ಬ್ಯಾಡಗಿ: ಆಹಾರ ಪದ್ಧತಿ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡದೇ ಉತ್ತಮ ಆರೋಗ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕ ದಿ. ಬಿ.ಎಚ್. ಬಡ್ಡಿ ಅವರ ಸ್ಮರಣಾರ್ಥ ಜಿಲ್ಲಾ ರಕ್ತನಿಧಿ ಕೇಂದ್ರ ಹಾವೇರಿ, ವೈದ್ಯಕೀಯ ವಿಜ್ಞಾನ(ಹಿಮ್ಸ್) ಹಾವೇರಿ ಹಾಗೂ ಬಿಇಎಸ್ ಶಾಲೆಯ 2003- 04ನೇ ಸಾಲಿನ ವಿದ್ಯಾರ್ಥಿಗಳ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.ಆರೋಗ್ಯವೇ ಭಾಗ್ಯ ಹಾಗೂ ನಮ್ಮ ಸಂಪತ್ತು. ಅದರಲ್ಲಿ ಯಾವುದೇ ಅನುಮಾನವಿಲ್ಲ. ಹಣ ಗಳಿಸಿದ ರೀತಿಯಲ್ಲಿಯೇ ಆರೋಗ್ಯವನ್ನು ಕೂಡ ಕಷ್ಟಪಟ್ಟು ಗಳಿಸಿಕೊಳ್ಳಬೇಕು. ಒಬ್ಬ ವ್ಯಕ್ತಿಯು ಸುಂದರ ಬದುಕನ್ನು ನಿರ್ವಹಿಸುವ ಪ್ರಮುಖ ವಿಷಯಗಳಲ್ಲಿ ಆರೋಗ್ಯ ಮೊದಲ ಸ್ಥಾನದಲ್ಲಿದೆ. ಆದರೆ ಇತ್ತೀಚೆಗೆ ಒತ್ತಡ ಜೀವನ ಎಲ್ಲರನ್ನು ರೋಗಗಳಿಗೆ ತುತ್ತಾಗುವಂತೆ ಮಾಡಿದೇವೆಂದು ಖೇದ ವ್ಯಕ್ತಪಡಿಸಿದರು.
ಡಾ. ಎಸ್.ಎನ್. ನಿಡಗುಂದಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸಮತೋಲನ ಕಳೆದುಕೊಂಡ ವ್ಯಕ್ತಿ ತನ್ನ ಎಂದಿನ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲರಾಗಿರಲು ಸಾಧ್ಯವಿಲ್ಲ. ಹೀಗಾಗಿ ಉತ್ತಮ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ರೋಗ ಬಂದ ಬಳಿಕ ಉಪಚರಿಸುವುದಕ್ಕಿಂತ ಬರದಂತೆ ಎಚ್ಚರಿಕೆ ವಹಿಸುವುದು ಸೂಕ್ತ. ಇತ್ತೀಚಿನ ಜಂಕ್‌ಫುಡ್, ಮದ್ಯ ಹಾಗೂ ಧೂಮಪಾನಗಳು ನಮ್ಮ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮಗಳನ್ನು ಬೀರುತ್ತಿವೆ ಎಂದ ಅವರು, ಯಾವುದಕ್ಕೂ ಕನಿಷ್ಠ 3 ತಿಂಗಳಿಗೊಮ್ಮೆ ರಕ್ತದೊತ್ತಡ(ಬಿಪಿ) ಮಧುಮೇಹ(ಶುಗರ್) ಸೇರಿದಂತೆ ನಮ್ಮ ದೇಹದಲ್ಲಿರುವ ರಕ್ತವನ್ನು ಪರೀಕ್ಷಿಸಿಕೊಳ್ಳುವಂತೆ ಸಲಹೆ ನೀಡಿದರು.ಶಿಬಿರದಲ್ಲಿ ಒಟ್ಟು 70 ಜನ ರಕ್ತದಾನ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಜಿಲ್ಲಾ ರಕ್ತನಿಧಿ ಕೇಂದ್ರದ ಬಸವರಾಜ ತಳವಾರ, ಎಸ್.ಆರ್. ಪಾಟೀಲ, ಎಂ.ಎನ್. ಉಮಾಪತಿ, ಯು.ಎನ್. ಛತ್ರದ, ಸಿ.ಎಚ್. ಹೀರೆಮಠ, ಪ್ರವೀಣ ಆಲದಗೇರಿ, ಮಲ್ಲಿಕಾರ್ಜುನ, ಪ್ರವೀಣ ಮುಳಗುಂದ, ಸಿ.ಎಚ್. ಮೋಹನಕುಮಾರ, ಡಾ. ದೀಪಕ್ ಸೂಡಿ, ಡಾ. ಸಂತೋಷ ಪಾಟೀಲ ಹಾಗೂ 2003- 04ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಸತಿ ಶಾಲೆಗೆ ಶೇ. 100 ಫಲಿತಾಂಶ
ರಾಣಿಬೆನ್ನೂರು: ಕಳೆದ ಮಾರ್ಚ್/ ಏಪ್ರಿಲ್ ತಿಂಗಳಿನಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ರೇಣುಕಾ ಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆಗೆ ಶೇ. 100ರಷ್ಟು ಫಲಿತಾಂಶ ಲಭಿಸಿದೆ.ಒಟ್ಟು 16 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಆದರ್ಶ ಓಲೇಕಾರ ಶೇ. 76.23 ಶಾಲೆಗೆ ಪ್ರಥಮ, ಮಧುಶ್ರೀ ಪಿಸೆ ಶೇ. 70.35 ದ್ವಿತೀಯ ಹಾಗೂ ಮಹೇಶ ಹುಡೇದ ಶೇ. 67.50 ತೃತೀಯ ಸ್ಥಾನ ಗಳಿಸಿದ್ದಾರೆ.