ರಾಷ್ಟ್ರೀಯ ಪಂಚಾಯತ ರಾಜ್ ದಿನಾಚರಣೆ ಉದ್ಘಾಟನೆ
ಸರ್ಕಾರಿ ನೌಕರರು ಸದುದ್ದೇಶದಿಂದ ಮಾಡಿದ ಕೆಲಸಕ್ಕೆ ಕಾನೂನಿನಲ್ಲಿ ರಕ್ಷಣೆ ಇದ್ದು, ಇದರ ಪರಿಣಾಮ ಯಾವುದೇ ಅಡೆತಡೆ, ದೂರು ದಾಖಲಾದರೂ, ಜಯಿಸಿ ಬರಲು ಸಾಧ್ಯವಿದೆ ಎಂದು ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಹಾಗೂ ಉತ್ತರಕನ್ನಡ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ರವಿ ನಾಯ್ಕ ಹೇಳಿದರು.
ಭಟ್ಕಳ ತಾಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಪಂಚಾಯತ ರಾಜ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಲ್ಲಿ ತಾಳ್ಮೆ ಸೌಜನ್ಯ, ಪ್ರೀತಿಯ ಮನೋಭಾವ ಮುಖ್ಯವಾಗಿದ್ದು, ಹಳ್ಳಿಯಿಂದ ಬರುವ ಗ್ರಾಮೀಣ ವಾಸಿಗಳಿಗೆ ಅವರ ಭಾಷೆಯನ್ನು ಅರ್ಥೈಸಿಕೊಂಡು, ಅವರ ಭಾವನೆಗೆ ಒತ್ತು ನೀಡಿ ಸ್ಪಂದಿಸುವುದರಿಂದ ಕರ್ತವ್ಯಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ. ಪ್ರೊಬೆಷನರಿ, ಪ್ರಮೋಷನ್, ಪೆನ್ಷನ್ ಎಂಬ ಮೂರು ಹಂತದಲ್ಲಿ ಕಾರ್ಯನಿರ್ವಹಿಸುವ ನೌಕರರು ಪ್ರತಿ ಹಂತದಲ್ಲೂ ಎಚ್ಚರಿಕೆಯ ಹೆಜ್ಜೆ ಇಡುವುದು ಮುಖ್ಯವಾಗಿದ್ದು, ಯಾವುದೇ ವಿವಾದಕ್ಕೆ ಸಿಲುಕದೆ ವ್ಯಾಪ್ತಿಗೆ ಬಾರದ ವಿಷಯದ ಕುರಿತು ಪ್ರಮಾಣೀಕರಿಸದೇ ಮತ್ತು ಪ್ರತಿಕ್ರಿಯಿಸದೇ ವರ್ತಿಸುವುದು ಮುಖ್ಯವಾಗಿದೆ. ನಾಗರಿಕ ಅರ್ಜಿಗಳನ್ನು ವಿಳಂಬಿಸದೇ ಕ್ಲಪ್ತ ಸಮಯದಲ್ಲಿ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಆರಂಭದಲ್ಲೇ ಇತ್ಯರ್ಥ ಪಡಿಸುವುದನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಕರೆ ನೀಡಿದರು.
ಈ ಸಂದರ್ಭ ಪ್ರತಿಶತ ೧೦೦ ತೆರಿಗೆ ವಸೂಲಾತಿ ಮಾಡಿದ ತಾಲೂಕಿನ ೧೨ ಗ್ರಾಪಂ ಹಾಗೂ ಅತ್ಯುತ್ತಮ ಗ್ರಂಥಾಲಯ ಎಂದು ಆಯ್ಕೆಯಾದ ಬೆಂಗ್ರೆ ಗ್ರಂಥಾಲಯಕ್ಕೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ನಿವೃತ್ತರಾದ ಪಿಡಿಒ ಮಂಜು ಗೌಡ, ಕಾರ್ಯದರ್ಶಿ ಮಾರುತಿ ದೇವಡಿಗ, ಸಿಬ್ಬಂದಿ ರಾಮಾ ಗೊಂಡ ಅವರನ್ನು ಸನ್ಮಾನಿಸಲಾಯಿತು.
ಉಮೇಶ ಮುಂಡಳ್ಳಿ ಪ್ರಾರ್ಥಿಸಿದರು. ತಾಪಂ ವ್ಯವಸ್ಥಾಪಕ ಕರಿಯಪ್ಪ ನಾಯ್ಕ ಸ್ವಾಗತಿಸಿದರು. ಲೆಕ್ಕ ಸಹಾಯಕ ರಾಘವೇಂದ್ರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ನಿರ್ದೇಶಕ ಉದಯ ಬೋರ್ಕರ ವಂದಿಸಿದರು.