ಭಟ್ಕಳ: ಜಾಲಿಯ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ವತಿಯಿಂದ ನೀರು ನೀಡಿ-ಜೀವ ಉಳಿಸಿ ಅಭಿಯಾನ ಆರಂಭಿಸಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೇಸಿಗೆಯ ಸುಡು ಬಿಸಿಲಿನಲ್ಲಿ ಪ್ರಾಣಿ-ಪಕ್ಷಿಗಳ ನೀರಿನ ದಾಹ ತೀರಿಸಲು ಸಂಘಟಿಸಿರುವ ವಿಶಿಷ್ಟ ಹಾಗೂ ವಿನೂತನವಾಗಿರುವ ಈ ಅಭಿಯಾನದಲ್ಲಿ ಹೆಚ್ಚು ಜನರು ಕೈಜೋಡಿಸುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಕೂಡ ಪ್ರಾಣಿ, ಪಕ್ಷಿಗಳ ಕುರಿತು ಕಾಳಜಿ ವಹಿಸುತ್ತಿದ್ದು, ದಿನನಿತ್ಯ ನೀರು ಇಡುವ ಕಾರ್ಯಕ್ಕೆ ಮುಂದಾಗುತ್ತಿರುವುದು ಅಭಿಯಾನದ ಯಶಸ್ಸಿಗೆ ಕಾರಣವಾಗಿದೆ. ಇದೊಂದು ಸಾಮಾಜಿಕ ಅಭಿಯಾನವಾಗಬೇಕು. ತನ್ಮೂಲಕ ಜನತೆ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಫೌಂಡೇಶನ್ ಬಹುಮಾನ ನೀಡಲಿದೆ. ಅಭಿಯಾನದಲ್ಲಿ ಭಾಗವಹಿಸಿದವರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಮೂಲಕ ಅಭಿಯಾನದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಲಾಗಿದೆ. ಮೊದಲ ಬಹುಮಾನವಾಗಿ ₹೨೦೦೦, ಎರಡನೇ ಬಹುಮಾನ ₹೧೦೦೦ ಹಾಗೂ ಮೂರನೇ ಬಹುಮಾನ ₹೫೦೦, ಆನಂತರದ ೫ ಜನರಿಗೆ ತಲಾ ₹೧೫೦ರಂತೆ ಬಹುಮಾನ ನೀಡಿ ಉತ್ತೇಜಿಸಲಾಗುತ್ತದೆ.
ಅಭಿಯಾನದಲ್ಲಿ ಭಾಗವಹಿಸುವವರು ಕುಡಿಯಲು ಯೋಗ್ಯವಾದ ಜಾಗದಲ್ಲಿ ತೊಟ್ಟಿಯಲ್ಲಿ ಅಥವಾ ಪಾತ್ರೆಗಳಲ್ಲಿ ತಾಜಾ ನೀರು ತುಂಬಿಸಿ, ಪ್ರಾಣಿ-ಪಕ್ಷಿಗಳಿಗೆ ಜೀವಜಲ ಒದಗಿಸಿ ಅದರ ಪೋಟೋ ತೆಗೆದು ಸಂಪೂರ್ಣ ವಿಳಾಸದೊಂದಿಗೆ ಕಳುಹಿಸಬೇಕು. ಮಾ.೨೯ರಂದು ಫೋಟೋ ಕಳುಹಿಸಲು ಕೊನೆಯ ದಿನವಾಗಿದ್ದು, ಮಾ.೩೦ರ ಯುಗಾದಿಯಂದು ಆಯ್ಕೆಯಾದವರ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಫೌಂಡೇಶನ್ ಸದಸ್ಯರನ್ನು ಸಂಪರ್ಕಿಸಬಹುದು ಎಂದೂ ತಿಳಿಸಲಾಗಿದೆ.