ಪ್ರತಿಭಾವಂತ ಮಕ್ಕಳಿಗೆ ಉತ್ತಮ ವೇದಿಕೆ, ಅವಕಾಶ

KannadaprabhaNewsNetwork |  
Published : Jun 11, 2024, 01:34 AM IST
10ಕೆಡಿವಿಜಿ1, 2, 3-ದಾವಣಗೆರೆ ಪೊಲೀಸ್ ಚಿಣ್ಣರ ಅಂಗಳ ಪ್ರೀ ಸ್ಕೂಲ್‌ನಲ್ಲಿ ಸೋಮವಾರ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸಕ್ಕೆ ಚಾಲನೆ ನೀಡಿದ ಎಸ್ಪಿ ಉಮಾ ಪ್ರಶಾಂತ ಮಕ್ಕಳಿಗೆ ಅಕ್ಷಾರಾಭ್ಯಾಸ ಮಾಡಿಸಿದರು. | Kannada Prabha

ಸಾರಾಂಶ

ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಕ್ಕಳಿಗೆ ಗುಣಮಟ್ಟದ ಮತ್ತು ಮೌಲ್ಯಾಧಾರಿದ ಶಿಕ್ಷಣ ನೀಡುವುದೇ ಪೊಲೀಸ್ ಚಿಣ್ಣರ ಅಂಗಳ ಶಾಲೆಯ ಮುಖ್ಯ ಉದ್ದೇಶ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಪಿಜೆ ಬಡಾವಣೆಯಲ್ಲಿ ಪೊಲೀಸ್ ಚಿಣ್ಣರ ಅಂಗಳ ಪ್ರೀ ಸ್ಕೂಲ್‌ನಲ್ಲಿ ಅಕ್ಷರಾಭ್ಯಾಸಕ್ಕೆ ಚಾಲನೆ ನೀಡಿ ಎಸ್‌ಪಿ ಉಮಾ ಪ್ರಶಾಂತ ಭರವಸೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಕ್ಕಳಿಗೆ ಗುಣಮಟ್ಟದ ಮತ್ತು ಮೌಲ್ಯಾಧಾರಿದ ಶಿಕ್ಷಣ ನೀಡುವುದೇ ಪೊಲೀಸ್ ಚಿಣ್ಣರ ಅಂಗಳ ಶಾಲೆಯ ಮುಖ್ಯ ಉದ್ದೇಶ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದರು.

ನಗರದ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮೀಪ ನೂತನ ಪೊಲೀಸ್ ಚಿಣ್ಣರ ಅಂಗಳ ಪ್ರೀ ಸ್ಕೂಲ್‌ನಲ್ಲಿ ಸೋಮವಾರ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಡಿಮೆ ಶುಲ್ಕದಲ್ಲಿ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಮಕ್ಕಳಿಗೆ ಗುಣಮಟ್ಟದ, ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ಪೊಲೀಸ್ ಚಿಣ್ಣರ ಅಂಗಳ ಸ್ಥಾಪಿಸಲಾಗಿದೆ. ನಮ್ಮ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಈ ಸೌಲಭ್ಯ ಸದುಪಯೋಗ ಪಡೆಯಬೇಕು ಎಂದರು.

ಪ್ರತಿ ಮಗುವಿನಲ್ಲೂ ಒಂದೊಂದು ವಿಶೇಷತೆ, ಸುಪ್ತ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ, ಅನಾವರಣಕ್ಕೆ ಪ್ರೋತ್ಸಾಹಿಸುವುದೇ ಶಿಕ್ಷಣದ ನಿಜವಾದ ಉದ್ದೇಶ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ, ಪ್ರೋತ್ಸಾಹಿಸಬೇಕು. ಪ್ರತಿಭಾನ್ವೇಷಣೆ ಜೊತೆಗೆ ಉತ್ತಮ ವೇದಿಕೆ, ಅವಕಾಶ ಕಲ್ಪಿಸುವುದು ಮುಖ್ಯ. ಅಂತಹ ಕೆಲಸವನ್ನು ಪೊಲೀಸ್ ಚಿಣ್ಣರ ಅಂಗಳ ಶಾಲೆ ಮಾಡಲಿದೆ ಎಂದು ಭರವಸೆ ನೀಡಿದರು.

ಗುಣಮಟ್ಟದ ಶಿಕ್ಷಣವನ್ನು ಸಾಧ್ಯವಾದಷ್ಟೂ ಕಡಿಮೆ ದರದಲ್ಲಿ ನೀಡಲು ಇಲಾಖೆ ಪ್ರಯತ್ನಿಸುತ್ತಿದೆ. "ಬೆಳೆಯುವ ಪೈರನ್ನು ಮೊಳಕೆಯಲ್ಲೇ ಕಾಣು " ಎಂಬ ಗಾದೆಮಾತಿದೆ. ಅದರಂತೆ ಬಾಲ್ಯದಲ್ಲಿ ನೀಡುವ ಶಿಕ್ಷಣ, ಸಂಸ್ಕಾರ, ಸದ್ಗುಣಗಳು, ಮೌಲ್ಯಗಳು ಮಕ್ಕಳಿಗೆ ಜೀವನದುದ್ದಕ್ಕೂ ಉಳಿಯುತ್ತವೆ. ಪಾಲಕರು ತಮ್ಮ ಮಕ್ಕಳನ್ನು ಉತ್ತಮವಾಗಿ ಬೆಳೆಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಪೊಲೀಸ್ ಚಿಣ್ಣರ ಅಂಗಳ ಶಾಲೆಯನ್ನು ಪುನರುಜ್ಜೀವನಗೊಳಿಸಲಾಗಿದೆ. ಕಿಂಡರ್ ಗಾರ್ಡನ್‌ವರೆಗೂ ಇಲ್ಲಿ ಶಿಕ್ಷಣ ಲಭ್ಯವಿದೆ. ಯುಕೆಜಿ ಪೂರ್ಣಗೊಂಡ ಬಳಿಕೆ ಮಕ್ಕಳನ್ನು ಹರಿಹರ ತಾಲೂಕಿನ ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆಗೆ ಸೇರಿಸುವುದಕ್ಕೂ ಅವಕಾಶ ಇರುತ್ತದೆ. ನೀಟ್ ಪರೀಕ್ಷೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ಮಗಳು 500ನೇ ರ್ಯಾಂಕ್ ಪಡೆದಿದ್ದಾರೆ. ಅದೇ ರೀತಿ ಎಲ್ಲ ಅಧಿಕಾರಿ, ಸಿಬ್ಬಂದಿ ಮಕ್ಕಳೂ ಶೈಕ್ಷಣಿಕ ಸಾಧನೆ ಮೂಲಕ ರಾಜ್ಯ, ದೇಶದ ಆಸ್ತಿಯಾಗಿ ರೂಪು ಹೊಂದಬೇಕು ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ನಗರ ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ನಿವೃತ್ತ ಪೊಲೀಸ್ ಅಧೀಕ್ಷಕ ರವಿನಾರಾಯಣ, ಡಿಎಆರ್‌ನ ಸೋಮಶೇಖರಪ್ಪ, ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆ ಪ್ರಾಚಾರ್ಯ ಯತೀಶ್ಚಂದ್ರ, ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಕುಟುಂಬದವರು ಹಾಗೂ ಮಕ್ಕಳು, ಶಾಲೆಯ ಶಿಕ್ಷಕಿಯರು ಇದ್ದರು.

- - -

ಬಾಕ್ಸ್‌ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಕ್ಕಳಿಗೆ ಉನ್ನತಮಟ್ಟದ ಶಿಕ್ಷಣ ನೀಡುವ ಮೂಲಕ ತಮಗಿಂತಲೂ ಉನ್ನತ ಹುದ್ದೆಗೆ ಏರಿಸಲು ಪ್ರಯತ್ನಿಸಬೇಕು. ನಾನಾ ಕಡೆ ಸಾಧನೆ ಮಾಡಿರುವಂತಹ ಪೊಲೀಸ್ ಸಿಬ್ಬಂದಿ ಮಕ್ಕಳನ್ನು ನಾವು ಕಾಣುತ್ತೇವೆ. ತಂದೆ ಕಾನ್‌ಸ್ಟೇಬಲ್ ಆಗಿದ್ದು, ಮಕ್ಕಳು ಐಎಎಸ್‌, ಐಪಿಎಸ್‌ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ, ಬಡವರ ಮಕ್ಕಳೂ ಅತ್ಯುತ್ತಮ ಸಾಧನೆ ಮೆರೆದಿರುವ ಸಾಲು ಸಾಲು ನಿದರ್ಶನಗಳು ಇವೆ. ಅವೆಲ್ಲವೂ ಮಕ್ಕಳು, ಪಾಲಕರು, ಇಲಾಖೆ ಸಿಬ್ಬಂದಿ, ಕುಟುಂಬಕ್ಕೂ ಪ್ರೇರಣೆಯಾಗಲಿ ಎಂದು ಉಮಾ ಪ್ರಶಾಂತ್‌ ತಿಳಿಸಿದರು.

- - - -10ಕೆಡಿವಿಜಿ1, 2, 3:

ದಾವಣಗೆರೆ ಪೊಲೀಸ್ ಚಿಣ್ಣರ ಅಂಗಳ ಪ್ರೀ ಸ್ಕೂಲ್‌ನಲ್ಲಿ ಸೋಮವಾರ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸಕ್ಕೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ