ರೈತ ಸಂಘಟನೆಗಳ ಹಾವೇರಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

KannadaprabhaNewsNetwork |  
Published : Nov 01, 2026, 03:15 AM IST
31ಎಚ್‌ವಿಆರ್2- | Kannada Prabha

ಸಾರಾಂಶ

ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಶನಿವಾರ ಕರೆಕೊಟ್ಟಿದ್ದ ಹಾವೇರಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಹಾವೇರಿ: ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಶನಿವಾರ ಕರೆಕೊಟ್ಟಿದ್ದ ಹಾವೇರಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂದ್ ಯಶಸ್ವಿಗೊಳಿಸಲು ಸ್ವತಃ ಬೀದಿಗಿಳಿದ ರೈತರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವುದರ ಜತೆಗೆ ಬಸ್ ನಿಲ್ದಾಣಗಳಿಗೂ ನುಗ್ಗಿ ಪ್ರತಿಭಟನೆ ನಡೆಸಿದರು. ಕೆಲವೆಡೆ ವ್ಯಾಪಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದರೆ, ಇದೇ ವೇಳೆ ಅಂಗಡಿಗಳಲ್ಲಿದ್ದ ತಿನಿಸು ಹಾಗೂ ವಸ್ತುಗಳನ್ನು ರಸ್ತೆಗೆ ಚೆಲ್ಲಿದ ಘಟನೆಗಳು ನಡೆದವು. ನಗರದ ಹೊಸಮನಿ ಸಿದ್ದಪ್ಪ ವೃತ್ತ, ಎಲ್‌ಬಿಎಸ್ ತರಕಾರಿ ಮಾರ್ಕೆಟ್, ಎಂ.ಜಿ. ರಸ್ತೆ, ಜೆ.ಪಿ.ವೃತ್ತ, ಮುನ್ಸಿಪಲ್ ಹೈಸ್ಕೂಲ್ ರೋಡ, ಹುಕ್ಕೇರಿಮಠ ರಸ್ತೆ, ಗುತ್ತಲ ರೋಡ್, ಹಾನಗಲ್ಲ ರೋಡ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ತೆರೆದಿದ್ದ ಅಂಗಡಿಗಳ ಮುಂದೆ ತೆರಳಿದ ರೈತರು, ವ್ಯಾಪಾರಸ್ಥರಿಗೆ ಬಂದ್‌ಗೆ ಬೆಂಬಲ ನೀಡುವಂತೆ ಕೈಮುಗಿದು ಮನವಿ ಮಾಡಿದರು. ಅಂಗಡಿಗಳ ಮುಂದೆ ಪ್ರದರ್ಶನಕ್ಕೆ ಇಟ್ಟಿದ್ದ ವಸ್ತುಗಳನ್ನು ಒಳಗೆ ಹಾಕಿಸಿದರು. ಬಂದ್‌ಗೆ ಮನವಿ ಮಾಡಿದರೂ ಅಂಗಡಿ ತೆರೆದಿಟ್ಟಿದ್ದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹಾವೇರಿ ಬಸ್ ನಿಲ್ದಾಣಕ್ಕೂ ತೆರಳಿ ಅಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು.

ಬೇಕರಿ ತಿನಿಸು ರಸ್ತೆಗೆ ಎಸೆದು ದಾಂಧಲೆ: ಬಂದ್ ಮಾಡಿಸುವ ಸಂದರ್ಭದಲ್ಲಿ ಹಾವೇರಿಯ ಗ್ರಾಮೀಣ ಭಾಗದ ಬಸ್ ನಿಲ್ದಾಣದಲ್ಲಿ ಕೆಲ ಪ್ರತಿಭಟನಾಕಾರರು ಬೇಕರಿ ಅಂಗಡಿಯಲ್ಲಿದ್ದ ಸ್ವೀಟ್ ಪದಾರ್ಥಗಳನ್ನು ಹೊರಗೆ ತೆಗೆದು ರಸ್ತೆಗೆ ಚೆಲ್ಲಿದರು. ಸೂರ್ಯಕಾಂತಿ ಬೀಜದ ಪ್ಯಾಕೆಟ್‌ಗಳನ್ನೂ ರಸ್ತೆಗೆ ಎಸೆದರು. ಮತ್ತೊಂದೆಡೆ ಕಲ್ಲಂಗಡಿ ಹಣ್ಣನ್ನು ರಸ್ತೆಗೆ ಎಸೆಯಲು ಮುಂದಾದ ಯುವಕನಿಗೆ ಪೊಲೀಸರು ಕಪಾಳಮೋಕ್ಷ ಮಾಡಿದರು. ಪ್ರಚೋದನಕಾರಿ ವರ್ತನೆಗೆ ಅವಕಾಶ ನೀಡದಂತೆ ಪೊಲೀಸರು ಮಧ್ಯಪ್ರವೇಶಿಸಿದರು.

ಆಸ್ಪತ್ರೆ, ಔಷಧಿ ಮಳಿಗೆಗಳಂತಹ ವೈದ್ಯಕೀಯ ಸೇವೆ, ಹಾಲು, ಎಟಿಎಂ, ಆ್ಯಂಬುಲೆನ್ಸ್ ಸೇರಿದಂತೆ ಮೊದಲಾದ ತುರ್ತು ಅಗತ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅಶೋಕರೆಡ್ಡಿ ಮರಚರಡ್ಡೇರ, ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ರೈತ ಮುಖಂಡರಾದ ಮಂಜುನಾಥ ಬಸೇಗಣ್ಣಿö, ದಾನೇಶ ಕೆಂಗೊಂಡ, ವೆಂಕಟೇಶ ಶೇಷನಗೌಡ್ರ, ದಿಳ್ಳೆಪ್ಪ ಕುದರಿಹಾಳ, ಬಸಯ್ಯ ಹಿರೇಮಠ, ಮುತ್ತಪ್ಪ ಸಣ್ಣಿಂಗಮ್ಮನವರ, ಹಾಲಪ್ಪ ಮುದ್ದಿö, ಮಾಂತೇಶ ಬನ್ನಿಮಟ್ಟಿö, ತಿಪ್ಪಣ್ಣ ಕಂಬಳಿ, ಬಿ.ಹೆಚ್.ಭರಮರಡ್ಡೇರ, ಸಂಕಪ್ಪ ಅರಸನಾಳ, ರಾಮನಗೌಡ ತೋಟದ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

ವಾಹನಗಳ ಸಂಚಾರಕ್ಕೆ ತಡೆ:ಕಬ್ಬು ಬೆಳೆಗಾರರು ಮಾಸೂರು-ಗುತ್ತಲ ರಸ್ತೆಯ ಚೌಡಯ್ಯದಾನಪುರ ಬಳಿ ಇಳಕಲ್ಲ-ಶಿಕಾರಿಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿದರು. ರಸ್ತೆಗೆ ಅಡ್ಡಲಾಗಿ ಬೈಕ್‌ಗಳನ್ನು ನಿಲ್ಲಿಸಿ ಖಾಸಗಿ ವಾಹನ, ದ್ವಿಚಕ್ರ ವಾಹನ ಹಾಗೂ ಸಾರಿಗೆ ಬಸ್‌ಗಳ ಸಂಚಾರ ತಡೆದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಂದೆಡೆ ನಗರದ ಹಾವೇರಿ-ಗುತ್ತಲ ರಸ್ತೆ ಮಾರ್ಗದಲ್ಲಿ ಟಿಪ್ಪರ್ ಹಾಗೂ ಟ್ರ್ಯಾಕ್ಟರ್‌ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು. ಪರಿಣಾಮ ಗುತ್ತಲ ರಸ್ತೆಯಲ್ಲಿ ಸರ್ಕಾರಿ ಬಸ್‌ಗಳು ಸಾಲುಗಟ್ಟಿ ನಿಂತವು. ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.

ಬಸ್‌ಗಳ ಮುಂದೆ ಮಲಗಿ ಪ್ರತಿಭಟನೆ: ಹಾವೇರಿ ಬಸ್ ನಿಲ್ದಾಣಕ್ಕೆ ಏಕಾಏಕಿ ಪ್ರವೇಶಿಸಿದ ರೈತರು, ಬಸ್‌ಗಳ ಮುಂದೆ ಮಲಗಿ ಪ್ರತಿಭಟನೆ ನಡೆಸಿದರು. ಬಸ್‌ಗಳ ಆಗಮನ ಮತ್ತು ನಿರ್ಗಮನಕ್ಕೆ ತಡೆಯೊಡ್ಡಿದರು. ಇದರಿಂದ ಸಾರಿಗೆ ಬಸ್‌ಗಳು ನಿಲ್ದಾಣದಲ್ಲೇ ಸಾಲುಗಟ್ಟಿ ನಿಂತವು. ದಿಢೀರ್ ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ಪರದಾಡಿದರು. ಬಸ್ ನಿಲ್ದಾಣದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ