ಸಂತೋಷ ದೈವಜ್ಞ
ಮುಂಡಗೋಡ: ತಾಲೂಕಿನಲ್ಲಿ ಈ ವರೆಗೂ ಕೃಷಿಗೆ ಪೂರಕ ಹದವಾದ ಉತ್ತಮ ಮಳೆಯಾಗಿದ್ದು, ರೈತ ಸಮುದಾಯವೀಗ ಭೂಮಿ ಹಸನುಗೊಳಿಸುವ ಕಾರ್ಯದಲ್ಲಿ ತೊಡಗಿಸಿದೆ. ಕೃಷಿ ಚಟುವಟಿಕೆ ಚುರುಕುಗೊಂಡಿದೆ.ಕಳೆದ ಬಾರಿ ಮಳೆ ಕೈಕೊಟ್ಟಿದ್ದರಿಂದ ರೈತರು ಬೆಳೆಹಾನಿ ಅನುಭವಿಸಿದ್ದರು. ಆದರೆ ಈ ಬಾರಿ ಅಡ್ಡ ಮಳೆ ಬೀಳುತ್ತಿದೆ. ರೈತರಲ್ಲಿ ಮಳೆಯ ಭರವಸೆ ಮೂಡಿದೆ. ಮುಂಗಾರು ಮಳೆ ಹಿಡಿದುಕೊಂಡರೆ ಬಿತ್ತನೆಗೆ ಹಿನ್ನಡೆಯಾಗುತ್ತದೆ, ಈಗ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣಗಿದೆ ಎಂಬ ಕಾರಣಕ್ಕೆ ರೈತರು ಈಗ ಭತ್ತ ಹಾಗೂ ಗೋವಿನಜೋಳ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ.
ತಾಲೂಕಿನಲ್ಲಿ ಹಿಂದೆಲ್ಲ ಶೇ. ೮೦ರಷ್ಟು ಭೂಮಿಯಲ್ಲಿ ಭತ್ತವನ್ನೇ ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಅನಾವೃಷ್ಟಿ ಎದುರಾಗಿದ್ದರಿಂದ ಗೋವಿನಜೋಳ ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲದಿರುವುದರಿಂದ ಬಹುತೇಕ ರೈತರು ಮಳೆಯಾಶ್ರಯಿಸಿಯೇ ವ್ಯವಸಾಯ ಮಾಡುತ್ತಾರೆ. ತಾಲೂಕಿನಲ್ಲಿ ಸುಮಾರು ೧೫೦೦೦ ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ೫೦೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ೫೦೦೦ ಹೆಕ್ಟೇರ್ ಗೋವಿನಜೋಳ, ೩೦೦೦ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಾರೆ. ಉಳಿದ ಪ್ರದೇಶದಲ್ಲಿ ಶುಂಠಿ, ಶೇಂಗಾ, ಹತ್ತಿ, ಸೋಯಾಬಿನ್ ಸೇರಿದಂತೆ ವಿವಿಧ ಬಗೆಯ ಬೆಳೆಗಳನ್ನು ರೈತರು ಬೆಳೆಯುತ್ತಾರೆ.ತಾಲೂಕಿನಲ್ಲಿ ಚಿಕ್ಕ ಹಿಡುವಳಿದಾರರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಳೆದ ಬಾರಿ ಕಡಿಮೆ ಪ್ರಮಾಣದಲ್ಲಿ ಮಳೆಯಾದ ಕಾರಣ ಭತ್ತ, ಗೋವಿನಜೋಳದ ಬೆಳೆ ಸಮರ್ಪಕವಾಗಿ ಇಳುವರಿ ಬರದೆ ರೈತರು ಹಾನಿ ಅನುಭವಿಸಿದ್ದರು. ಈ ಬಾರಿ ಸಮರ್ಪಕವಾದ ಹದ ಮಳೆಯಾದರೆ ಉತ್ತಮವಾದ ಇಳುವರಿ ಬೆಳೆ ಬರಬಹುದೆಂಬ ನಿರೀಕ್ಷೆಯಿಂದ ರೈತರು ಭೂಮಿಯನ್ನು ಹಸನಾಗಿಸಿ ಬಿತ್ತನೆಗೆ ಸಿದ್ಧಗೊಳಿಸುತ್ತಿದ್ದಾರೆ. ಟ್ರ‍್ಯಾಕ್ಟರ್ (ರೂಟರ್) ಹಾಗೂ ಜಾನುವಾರುಗಳ ಮೂಲಕ ನೇಗಿಲು ಹೊಡೆದು ಭೂಮಿಯನ್ನು ಹಸನಾಗಿಸುತ್ತಿದ್ದಾರೆ. ತಾಲೂಕಿನಲ್ಲಿ ಭತ್ತ ಬೆಳೆಗಾರರಿಂದ ಮೇ ತಿಂಗಳ ಅಂತ್ಯದೊಳಗೆ ಒಣಬಿತ್ತನೆ ನಡೆಯುತ್ತದೆ. ಮೃಗಶಿರಾ ಮಳೆ ಆರಂಭವಾಗುವ ಮೊದಲು ಒಣಭೂಮಿಯಲ್ಲಿ ಭತ್ತದ ಬೀಜ ಬಿತ್ತನೆ ಮಾಡುತ್ತಾರೆ. ಕೃಷಿಗೆ ಪೂರಕ: ಈ ವರೆಗೂ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ರೈತರಿಂದ ಈಗಾಗಲೇ ಶೇ. ೭೫ರಷ್ಟು ಭೂಮಿ ಹಸನುಗೊಳಿಸಿಕೊಳ್ಳುವ ಕಾರ್ಯ ಪೂರ್ಣಗೊಂಡಿದೆ. ಇನ್ನೊಂದು ವಾರದಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗಲಿದೆ. ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆ ಪ್ರಾರಂಭಿಸಲಾಗುತ್ತಿದ್ದು, ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ತಿಳಿಸಿದರು.ಶೀಘ್ರ ಬಿತ್ತನೆ: ಪ್ರಸಕ್ತ ಸಾಲಿನಲ್ಲಿ ಮಳೆ ಬರುವುದು ವಿಳಂಬವಾದರೂ ಭೂಮಿ ಹಸನುಗೊಳಿಸಿಕೊಳ್ಳಲು ಹಾಗೂ ಕೃಷಿ ಚಟುವಟಿಕೆಗೆ ಉತ್ತಮ ಹದ ನೀಡಿದ್ದು, ಬಿತ್ತನೆ ಕಾರ್ಯ ಶೀಘ್ರ ಪ್ರಾರಂಭಿಸಲಾಗುತ್ತಿದೆ. ಬಿತ್ತನೆ ನಂತರವೂ ಉತ್ತಮ ಮಳೆಯಾದರೆ ಫಸಲು ಕೈಗೆ ದಕ್ಕಲಿದೆ. ಈ ಬಾರಿ ಮಾವಿನ ಫಸಲು ಕೂಡ ಕಡಿಮೆಯಾಗಿದ್ದು, ಈ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ. ಇದರಿಂದ ಉತ್ತಮ ಮಳೆ ಅತ್ಯವಶ್ಯವಾಗಿದೆ ಎಂದು ರೈತ ಮುಖಂಡ ಮಹೇಶ ಹೊಸಕೊಪ್ಪ ತಿಳಿಸಿದರು.