ಉತ್ತಮ ಮಳೆ: ಕೊಡಗು ಕೃಷಿ ಚಟುವಟಿಕೆ ಬಿರುಸು

KannadaprabhaNewsNetwork | Published : Jul 14, 2024 1:42 AM

ಸಾರಾಂಶ

ಕಾಫಿ, ಕಾಳು ಮೆಣಸು ಕೃಷಿಯ ಜೊತೆಗೆ ಭತ್ತದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕೃಷಿಕರು ಅಲ್ಲಲ್ಲಿ ಗದ್ದೆ ಹದ ಮಾಡುವ ಕಾಯಕದಲ್ಲಿ ತೊಡಗಿರುವ ದೃಶ್ಯ ಕಂಡು ಬರುತ್ತಿವೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗಿನಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ನಾಪೋಕ್ಲು ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

ಕಾಫಿ, ಕಾಳು ಮೆಣಸು ಕೃಷಿಯ ಜೊತೆಗೆ ಭತ್ತದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕೃಷಿಕರು ಅಲ್ಲಲ್ಲಿ ಗದ್ದೆ ಹದ ಮಾಡುವ ಕಾಯಕದಲ್ಲಿ ತೊಡಗಿರುವ ದೃಶ್ಯ ಕಂಡು ಬರುತ್ತಿವೆ. ಬಹುತೇಕ ಕಡೆಗಳಲ್ಲಿ ಯಂತ್ರೋಪಕರಣಗಳನ್ನು ಬಳಸಿ ರೈತರು ಗದ್ದೆ ಹದ ಮಾಡುತ್ತಿದ್ದಾರೆ.ಕಳೆದ ಕೆಲವು ವರ್ಷಗಳಿಂದ ಭತ್ತದ ಕೃಷಿಯನ್ನು ರೈತರು ಕಡೆಗಣಿಸಿದ್ದರು. ಅಲ್ಲಲ್ಲಿ ಗದ್ದೆಗಳನ್ನು ಪಾಳು ಬಿಟ್ಟಿದ್ದರು. ಒಂದೆಡೆ ಪಾಳು ಬಿದ್ದ ಗದ್ದೆಗಳಲ್ಲಿ ಅಡಕೆ, ಬಾಳೆ, ಶುಂಠಿ ಕೃಷಿ ತಲೆಯೆತ್ತಿದೆ. ಈಗ ಭತ್ತಕ್ಕೂ ಉತ್ತಮ ಧಾರಣೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಕೃಷಿಯತ್ತಲೂ ರೈತರು ಚಿತ್ತ ಹರಿಸಿದ್ದಾರೆ.ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಕೆರೆ ತೋಡುಗಳಲ್ಲಿ ನೀರು ಹರಿಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಭತ್ತದ ಗದ್ದೆಯ ಉಳುಮೆ ಕಾರ್ಯ ನಡೆಯುತ್ತಿದೆ. ಅಲ್ಲಲ್ಲಿ ಭತ್ತದ ಬಿತ್ತನೆ ಮಾಡುವ ಮೂಲಕ ಕೃಷಿ ಕಾರ್ಯಕ್ಕೆ ರೈತರು ಚಾಲನೆ ನೀಡಿದ್ದಾರೆ. ಗದ್ದೆಯಲ್ಲಿ ಭತ್ತದ ಸಸಿ (ಅಗೆ) ತೆಗೆದು ನಾಟಿ ಕಾರ್ಯ ಭರದಿಂದ ನಡೆಯುತ್ತಿದೆ. ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಅಲ್ಲದೆ ಉಳಿದ ಭಾಗಗಳಲ್ಲೂ ಭತ್ತದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ..........................

ನಮ್ಮ ಹಿರಿಯರ ಕಾಲದಿಂದಲೇ ನಾವು ನಮ್ಮ ಕೊಡಗಿನ ಹಳೆಯ ಭತ್ತದ ತಳಿಗಳಾದ ರಾಜಮುಡಿ, ಬೀಟಿ, ಕರ್ತ ಬಿತ್ತನೆ ಮಾಡಿ ಸಾವಯವ ಗೊಬ್ಬರ ಬಳಸಿ ಗದ್ದೆ ಬೇಸಾಯ ಮಾಡುತ್ತಿದ್ದೇವೆ. ಮಾತ್ರವಲ್ಲದೆ ಯಂತ್ರೋಪಕರಣ ಬಳಸದೆ ನಮ್ಮ ಎರಡು ಜೊತೆ ಎತ್ತುಗಳಿಂದಲೇ ಗದ್ದೆ ಉಳುಮೆ ಮಾಡಿ ಬೇಸಾಯ ಮಾಡಲಾಗುತ್ತಿದೆ. ಅಗೆ (ಸಸಿ) ತೆಗೆಯಲು ಹಾಗೂ ನಾಟಿಗೆ ಮಾತ್ರ ನೆರೆಕೆರೆಯವರ ಸಹಕಾರ ಪಡೆಯುತ್ತಿದ್ದು ಉಳಿದ ಕೆಲಸಗಳನ್ನು ಪತ್ನಿ ಶಾರದಾ ಹಾಗೂ ಮಗ ರತನ್ ಜೊತೆ ಮಾಡುತ್ತೇನೆ. ಸಾಂಪ್ರದಾಯಿಕ ಭತ್ತದ ತಳಿಯನ್ನು ಬೆಳೆಸುತ್ತಾ ಬಂದಿರುವುದರಿಂದ ಪ್ರತಿ ವರ್ಷ ನಮಗೆ ಉತ್ತಮ ಇಳುವರಿ ಬರುತ್ತಿದೆ. ನಮ್ಮ ಉಪಯೋಗಕ್ಕೆ ಇಟ್ಟುಕೊಂಡು ಉಳಿದ ಭತ್ತವನ್ನು ಮಾರಾಟ ಮಾಡುತ್ತಿದ್ದೇನೆ. ಗದ್ದೆಗಳನ್ನು ಬಂಜರು ಬಿಡದೆ ಎಲ್ಲರೂ ತಮ್ಮ ತಮ್ಮ ಗದ್ದೆಗಳಲ್ಲಿ ಬೇಸಾಯ ಮಾಡುವುದರ ಮೂಲಕ ಅನ್ನದಾತರಾಗಬೇಕು.

-ಚಿಲ್ಲನ ಕುಮಾರಪ್ಪ (ಮನು), ಕುಯ್ಯಂಗೇರಿ, ಹೊದವಾಡ ಗ್ರಾಮ.

Share this article