- ಹರಿಹರದಲ್ಲಿ ಯುವ ಪರಿವರ್ತನೆ ಯಾತ್ರೆಗೆ ಸ್ವಾಗತಿಸಿ ಪಿ.ಜೆ.ಮಹಾಂತೇಶ್
- - -ಕನ್ನಡಪ್ರಭ ವಾರ್ತೆ ಹರಿಹರ
ಆಡಳಿತ ನಡೆಸುವ ಸರ್ಕಾರ ಯಾವುದೇ ಪಕ್ಷದಿದ್ದರೂ, ಜನರು ಜಾಗೃತವಾಗಿದ್ದರೆ ಮಾತ್ರ ಜನಪರ ಆಡಳಿತ ಪಡೆಯಲು ಸಾಧ್ಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಹೇಳಿದರು.ಜನಸಾಮಾನ್ಯರ ವೇದಿಕೆಯಿಂದ ಬೀದರ್‌ನಿಂದ ಬೆಂಗಳೂರಿಗೆ ಹೊರಟ ಯುವ ಪರಿವರ್ತನೆ ಯಾತ್ರೆ ಗುರುವಾರ ನಗರಕ್ಕೆ ಆಗಮಿಸಿದ ವೇಳೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನರು ಮೈ ಮರೆತರೆ ಸರ್ಕಾರ ಸಹಜವಾಗಿ ಶೋಷಣೆ ಮಾಡುತ್ತದೆ. ಸಂವಿಧಾನ ಮತ್ತು ಕಾನೂನುಗಳ ಅನ್ವಯ ಸರ್ಕಾರ ಆಡಳಿತ ನೀಡುತ್ತಿದೆಯೇ ಎಂಬುದನ್ನು ಪರೀಕ್ಷೆಗೆ ಒಳಪಡಿಸುವ ಕಾರ್ಯ ಮಾಡುವ ಜನರಿದ್ದರೆ ದುರಾಡಳಿತ ಸಾಧ್ಯವಿಲ್ಲ ಎಂದರು.
ದ್ರಾವಿಡ ಕನ್ನಡಿಗರು ಚಳವಳಿಯ ಮುಖಂಡ ಮಂಡ್ಯದ ಅಭಿ ಗೌಡ ಒಕ್ಕಲಿಗ ಮಾತನಾಡಿ, ವಿವಿಧ ಆಕರ್ಷಣೆಗಳಲ್ಲಿ ತಲ್ಲೀನರಾಗಬೇಕಿದ್ದ ಯುವಕರು ೧೨೦೦ ಕಿ.ಮೀ. ಯಾತ್ರೆ ಹಮ್ಮಿಕೊಂಡು ಜನಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಯುವಕರು ಕ್ರಿಯಾಶೀಲ ಹಾಗೂ ವೈಚಾರಿಕತೆ ಬೆಳೆಸಿಕೊಂಡಲ್ಲಿ ಮಾತ್ರ ಈ ನಾಡಿಗೆ ಉತ್ತಮ ಭವಿಷ್ಯವಿದೆ ಎಂದರು.ಯಾತ್ರೆಯ ಪ್ರಧಾನ ಸಂಚಾಲಕ ಮುಧೋಳದ ಯಲ್ಲಪ್ಪ ಹೆಗಡೆ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ, ಶಿಕ್ಷಣ ನಮ್ಮ ಹಕ್ಕು- ವ್ಯವಹಾರವಲ್ಲ. ಕೆಪಿಎಸ್‌ಸಿ ಮತ್ತು ನೇಮಕಾತಿ ಪ್ರಾಧಿಕಾರಗಳಿಂದ ಸಕಾಲಿಕ ನೇಮಕಾತಿ ಆಗಬೇಕು. ಕೈಗಾರಿಕೆ ನಮ್ಮಲ್ಲಿದ್ದರೆ- ಕೆಲಸವೂ ನಮ್ಮ ಕೈಯಲ್ಲಿ. ಸರ್ಕಾರಿ ಉದ್ಯೋಗ ಖಾಲಿ ಬೇಡ. ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ, ತಾಲೂಕಿಗೆ ಸುಸಜ್ಜಿತ ಆಸ್ಪತ್ರೆ, ರೈತರಿಗೆ ಉಚಿತ ವಿದ್ಯುತ್, ಕೃಷಿ ಉತ್ಪನ್ನಕ್ಕೆ ಬೆಲೆ ಖಾತ್ರಿ, ರೈತನಿಗೆ ಬೀಜದ ದಾಸೋಹ, ಸಂತ್ರಸ್ಥರಿಗೆ ನ್ಯಾಯ, ಸರಾಗ ಸಾರಿಗೆ ವ್ಯವಸ್ಥೆ, ಮೀಸಲಾತಿ ಹಕ್ಕು, ಸಮಾನತೆಯಂತಹ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕೈಗೊಂಡ ಈ ಯಾತ್ರೆ ಅ.೧೩ ರಂದು ಬೆಂಗಳೂರಿಗೆ ತಲುಪಲಿದೆ ಎಂದರು.
- - --09HRR.01:
ಜನಸಾಮಾನ್ಯರ ವೇದಿಕೆಯಿಂದ ಬೀದರ್‌ನಿಂದ ಬೆಂಗಳೂರಿಗೆ ಹೊರಟ ‘ಯುವ ಪರಿವರ್ತನೆ ಯಾತ್ರೆ’ ಗುರುವಾರ ಹರಿಹರಕ್ಕೆ ಆಗಮಿಸಿದಾಗ ಗಾಂಧಿ ಸರ್ಕಲ್‌ನಲ್ಲಿ ಸ್ವಾಗತಿಸಲಾಯಿತು.