ಮನೆ ಮನೆಯಲ್ಲಿ ಗಾಯತ್ರಿ ಅಭಿಯಾನಕ್ಕೆ ಉತ್ತಮ ಸ್ಪಂದನೆ

KannadaprabhaNewsNetwork |  
Published : Jun 04, 2026, 01:30 AM IST
3ಎಚ್ಎಸ್ಎನ್16: | Kannada Prabha

ಸಾರಾಂಶ

ವಿಶ್ವಬ್ರಾಹ್ಮಣ ಸಮಾಜವು ಕೇವಲ ಒಂದು ಸಮುದಾಯವಲ್ಲ, ವೈದಿಕ ಸಂಸ್ಕೃತಿಯ ರಕ್ಷಕ ಸಮಾಜವಾಗಿದೆ. ವೇದ, ಶಾಸ್ತ್ರ, ಆಗಮ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಸಮಾಜದ ಪ್ರತಿಯೊಬ್ಬ ಸದಸ್ಯರ ಮೇಲಿದೆ. ಇಂದಿನ ಆಧುನಿಕ ಯುಗದಲ್ಲಿ ಭೌತಿಕ ಪ್ರಗತಿಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳೂ ಅಗತ್ಯವಾಗಿದ್ದು, ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರದ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು. ಕುಟುಂಬಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುವುದು ಮತ್ತು ಯುವ ಪೀಳಿಗೆಯಲ್ಲಿ ಸಂಸ್ಕಾರದ ಅರಿವು ಮೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ವಿಶ್ವ ಬ್ರಾಹ್ಮಣ ದಿನಾಚರಣೆಯ ಅಂಗವಾಗಿ ವಿಶ್ವಬ್ರಾಹ್ಮಣ ಸಮಾಜದ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುತ್ತಿರುವ ಮನೆ ಮನೆಯಲ್ಲಿ ಗಾಯತ್ರಿ ಜಪ ಅಭಿಯಾನದ ಮೂರನೇ ತಿಂಗಳ ಕಾರ್ಯಕ್ರಮವು ನಗರದ ಸಮಾಜ ಬಾಂಧವರಾದ ಪ್ರಭಾಕರ್ ಅವರ ನಿವಾಸದಲ್ಲಿ ಶ್ರದ್ಧಾ, ಭಕ್ತಿಯಿಂದ ನೆರವೇರಿತು. ವೈದಿಕ ಪರಂಪರೆಯ ಮಹತ್ವವನ್ನು ಜನರಿಗೆ ತಿಳಿಸುವುದು, ಕುಟುಂಬಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುವುದು ಮತ್ತು ಯುವ ಪೀಳಿಗೆಯಲ್ಲಿ ಸಂಸ್ಕಾರದ ಅರಿವು ಮೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿ ಸಾಮೂಹಿಕವಾಗಿ ಗಾಯತ್ರಿ ಮಂತ್ರ ಜಪ ನಡೆಸಿದರು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಮನು ರಾಜ್ ಅವರು ವಿಶ್ವಬ್ರಾಹ್ಮಣ ಸಮಾಜದ ಆಧ್ಯಾತ್ಮಿಕ ಪರಂಪರೆ, ವೇದಗಳ ಮಹತ್ವ ಹಾಗೂ ವಿಶ್ವರೂಪಾಚಾರ್ಯರ ಜೀವನ ಸಂದೇಶದ ಕುರಿತು ವಿವರವಾಗಿ ಮಾತನಾಡಿದರು. ವಿಶ್ವಕರ್ಮನ ಪುತ್ರನಾದ ವಿಶ್ವರೂಪಾಚಾರ್ಯರು ತಮ್ಮ ತಪಸ್ಸು, ಗಾಯತ್ರಿ ಅನುಷ್ಠಾನ ಹಾಗೂ ಧಾರ್ಮಿಕ ಸಾಧನೆಯ ಮೂಲಕ ಅಪಾರ ಶಕ್ತಿಯನ್ನು ಸಂಪಾದಿಸಿದ್ದರು. ದೇವತೆಗಳ ಗುರುಗಳಾದ ಬೃಹಸ್ಪತಿ ಆಚಾರ್ಯರು ದೂರವಾದ ಸಂದರ್ಭದಲ್ಲಿ ದೇವತೆಗಳು ಸಂಕಷ್ಟಕ್ಕೆ ಸಿಲುಕಿದಾಗ ವಿಶ್ವರೂಪಾಚಾರ್ಯರು ಅವರಿಗೆ ಪುರೋಹಿತರಾಗಿ ಮಾರ್ಗದರ್ಶನ ನೀಡಿದರು. ರಾಕ್ಷಸರ ವಿರುದ್ಧದ ಯುದ್ಧದಲ್ಲಿ ಸೋಲಿನ ಅಂಚಿನಲ್ಲಿದ್ದ ದೇವತೆಗಳಿಗೆ ನಾರಾಯಣ ಕವಚವನ್ನು ಉಪದೇಶಿಸಿ ಆತ್ಮವಿಶ್ವಾಸ ತುಂಬಿ ವಿಜಯ ಸಾಧಿಸಲು ಕಾರಣರಾದರು. ಅವರ ಜೀವನವು ಧರ್ಮ, ಜ್ಞಾನ ಮತ್ತು ಸೇವೆಯ ಪ್ರತೀಕವಾಗಿದೆ ಎಂದು ತಿಳಿಸಿದರು. ವಿಶ್ವಬ್ರಾಹ್ಮಣ ಸಮಾಜವು ಕೇವಲ ಒಂದು ಸಮುದಾಯವಲ್ಲ, ವೈದಿಕ ಸಂಸ್ಕೃತಿಯ ರಕ್ಷಕ ಸಮಾಜವಾಗಿದೆ. ವೇದ, ಶಾಸ್ತ್ರ, ಆಗಮ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಸಮಾಜದ ಪ್ರತಿಯೊಬ್ಬ ಸದಸ್ಯರ ಮೇಲಿದೆ. ಇಂದಿನ ಆಧುನಿಕ ಯುಗದಲ್ಲಿ ಭೌತಿಕ ಪ್ರಗತಿಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳೂ ಅಗತ್ಯವಾಗಿದ್ದು, ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರದ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ಪ್ರಭಾಕರ್‌ ಅವರು ಮಾತನಾಡಿ, ಮನೆ ಮನೆಗಳಲ್ಲಿ ಗಾಯತ್ರಿ ಜಪ ನಡೆಯುವುದರಿಂದ ಕುಟುಂಬದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಸಮಾಜದ ಒಗ್ಗಟ್ಟು ಮತ್ತು ಧರ್ಮಜಾಗೃತಿಗೆ ಇಂತಹ ಕಾರ್ಯಕ್ರಮಗಳು ಮಹತ್ತರ ಕೊಡುಗೆ ನೀಡುತ್ತವೆ. ಇಂದಿನ ಯುವಜನತೆ ತಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. ಕುಟುಂಬದ ಹಿರಿಯರು ಮಕ್ಕಳಿಗೆ ಧಾರ್ಮಿಕ ಆಚರಣೆಗಳು, ಸಂಸ್ಕಾರಗಳು ಹಾಗೂ ಮೌಲ್ಯಗಳನ್ನು ತಿಳಿಸಿಕೊಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು. ಗಾಯತ್ರಿ ಮಂತ್ರವು ಕೇವಲ ಒಂದು ಮಂತ್ರವಲ್ಲ, ಅದು ಜ್ಞಾನ, ಶಾಂತಿ ಮತ್ತು ಆತ್ಮೋನ್ನತಿಯ ಮಾರ್ಗವಾಗಿದೆ. ಇದರ ಜಪದಿಂದ ಮಾನಸಿಕ ನೆಮ್ಮದಿ, ಏಕಾಗ್ರತೆ ಹಾಗೂ ಸಾತ್ವಿಕ ಚಿಂತನೆಗಳು ಬೆಳೆಯುತ್ತವೆ. ಆದ್ದರಿಂದ ಪ್ರತಿಯೊಂದು ಮನೆಯಲ್ಲಿ ಗಾಯತ್ರಿ ಜಪ ನಡೆಯುವಂತಾಗಬೇಕು ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಸಂಘಟಕರು ತಿಳಿಸಿದರು.ಕಾರ್ಯಕ್ರಮದಲ್ಲಿ ಗಂಗಾಧರ್, ಹರೀಶ್ (ಚನ್ನರಾಯಪಟ್ಟಣ), ನಾಗರಾಜಾಚಾರ್, ಪರಮೇಶ್ವರಚಾರ್, ಕುಮಾರಾಚಾರ್, ಜಯಶಂಕರ್, ಕೇಶವ್ ಪ್ರಸಾದ್, ಪರಮೇಶ್, ಕಲ್ಲೇಶಾಚಾರ್‌, ಪ್ರದೀಪ್ ಶರ್ಮ ಹಾಗೂ ಕಾರ್ಯಕ್ರಮದ ಸಂಚಾಲಕರಾದ ನವೀನ್ ರಾಜ್ ಸೇರಿದಂತೆ ಅನೇಕ ಸಮಾಜ ಬಾಂಧವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ನಾಳೆಯಿಂದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ
ಬೇಲೂರಿನಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ