ನಾರಾಯಣ ಹೆಗಡೆ
ಸರ್ಕಾರಿ ಶಾಲೆಗಳಲ್ಲೇ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ರಾಜ್ಯಾದ್ಯಂತ ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ 6,469 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭಗೊಂಡಿದ್ದು, ಈಗಾಗಲೇ 1,06,676 ಮಕ್ಕಳು ದಾಖಲಾತಿ ಪಡೆದಿದ್ದಾರೆ.
ಗ್ರಾಮೀಣ ಪ್ರದೇಶಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಆರಂಭಿಕ ಹಂತದಲ್ಲೇ ಒದಗಿಸುವ ಉದ್ದೇಶದಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗಿದೆ. ಕಳೆದ ಸಾಲಿನಲ್ಲೇ ಕೆಲವು ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲಾಗಿತ್ತು. ಅದಕ್ಕೆ ಪೋಷಕರಿಂದ ಉತ್ತಮ ಸ್ಪಂದನೆ ಸಿಕ್ಕ ಹಿನ್ನೆಲೆಯಲ್ಲಿ ಯೋಜನೆಯನ್ನು ಸರ್ಕಾರ ವಿಸ್ತರಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷ 6469 ಶಾಲೆಗಳಲ್ಲಿ ಕೆಜಿ ತರಗತಿಗಳನ್ನು ಆರಂಭಿಸಲಾಗಿದೆ. ಮಕ್ಕಳ ಸ್ನೇಹಿ ಕಲಿಕಾ ವಾತಾವರಣ, ಉಚಿತ ಪಠ್ಯಸಾಮಗ್ರಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳು ಪೋಷಕರನ್ನು ಸೆಳೆಯುತ್ತಿವೆ.ಶಿಕ್ಷಣ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಎಲ್‌ಕೆಜಿಗೆ 56,239 ಹಾಗೂ ಯುಕೆಜಿಗೆ 50,437 ಮಕ್ಕಳು ಪ್ರವೇಶ ಪಡೆದಿದ್ದಾರೆ. ಇನ್ನೂ ದಾಖಲಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮಕ್ಕಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ.
ದ್ವಿಭಾಷಾ ಮಾಧ್ಯಮದ ಶಿಕ್ಷಣ: ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ದ್ವಿಭಾಷಾ ಮಾಧ್ಯಮದಲ್ಲಿ (ಕನ್ನಡ ಮತ್ತು ಆಂಗ್ಲ) ನಡೆಸಲಾಗುತ್ತಿದೆ. ಇದರಿಂದ ಮಕ್ಕಳು ಆರಂಭದಿಂದಲೇ ಇಂಗ್ಲಿಷ್ ಭಾಷೆಯನ್ನೂ ಸುಲಭವಾಗಿ ಕಲಿಯುತ್ತಿದ್ದಾರೆ. ಪ್ರವೇಶ ಪಡೆದ ಮಕ್ಕಳಿಗೆ ಉಚಿತವಾಗಿ ಅಭ್ಯಾಸ ಪುಸ್ತಕಗಳು ಮತ್ತು ಆಕರ್ಷಕ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಈ ಮಕ್ಕಳಿಗೂ ಬಿಸಿಯೂಟ, ಹಾಲು, ಮೊಟ್ಟೆ ಅಥವಾ ಬಾಳೆಹಣ್ಣು ನೀಡುವ ಯೋಜನೆ ಜಾರಿಗೆ ತಂದಿರುವುದು ಪೋಷಕರನ್ನು ಮತ್ತಷ್ಟು ಆಕರ್ಷಿಸಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ತರಗತಿಗಳು ನಡೆಯುವುದರಿಂದ ಗ್ರಾಮೀಣ ಕೃಷಿ ಕಾರ್ಮಿಕ ಪೋಷಕರಿಗೆ ಅನುಕೂಲವಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಅತ್ಯಧಿಕ 536 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಶುರು ಮಾಡಲಾಗಿದೆ. ಹಾವೇರಿ ಜಿಲ್ಲೆಯ 190 ಶಾಲೆಗಳಲ್ಲಿ ಕೆಜಿ ತರಗತಿ ಆರಂಭವಾಗಿದ್ದು, ಎಲ್‌ಕೆಜಿಗೆ 3716 ಹಾಗೂ ಯುಕೆಜಿಗೆ 2563 ಸೇರಿದಂತೆ 6279 ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ದಾಖಲಾತಿ ಸಂಖ್ಯೆ ಪ್ರಕಾರ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿಹೆಚ್ಚು 7590 ಮಕ್ಕಳು ದಾಖಲಾತಿ ಪಡೆದಿದ್ದಾರೆ.