ಉತ್ತಮ ಮಳೆ- ರೈಲ್ವೆ ಅಂಡರ್‌ಪಾಸ್‌ನಲ್ಲಿ ಸಂಚರಿಸಲು ವಾಹನ ಸವಾರರ ಪರದಾಟ

KannadaprabhaNewsNetwork | Published : May 16, 2025 1:50 AM

ಸಂಡೂರು ಸುತ್ತಮುತ್ತ ಗುರುವಾರ ನಸುಕಿನಲ್ಲಿ ಉತ್ತಮ ಮಳೆಯಾಗಿದೆ. ಸುರಿದ ಮಳೆ ಇಳೆಯನ್ನು ತಂಪಾಗಿಸಿದೆ. ಸಂಡೂರಿನ ನಾರಿಹಳ್ಳಕ್ಕೆ ನೀರು ಹರಿದು ಬಂದಿದೆ.

ಕನ್ನಡಪ್ರಭ ವಾರ್ತೆ ಸಂಡೂರು

ಸಂಡೂರು ಸುತ್ತಮುತ್ತ ಗುರುವಾರ ನಸುಕಿನಲ್ಲಿ ಉತ್ತಮ ಮಳೆಯಾಗಿದೆ. ಸುರಿದ ಮಳೆ ಇಳೆಯನ್ನು ತಂಪಾಗಿಸಿದೆ. ಸಂಡೂರಿನ ನಾರಿಹಳ್ಳಕ್ಕೆ ನೀರು ಹರಿದು ಬಂದಿದೆ.

ತಾಲೂಕಿನ ಯಶವಂತನಗರ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಬರುವ ರೈಲ್ವೆ ಅಂಡರ್ ಪಾಸ್‌ನಲ್ಲಿ ಮೊಣಕಾಲುದ್ದದಷ್ಟು ಮಳೆ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಅಲ್ಲಿ ವಾಹನ ಚಲಾಯಿಸಲು ಪರದಾಡುವಂತಾಯಿತು.

ಯಶವಂತನಗರದಲ್ಲಿನ ರೈಲ್ವೆ ಅಂಡರ್ ಪಾಸ್‌ನಲ್ಲಿ ಮಳೆ ನೀರು ತುಂಬಿಕೊಂಡು, ಅಲ್ಲಿ ವಾಹನ ಸವಾರರು ಸಂಚರಿಸಲು ಪರದಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ನೀರು ತುಂಬಿದ ರೈಲ್ವೆ ಅಂಡರ್ ಪಾಸನ್ನು ಕೆಲವರು ಮಾರ್ಡನ್ ಸ್ವಿಮ್ಮಿಂಗ್ ಪೂಲ್ ಎಂದು ಲೇವಡಿ ಮಾಡಿದರು.

ಇಲ್ಲಿನ ರೈಲ್ವೆ ಅಂಡರ್ ಪಾಸ್‌ನಲ್ಲಿ ಮಳೆ ಬಂದರೆ ನೀರು ತುಂಬಿಕೊಂಡು ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಇಲ್ಲಿ ದೊಡ್ಡ ಗಾತ್ರದ ವಾಹನಗಳು ಸಂಚಾರಕ್ಕೆ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಇದಕ್ಕೆ ಸಮಾನಾಂತರವಾಗಿ ಮತ್ತೊಂದು ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆಯಾದರೂ, ಇನ್ನೂ ಕಾರ್ಯಗತವಾಗಿಲ್ಲ. ಹೀಗಾಗಿ ಮಳೆ ಬಂತೆಂದರೆ, ಯಶವಂತನಗರದ ರೈಲ್ವೆ ಅಂಡರ್ ಪಾಸ್ ಬಳಿಯಲ್ಲಿ ವಾಹನ ಸವಾರರು ಸಂಚಾರಕ್ಕೆ ಪರದಾಡುವುದು ಸಾಮಾನ್ಯವೆನ್ನುವಂತಾಗಿದೆ.

ಮಳೆ ವಿವರ:

ಸಂಡೂರು, ಕುರೆಕುಪ್ಪ ಹಾಗೂ ವಿಠಲಾಪುರ ಮಳೆ ಮಾಪನ ಕೇಂದ್ರಗಳಲ್ಲಿ ಗುರುವಾರ ಕ್ರಮವಾಗಿ ೧೦.೮ ಮಿಮೀ, ೬.೪ ಮಿಮೀ ಹಾಗೂ ೧೮.೨ ಮಿಮೀ ಮಳೆ ದಾಖಲಾಗಿದೆ.ಗುಡುಗು-ಸಿಡಿಲು ಸಹಿತ ಬಿರುಸಿನ ಮಳೆ:

ಕುರುಗೋಡು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗುರುವಾರ ಬೆಳಗಿನ ಜಾವ ಗುಡುಗು-ಸಿಡಿಲು ಸಹಿತ ಬಿರುಸಿನಿಂದ ಉತ್ತಮ ಮಳೆಯಾಗಿದ್ದು, ತೆಗ್ಗು ಪ್ರದೇಶ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.ಕೊರ್ಲಗುಂದಿ, ಕೋಳೂರು, ಸೋಮಸಮುದ್ರ, ಬಾದನಹಟ್ಟಿ ಸೇರಿ ಬೆಳಗಿನ ಜಾವ ೪ ಗಂಟೆಗೆ ನಿಧಾನಗತಿಯಲ್ಲಿ ಪ್ರಾರಂಭಗೊಂಡ ಮಳೆ ೫ ಗಂಟೆತನಕ ಬಿರುಸು ಪಡೆದುಕೊಂಡಿತು.ಬೆಳಗ್ಗೆ ೬ ಗಂಟೆವರೆಗೆ ತುಂತುರು ಮಳೆ ಮುಂದುವರೆದಿತ್ತು.

ಕಳೆದ ಮೂರು ದಿನಗಳಿಂದ ವಾತಾವರಣ ತೀವ್ರ ಬಿಸಿಲಿನ ಪ್ರಖರತೆಯಿಂದ ಕೂಡಿತ್ತು. ಜನರು ಹೆಚ್ಚು ತಾಪಮಾನದಿಂದ ತತ್ತರಿಸಿದ್ದರು.ಮಳೆಯ ವಾತಾವರಣ ಇಲ್ಲದಿದ್ದರೂ ಬೆಳಗಿನ ಜಾವ ಏಕಾಏಕಿ ಮಳೆ ಸುರಿದು ಧರೆಯನ್ನು ತಂಪು ಮಾಡಿದೆ.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆ ಸುರಿದಿದೆ. ಪಟ್ಟಣದ ಕೆಲವು ಕೆಡೆ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿವೆ. ಚರಂಡಿ ತುಂಬಿ ರಸ್ತೆಯ ಮೇಲೆ ಹರಿದವು.೬ ಮಿಮೀ ಮಳೆಯಾದ ಬಗ್ಗೆ ಇಲ್ಲಿನ ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ.