‘ನಮ್ಮೂರ ಮಸೀದಿ ನೋಡಬನ್ನಿ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ

KannadaprabhaNewsNetwork |  
Published : Jul 27, 2024, 12:54 AM IST
೨೬ ಎಚ್‌ಆರ್‌ಆರ್‌ ೨ಹರಿಹರ: ಜಮಾತೆ ಇಸ್ಲಾಂ ಹಿಂದ್ ಹರಿಹರ ಘಟಕದಿಂದ ಶುಕ್ರವಾರ ನಗರದ ಪ್ರಶಾಂತನಗರದ ಮಸ್ಜಿದ್-ಎ-ಅಲಿ ಮಸೀದಿಯಲ್ಲಿ ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡಬನ್ನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿಂದೂ ಸಮುದಾಯದ ಮಹಿಳೆಯರು ಮಸೀದಿಯನ್ನು ವೀಕ್ಷಿಸಿದರು. | Kannada Prabha

ಸಾರಾಂಶ

ಜಮಾತೆ ಇಸ್ಲಾಂ ಹಿಂದ್ ಹರಿಹರ ಘಟಕದಿಂದ ಶುಕ್ರವಾರ ನಗರದ ಪ್ರಶಾಂತ ನಗರದ ಮಸ್ಜಿದ್-ಎ-ಅಲಿ ಮಸೀದಿಯಲ್ಲಿ ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡಬನ್ನಿ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು.

- ಪ್ರಶಾಂತ ನಗರದ ಮಸೀದಿಯಲ್ಲಿ ಜಮಾತೆ ಇಸ್ಲಾಂ ಹಿಂದ್ ಘಟಕ ಆಯೋಜನೆ - - - ಕನ್ನಡಪ್ರಭ ವಾರ್ತೆ, ಹರಿಹರ

ಜಮಾತೆ ಇಸ್ಲಾಂ ಹಿಂದ್ ಹರಿಹರ ಘಟಕದಿಂದ ಶುಕ್ರವಾರ ನಗರದ ಪ್ರಶಾಂತ ನಗರದ ಮಸ್ಜಿದ್-ಎ-ಅಲಿ ಮಸೀದಿಯಲ್ಲಿ ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡಬನ್ನಿ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು.

ಮಧ್ಯಾಹ್ನ ೧೨.೩೦ಕ್ಕೆ ಶುಕ್ರವಾರದ ವಿಶೇಷ ಪ್ರವಚನ ಹಾಗೂ ನಮಾಜ್‌ಗೆಂದು ಅಜಾನ್ ಕೂಗಿದ ನಂತರ ಎಂದಿನಂತೆ ಮುಸ್ಲಿಂ ಸಮುದಾಯದವರು ಮಸೀದಿಗೆ ಬಂದರು. ಜೊತೆಗೆ ಹಿಂದೂ ಬಾಂಧವರೂ ಮಸೀದಿಯನ್ನು ಪ್ರವೇಶಿಸಿ ಕನ್ನಡ ಭಾಷೆಯಲ್ಲಿ ನಡೆದ ವಿಶೇಷ ಪ್ರವಚನವನ್ನು ಆಲಿಸಿದರು.

ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಪ್ರವಚನ ನೀಡಿ, ಜಗತ್ತಿನಲ್ಲಿರುವ ಎಲ್ಲ ವ್ಯಕ್ತಿಗಳು ಪರಸ್ಪರ ಸಹೋದರತ್ವದಿಂದ ಬದುಕಬೇಕು. ದೇವರನ್ನು ನಾವು ಅಲ್ಲಾಹು ಎಂದು ಕರೆದರೆ, ಇನ್ನೊಂದು ಧರ್ಮೀಯರು ದೇವರನ್ನುಇನ್ನೊಂದು ಹೆಸರಲ್ಲಿ ಗುರುತಿಸುತ್ತಾರೆ. ಪರಸ್ಪರರ ಧಾರ್ಮಿಕ ಕೇಂದ್ರಗಳಿಗೆ, ನಿಯಮಿತವಾಗಿ ಭೇಟಿ ನೀಡಿದರೆ ಸಾಮರಸ್ಯ, ಸ್ನೇಹ, ವಿಶ್ವಾಸ ಬೆಳೆಯುತ್ತದೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ ಮಾತನಾಡಿ, ‘ನಮ್ಮೂರ ಮಸೀದಿ ನೋಡಬನ್ನಿ’ ಕಾರ್ಯಕ್ರಮ ಈಗಿನ ವಾತಾವರಣಕ್ಕೆ ಅಗತ್ಯವಿತ್ತು. ಮಸೀದಿಯೊಳಗೆ ನಡೆಯುವ ಪ್ರವಚನ, ನಮಾಜು ಮಾಡುವ ರೀತಿ, ನೀತಿಗಳನ್ನು ನೋಡಲು ಹಿಂದೂ ಬಾಂಧವರಿಗೂ ಅವಕಾಶ ಸಿಕ್ಕಿತು ಎಂದು ಸಂತಸ ವ್ಯಕ್ತಪಡಿಸಿದರು.

ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆ ಎಂಬುದರ ಸಂಕೇತವಾಗಿದೆ. ಇಲ್ಲಿರುವ ವಿವಿಧ ಧರ್ಮ, ಜಾತಿ, ಜನಾಂಗದವರು ಸಾಮರಸ್ಯದಿಂದ ಬದುಕಿದರೆ ಅದೇ ದೇಶದ ಶಕ್ತಿ. ಆಗ ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯಲು ಸಾಧ್ಯ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದರು.

ಮಸೀದಿಯಲ್ಲಿ ಶುಕ್ರವಾರದಂದು ನಡೆಯುವ ಪ್ರವಚನ, ನಮಾಜು ಹಾಗೂ ಇತರೆ ಪ್ರಕ್ರಿಯೆಯಗಳನ್ನು ನಡೆಸುವ ವಿಧಾನ, ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು. ಕೊನೆಯಲ್ಲಿ ಎಲ್ಲರೂ ಲಘು ಉಪಾಹಾರ ಸೇವಿಸಿ ತೆರಳಿದರು.

ಬಿಜೆಪಿ ಮುಖಂಡ ಪರಶುರಾಮ ಕಾಟ್ವೆ, ಹರಿಹರ ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೆ.ಭೂಮೇಶ್, ಸುರೇಶ್, ಮಂಜುನಾಥ್ ಎಸ್., ಗಿರೀಶ್, ಕಾವ್ಯ, ಸುಮಂಗಲ, ಬಸವಲಿಂಗಮ್ಮ, ಜಮಾತೆ ಇಸ್ಲಾಂಇ ಹಿಂದ್ ಹರಿಹರ ಘಟಕ ಅಧ್ಯಕ್ಷ ಅಬ್ದುಲ್ ಖಯೂಂ ಎಕ್ಕೆಗೊಂದಿ, ಮಸೀದಿಯ ಅಧ್ಯಕ್ಷ ಡಾ.ಗುಲಾಂ ನಬಿ, ಆರ್.ಸಿ.ಉಬೇದ್ ಉಲ್ಲಾ, ಸೈಯದ್ ರಿಯಾಜ್ ಅಹ್ಮದ್, ಅಬ್ದುಲ್‌ ಸಲಾಂ, ಇಖ್ರಾ ಅಕಾಡಮಿ ಶಾಲೆ ಮುಖ್ಯಸ್ಥ ಅಬ್ದುಲ್ ರಹಮಾನ್, ಫಾರೂಖ್ ಖಾನ್, ಡಾ.ನಜೀಬ್ ಉಲ್ಲಾ ಖಾನ್, ಉಸ್ಮಾನ್ ಖಾನ್, ಅದ್ನಾನ್ ಸಾಖಿಬ್ ಎಕ್ಕೆಗೊಂದಿ, ಮುಸೇಬ್ ಅನಸ್ ಅಫ್ಜಲ್ ಹುಸೇನ್, ಅಬ್ದುಲ್ ರಹೀಂ ಇದ್ದರು.

- - -

ಕೋಟ್‌ ಹೊರ ಭಾಗದಿಂದ ಮಾತ್ರ ನೋಡುತ್ತಿದ್ದ ಮಸೀದಿಯನ್ನು ಇಂದು ಒಳಗೆ ಬಂದು ನೋಡುವ ಅವಕಾಶ ಸಿಕ್ಕಿತು. ಜೊತೆಗೆ ಮೌಲಾನಾರವರು ಮಾಡುವ ಪ್ರವಚನವನ್ನು ಕನ್ನಡ ಭಾಷೆಯಲ್ಲಿಯೆ ಕೇಳಿದೆವು. ಎಲ್ಲಾ ಧರ್ಮೀಯರು ಅಣ್ಣ, ತಮ್ಮಂದಿರಂತೆ ಬದುಕಿದರೆ ಮಾತ್ರ ಎಲ್ಲರಿಗೂ ಒಳ್ಳೆಯದಾಗುತ್ತದೆ - ಮಂಜುಳ, ಗೃಹಣಿ, ಹರಿಹರ

- - - -೨೬ಎಚ್‌ಆರ್‌ಆರ್‌೨:

ಜಮಾತೆ ಇಸ್ಲಾಂ ಹಿಂದ್ ಹರಿಹರ ಘಟಕದಿಂದ ಶುಕ್ರವಾರ ಪ್ರಶಾಂತ ನಗರದ ಮಸ್ಜಿದ್-ಎ-ಅಲಿ ಮಸೀದಿಯಲ್ಲಿ ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡಬನ್ನಿ’ ಕಾರ್ಯಕ್ರಮದಲ್ಲಿ ಹಿಂದೂ ಮಹಿಳೆಯರು ಭಾಗವಹಿಸಿ, ಮಸೀದಿಯಲ್ಲಿನ ಕಾರ್ಯ ಚಟುವಟಿಕೆಗಳ ಅರಿವು ಪಡೆದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?