ಕನ್ನಡಪ್ರಭ ವಾರ್ತೆ ಮಳವಳ್ಳಿ
ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಮಹೇಂದ್ರ ಸಲಹೆ ನೀಡಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪುರಸಭೆ,ಅರಣ್ಯ ಇಲಾಖೆ ಆಶ್ರಯದಲ್ಲಿ ನಡೆದ ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಹಲವಾರು ಸಾಂಕ್ರಮಿಕ ರೋಗಗಳು ಹರಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸ್ವಚ್ಛತೆ ಬಗ್ಗೆ ಎಚ್ಚರಕೆ ವಹಿಸಿದರೇ ಮಾತ್ರ ರೋಗದಿಂದ ಮುಕ್ತಿ ಪಡೆಯಲು ಸಾಧ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್ ಮಾತನಾಡಿ, ಅಶುಚಿತ್ವ ಹೊಂದಿರುವ ಪ್ರದೇಶಗಳಲ್ಲಿ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗಿ ಡೆಂಘೀ, ಮಲೇರಿಯಾ ಸೇರಿದಂತೆ ಇತರೆ ಸಾಂಕ್ರಮಿಕ ಮಾರಕ ರೋಗ ಹರಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.ನಾವು ಹೇಗೆ ಪ್ರತಿನಿತ್ಯ ಸ್ವಚ್ಛವಾಗಿರುತ್ತೇವೋ ಅದೇ ರೀತಿ ನಮ್ಮ ಮನೆ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡು ಉತ್ತಮ ಪರಿಸರ ಹೊಂದಬೇಕು. ಮನಸ್ಸು ಸುದ್ದಿಯಾದರೇ ಸಾಲದು, ವಾತಾವರಣವು ಚೆನ್ನಾಗಿದ್ದರೇ ನಾವು ಆರೋಗ್ಯವಾಗಿರುತ್ತೇವೆ ಎಂದರು.
ಯುವಕರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ, ತಮ್ಮ ಆಯಾ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡರೇ ಗ್ರಾಮವನ್ನು ಸುಂದರವಾಗಿ ನೋಡಬಹುದು, ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಅಧಿಕಾರ ವಹಿಸಿಕೊಂಡ ನಂತರ ದೊಡ್ಡಕೆರೆ ಪಾರ್ಕ್, ನ್ಯಾಯಾಲಯ, ಪಟ್ಟಣದ ಪಾರ್ಕಿಂಗ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ, ಪಟ್ಟಣವನ್ನು ಸುಂದರವಾಗಿಸುವುದರ ಜೊತೆಗೆ ಮೂಲ ಸೌಲಭ್ಯ ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್‌ಕುಮಾರ್ ಶಿವಪೂಜಿ, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಕಾವ್ಯಶ್ರೀ, ಸಹಾಯಕ ಸರ್ಕಾರಿ ಅಭಿಯೋಜಕರಾದ ಜೆ.ರವಿಸೆಂತಿಲ್, ಎಚ್.ಎಸ್.ಪೂರ್ಣಿಮಾ, ಕಾರ್ಯದರ್ಶಿ ನಟೇಶ್, ಅಪರ ಸರ್ಕಾರಿ ವಕೀಲ ಶ್ರೀಕಂಠಸ್ವಾಮಿ, ವಲಯ ಅರಣ್ಯ ಅಧಿಕಾರಿ ಗವಿಯಪ್ಪ, ಪುರಸಭೆ ಮುಖ್ಯಾಧಿಕಾರಿ ನಾಗರತ್ನ ವಕೀಲರಾದ ಮುತ್ತುರಾಜು, ಮಲ್ಲಪ್ಪ ಸೇರಿದಂತೆ ಇತರರು ಇದ್ದರು.