ಸ್ಪಂದನ ಸಂಸ್ಥೆಯ ಕೆಲಸ ಇತರರಿಗೆ ಮಾದರಿ: ಡಾ. ಮಣಿಕಾಂತ್

KannadaprabhaNewsNetwork | Published : May 8, 2025 12:33 AM

ಸಾರಾಂಶ

ಕೊಪ್ಪ, ಸ್ಪಂದನ ಸಂಸ್ಥೆ ಕಳೆದ ಕೋವಿಡ್ ಸಂದರ್ಭದಿಂದಲೂ ವೈದ್ಯಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಇಂದು ಕರಾಟೆ ಶಿಬಿರ ಆಯೋಜಿಸುವ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ತನ್ನ ಕೆಲಸ ಆರಂಭಿಸಿದೆ. ಇಂತಹ ಸಂಸ್ಥೆಗಳ ಕೆಲಸವನ್ನು ಮಾದರಿಯಾಗಿಟ್ಟುಕೊಂಡು ಯುವಕರ ಗುಂಪು ಸಮಾಜ ಕಾರ್ಯದಲ್ಲಿ ತೊಡಗಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬಸರೀಕಟ್ಟೆ ಪಶು ವೈದ್ಯಾಧಿಕಾರಿ ಡಾ. ಮಣಿಕಾಂತ್ ಹೇಳಿದರು.

ಕರಾಟೆ, ಯೋಗ ಶಿಬಿರ ಸಮಾರೋಪ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕೊಪ್ಪ

ಸ್ಪಂದನ ಸಂಸ್ಥೆ ಕಳೆದ ಕೋವಿಡ್ ಸಂದರ್ಭದಿಂದಲೂ ವೈದ್ಯಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಇಂದು ಕರಾಟೆ ಶಿಬಿರ ಆಯೋಜಿಸುವ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ತನ್ನ ಕೆಲಸ ಆರಂಭಿಸಿದೆ. ಇಂತಹ ಸಂಸ್ಥೆಗಳ ಕೆಲಸವನ್ನು ಮಾದರಿಯಾಗಿಟ್ಟುಕೊಂಡು ಯುವಕರ ಗುಂಪು ಸಮಾಜ ಕಾರ್ಯದಲ್ಲಿ ತೊಡಗಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬಸರೀಕಟ್ಟೆ ಪಶು ವೈದ್ಯಾಧಿಕಾರಿ ಡಾ. ಮಣಿಕಾಂತ್ ಹೇಳಿದರು. ಜಯಪುರದ ಸಹಿಪ್ರಾ ಶಾಲೆ ಮೈದಾನದಲ್ಲಿ ಸ್ಪಂದನ ಸ್ವಯಂಸೇವಾ ಸಂಸ್ಥೆ, ಐಡಿಯಲ್ ಸ್ಪೋರ್ಟ್ಸ ಮಾರ್ಷಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಯಪುರ ವಲಯ ಸಹಯೋಗದಲ್ಲಿ ಸೋಮವಾರ ನಡೆದ ಉಚಿತ ಕರಾಟೆ ಹಾಗೂ ಯೋಗ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. 15 ದಿನಗಳ ಅವಧಿಯಲ್ಲಿ ಶಿಬಿರಾರ್ಥಿಗಳು ಸಾಕಷ್ಟು ಕರಾಟೆ, ದೊಣ್ಣೆವರಸೆ ಪ್ರಯೋಗಗಳನ್ನು ಕಲಿತಿದ್ದು, ನಿರಂತರ ಅಭ್ಯಾಸದ ಮೂಲಕ ಕರಾಟೆ ಕರಗತ ಮಾಡಿಕೊಂಡರೆ ಅನುಕೂಲವಾಗಲಿದೆ. ನಗರ ಪ್ರದೇಶಗಳಲ್ಲಿ ಸಾವಿರಾರುರು. ಶುಲ್ಕ ನೀಡಿ ಕಲಿಯುವ ಕರಾಟೆಯನ್ನು ಸ್ಪಂದನ ಸಂಸ್ಥೆ ಉಚಿತವಾಗಿ ನೀಡಿದೆ ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದರು.ಜಯಪುರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಅಂಬರೀಶ್ ಮಾತನಾಡಿ, ಕರಾಟೆ ಕೇವಲ ಆತ್ಮರಕ್ಷಣೆಗೆ ಸೀಮಿತವಲ್ಲ, ಇದರಿಂದ ಏಕಾಗ್ರತೆ, ವ್ಯಕ್ತಿತ್ವವಿಕಸನ, ಮಾನಸಿಕ ಸದೃಢತೆ ಹಾಗೂ ನಾಯಕತ್ವದ ಗುಣ ಬೆಳೆಯಲಿದೆ. ಉಚಿತ ಕರಾಟೆ ಶಿಬಿರ ಆಯೋಜಿಸಿರುವ ಜಯಪುರದ ಸ್ಪಂದನ ಸಂಸ್ಥೆ ಕಾರ್ಯ ಅಭಿನಂದನೀಯ. ಕರಾಟೆಯನ್ನು ವಿದ್ಯಾರ್ಥಿಗಳು ಅಗತ್ಯವಾಗಿ ಕಲಿಯಬೇಕು. ಇದರಿಂದ ಹತ್ತಾರು ಲಾಭಗಳಿವೆ. ಅದನ್ನು ಇಲ್ಲಿನ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದರು.

ನಂತರ ಸ್ಪಂದನ ಸಂಸ್ಥೆ ಅದ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್ ಮಾತನಾಡಿ, ಇಂದಿನ ದಿನಗಳಲ್ಲಿ ಸಮಾಜಘಾತುಕ ಶಕ್ತಿಗಳ ಉಪಟಳ ಹೆಚ್ಚಿದ್ದು, ಕೊಲೆ ಸುಲಿಗೆ ಮಿತಿ ಮೀರಿವೆ. ಪುಟ್ಟ ಮಕ್ಕಳಿಂದ ಹಿಡಿದು ಮಹಿಳೆಯರ ಮೇಲಿನ ದೌರ್ಜನ್ಯ ಜಾಸ್ತಿ ಯಾಗಿದೆ. ಇಂತಹ ಸಂಧರ್ಭದಲ್ಲಿ ಕರಾಟೆಯಂತಹ ಸಮರ ಕಲೆ ಗೊತ್ತಿದ್ದರೆ ಆಯುಧವಿಲ್ಲದೆ ಆಕ್ರಮಣಕಾರಿಗಳನ್ನು ಎದುರಿಸುವ ಜೊತೆಗೆ ತಮ್ಮನ್ನು ರಕ್ಷಿಸಿಕೊಳ್ಳಬಹುದು. ಮೂರು ವರ್ಷಗಳಲ್ಲಿ ಈ ಭಾಗದ ಇನ್ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳು ಹಾಗೂ ನೂರಕ್ಕೂ ಹೆಚ್ಚು ಗಂಡು ಮಕ್ಕಳಿಗೆ ಯಾವುದೇ ಶುಲ್ಕ ಪಡೆಯದೆ ಕರಾಟೆ ಉಚಿತ ತರಬೇತಿ ನೀಡಿದ್ದೇವೆ ಎಂದರು.. ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ, ಪದಕಗಳನ್ನು ವಿತರಿಸಲಾಯಿತು. ಕರಾಟೆ ಶಿಕ್ಷಕ ಮಣಿಕಂಠ ಹಾಗೂ ಸಹ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಉಪಾಧ್ಯಕ್ಷ ಗುರುಸ್ವಾಮಿ, ಜಯಪುರ ಗ್ರಾಪಂ ಅಧ್ಯಕ್ಷ ಕರುಣಾಕರ, ಕರಾಟೆ ಶಿಕ್ಷಕ ಮಣಿಕಂಠ, ಐಡಿಯಲ್ ಸ್ಪೋರ್ಟ್ಸ ಮಾರ್ಷಲ್ ಆರ್ಟ್ಸ ಕರಾಟೆ ಅಸೋಸಿಯೇಷನ್ ಕಾರ್ಯದರ್ಶಿ ವಿಶ್ವನಾಥ್ ಎಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮನೋಹರ್, ಮುಖಂಡರಾದ ಕೀರ್ತಿರಾಜ್ ಗುಡ್ಡೇತೋಟ, ಕೌಳಿ ರಾಮು, ಎಚ್.ಎಮ್. ಸತೀಶ್, ಸ್ಪಂದನ ಸಂಸ್ಥೆಯ ಸುಶ್ಮಿತ ಮಕ್ಕಿಕೊಪ್ಪ, ಹರೀಶ್ ವಿನಾಯಕನಗರ, ಮನೋಹರ್ ಇತರರಿದ್ದರು.

Share this article