ಬ್ಯಾಡಗಿ: ಆರೋಗ್ಯವೇ ನಮ್ಮ ಸಂಪತ್ತು. ಅದರಲ್ಲಿ ಯಾವುದೇ ಅನುಮಾನವಿಲ್ಲ, ಒಬ್ಬ ವ್ಯಕ್ತಿಯು ಕಾಳಜಿ ವಹಿಸಬೇಕಾದ ಪ್ರಮುಖ ವಿಷಯಗಳಲ್ಲಿ ಆರೋಗ್ಯ ಮೊದಲ ಸ್ಥಾನದಲ್ಲಿದೆ. ಆದರೆ ಆಹಾರ ಪದ್ಧತಿ ಹಾಗೂ ದೈನಂದಿನ ದಿನಚರಿಗಳಲ್ಲಿ ಬದಲಾವಣೆ ಕಾಣದೇ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಶಿಡೇನೂರಿನಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ, ತಾಲೂಕಾಡಳಿತ, ತಾಲೂಕು ಪಂಚಾಯತ್ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಬ್ಯಾಡಗಿ, ಗ್ರಾಮ ಪಂಚಾಯತ್ ಶಿಡೇನೂರ ಹಾಗೂ ಎಚ್ಐವಿ ಪ್ರಿವೆನ್ಶನ್ ಸೊಸೈಟಿ ಸಂಯಕ್ತಾಶ್ರಯದಲ್ಲಿ ಜರುಗಿದ ಸಮಗ್ರ ಆರೋಗ್ಯ ತಪಾಸಣೆ ಹಾಗೂ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ದೈಹಿಕ ಮತ್ತು ಮಾನಸಿಕ ಸಮತೋಲನ ಕಳೆದುಕೊಂಡ ವ್ಯಕ್ತಿ ತನ್ನ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚು ಕ್ರೀಯಾಶೀಲರಾಗಿರಲು ಸಾಧ್ಯವಿಲ್ಲ. ಹೀಗಾಗಿ ಉತ್ತಮ ಆರೋಗ್ಯಕ್ಕೆ ನಾವು ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ ಎಂದರು.ದೀರ್ಘಕಾಲದ ರೋಗದಿಂದ ಮುಕ್ತರಾಗೋಣ: ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪುಟ್ಟರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರಿವೆನಶ್ನ್ ಇಸ್ ಬೆಟರ್ ದೆನ್ ಕ್ಯೂರ್ ಎಂಬ ಆಂಗ್ಲ ಉಕ್ತಿಯೊಂದು ಬಹಳಷ್ಟು ಚರ್ಚೆಗೆ ಕಾರಣವಾಗುತ್ತಿದೆ. ರೋಗ ಬಂದ ಬಳಿಕ ಉಪಚರಿಸುವುದಕ್ಕಿಂತ ಬರದಂತೆ ಎಚ್ಚರಿಕೆ ವಹಿಸುವುದು ಅತ್ಯಂತ ಸೂಕ್ತ, ಅಸುರಕ್ಷಿತ ಲೈಂಗಿಕ ಕ್ರಿಯೆ ಸೇರಿದಂತೆ ಇತ್ತೀಚಿನ ಜಂಕ್‌ಫುಡ್, ಮದ್ಯ ಹಾಗೂ ಧೂಮಪಾನಗಳು ನಮ್ಮ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮಗಳನ್ನು ಬೀರುತ್ತಿವೆ ಎಂದ ಅವರು, ಯಾವುದಕ್ಕೂ ಕನಿಷ್ಠ ಮೂರು ತಿಂಗಳಿಗೊಮ್ಮೆ ರಕ್ತದೊತ್ತಡ (ಬಿಪಿ) ಮಧುಮೇಹ (ಶುಗರ್) ಸೇರಿದಂತೆ ನಮ್ಮ ದೇಹದಲ್ಲಿರುವ ರಕ್ತವನ್ನು ಪರೀಕ್ಷಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸುಮಾರು 30ಕ್ಕೂ ಹೆಚ್ಚು ಯುವಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಗ್ರಾಪಂ ಅಧ್ಯಕ್ಷೆ ಬೀಬೀ ಆಯೀಷಾ, ಮಾಜಿ ಅಧ್ಯಕ್ಷ ಈರನಗೌಡ ತೆವರಿ, ಪಿಡಿಓ ಶಾರದಾ ಕುದರಿ, ಡಾ. ತಳವಾರ, ಆಪ್ತ ಸಮಾಲೋಚಕರಾದ ಡಿ.ಎನ್. ಚಂದ್ರಶೇಖರ, ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಮಮತಾ, ಪ್ರಯೋಗ ಶಾಲಾ ತಜ್ಞ ಶಶಿ ಶಿವಮೊಗ್ಗಿ, ಸಹನಾ ಓಲೇಕಾರ, ಗಂಗಮ್ಮ ಕಾರಗೇರ, ಸಹದೇವ ಚಿಕ್ಕಮಠ ಸೇರಿದಂತೆ ಇನ್ನಿತರರಿದ್ದರು.