೆಸಿಕೆಎಂ 3ಚಿಕ್ಕಮಗಳೂರಿನ ಬಸವನಹಳ್ಳಿ ಬಾಲಿಕ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಪುಟ್ಟನಾಯ್ಕ, ಸತೀಶ್ ಶಾಸ್ತ್ರಿ ಇದ್ದರು.