ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯಲ್ಲಿ ರೈಲ್ವೆ ಇಲಾಖೆಯಲ್ಲಿ ಅಭಿವೃದ್ಧಿಯ ಹೊಸ ಮುನ್ನುಡಿ ಬರೆಯಲು ಉತ್ಸುಕನಾಗಿದ್ದು, ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವರಾದ ವಿ.ಸೋಮಣ್ಣ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ನೈರುತ್ಯ ರೈಲ್ವೆ ಮತ್ತು ನಿರ್ಮಾಣ ಸಂಸ್ಥೆಯ ಹಿರಿಯ ಅಧಿಕಾರಿಗಳ ಜೊತೆ ಹಾಸನ - ಬೇಲೂರು - ಚಿಕ್ಕಮಗಳೂರು ಹೊಸ ರೈಲು ಮಾರ್ಗದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೀ ಹೆಚ್ಚು ಬಡವರೇ ಸಂಚಾರ ಮಾಡುವ ರೈಲ್ವೆ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಹೊಸ ರೈಲು ನಿಲ್ದಾಣಗಳ ಸ್ಥಾಪನೆ ಹಾಗೂ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಪ್ರಧಾನಿ ಮುಂದಾಗಿದ್ದಾರೆ. ಹಾಸನ ಜಿಲ್ಲೆಗೂ ಕೂಡ ರೈಲ್ವೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ಲಭ್ಯವಿದ್ದು, ಅದನ್ನು ಬಳಸಿಕೊಂಡು ಪ್ರಯಾಣಿಕರ ಅನುಕೂಲಕ್ಕೆ ಏನೆಲ್ಲಾ ಅಗತ್ಯ ಇದೆ ಅವುಗಳನ್ನು ಮಾಡಬೇಕಿದೆ. ಹಾಸನ - ಬೇಲೂರು - ಚಿಕ್ಕಮಗಳೂರು ನಡುವಿನ ರೈಲ್ವೆ ಮಾರ್ಗಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು, ಅಗತ್ಯ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಈಗಾಗಲೇ ಚಿಕ್ಕಮಗಳೂರು ಕಡೆಯಿಂದ ಕಾಮಗಾರಿ ಆರಂಭವಾಗಿದೆ. ಅಂತೆಯೇ ಹಾಸನ ಕಡೆಯಿಂದಲೂ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅದೇ ರೀತಿ ಹಾಸನದ ಕೆ. ಎಸ್.ಆರ್ .ಟಿ.ಸಿ ಹೊಸ ಬಸ್ ನಿಲ್ದಾಣದ ಎದುರಿನ ಮತ್ತೊಂದು ಮಾರ್ಗದ ಮೇಲ್ಸೇತುವೆ ಕಾಮಗಾರಿಯನ್ನು ರಾಜ್ಯ ಸರ್ಕಾರದ ಅನುದಾನಕ್ಕೆ ಕಾಯದೆ ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.ಹಾಸನ ಮತ್ತು ಅರಸೀಕೆರೆ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಆ ಕಾಮಗಾರಿಯನ್ನೂ ಶೀಘ್ರವೇ ಮುಗಿಸಲಾಗುವುದು. ಹಾಗೆಯೇ ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಶಾಸಕ ಎಚ್.ಕೆ.ಸುರೇಶ್, ಎಡಿಸಿ ಕೆ.ಟಿ.ಶಾಂತಲಾ ಮೊದಲಾದವರಿದ್ದರು. ಬಳಿಕ ಸಚಿವರು ಹಾಸನ ನಗರದ ರೈಲ್ವೆ ಮೇಲ್ಸೇತುವೆ ವೀಕ್ಷಿಸಿದ ಬಳಿಕ ಹಾಸನದ ರೈಲು ನಿಲ್ದಾಣದಿಂದ ರೈಲಿನಲ್ಲೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಸಭೆಯಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಎಚ್.ಕೆ. ಸುರೇಶ್, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.