ಕೋಮಾರಿಗೌಡರ ಆರೋಪಗಳಲ್ಲಿ ಸತ್ಯಾಂಶವಿಲ್ಲ: ಕಾಂತರಾಜು

KannadaprabhaNewsNetwork |  
Published : Jul 27, 2024, 12:54 AM IST
ಪೊಟೋ೨೪ಸಿಪಿಟಿ೨: ತಾಲೂಕಿನ ಕನ್ನಮಂಗಲದಲ್ಲಿನ ಸಿಪಾಯಿ ರಾಮು ತೋಟದಲ್ಲಿ ಕಾಂತರಾಜು ಪತ್ರಿಕಾಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಚನ್ನಪಟ್ಟಣದ ಕಣ್ವ ರಸ್ತೆಯ ಕನ್ನಮಂಗಲ ಸರ್ವೆ ನಂ. ೨೫೫ರಲ್ಲಿನ ೯ ಎಕರೆ ೩೬ ಗುಂಟೆ ಜಮೀನನ್ನು ವಶಪಡಿಸಿಕೊಳ್ಳಲು ಪಕ್ಕದ ಜಮೀನಿನ ಮಾಲೀಕ ಅತಿಕ್ರಮ ಪ್ರವೇಶ ಮಾಡಿ ದೌರ್ಜನ್ಯ ವೆಸಗುತ್ತಿದ್ದಾರೆ ಎಂದು ಹಾರೋಕೊಪ್ಪ ಡಿ.ಕೋಮಾರಿಗೌಡರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಮಾಜಿ ಸೈನಿಕ ವಿ.ರಾಮು ಪುತ್ರ ಕಾಂತರಾಜ್ ಆರ್.ವಿ. ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

-ಜಮೀನು ವಿವಾದ -ಜಮೀನನ್ನು ವಶಪಡಿಸಿಕೊಳ್ಳಲು ಹೊಸ ಡ್ರಾಮ: ಆರೋಪ

-ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ತಾಲೂಕಿನ ಕಣ್ವ ರಸ್ತೆಯ ಕನ್ನಮಂಗಲ ಸರ್ವೆ ನಂ. ೨೫೫ರಲ್ಲಿನ ೯ ಎಕರೆ ೩೬ ಗುಂಟೆ ಜಮೀನನ್ನು ವಶಪಡಿಸಿಕೊಳ್ಳಲು ಪಕ್ಕದ ಜಮೀನಿನ ಮಾಲೀಕ ಅತಿಕ್ರಮ ಪ್ರವೇಶ ಮಾಡಿ ದೌರ್ಜನ್ಯ ವೆಸಗುತ್ತಿದ್ದಾರೆ ಎಂದು ಹಾರೋಕೊಪ್ಪ ಡಿ.ಕೋಮಾರಿಗೌಡರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ. ಆರೋಪಗಳು ಮತ್ತು ದಾಖಲೆ ಪತ್ರಗಳೆಲ್ಲವೂ ಶುದ್ಧಸುಳ್ಳು. ಮಾಜಿ ಸೈನಿಕ ದಿವಂಗತ ವಿ.ರಾಮು ಮತ್ತು ಕುಟುಂಬದವರು ಅಭಿವೃದ್ಧಿ ಪಡಿಸಿರುವ ಜಮೀನನ್ನು ವಶಪಡಿಸಿಕೊಳ್ಳಲು ಇದೊಂದು ಹೊಸ ಡ್ರಾಮ ಎಂದು ಮಾಜಿ ಸೈನಿಕ ವಿ.ರಾಮು ಪುತ್ರ ಕಾಂತರಾಜ್ ಆರ್.ವಿ. ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಗೆ ಸಂಬಂಧಿಸಿದ ಕನ್ನಮಂಗಲ ಸರ್ವೆ ನಂ.೧೪೮ರ ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪ್ರದರ್ಶಿಸಿ, ನಾವು ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ ಸರ್ಕಾರ ೧೯೮೦ರಲ್ಲಿ ಕಣ್ವ ರಸ್ತೆಯ ಸರ್ವೆ ನಂ.೧೪೮ರಲ್ಲಿ ಜಮೀನು ಮಂಜೂರು ಮಾಡಿತ್ತು. ಜಮೀನಿನಲ್ಲಿ ಮನೆ ನಿರ್ಮಿಸಿ ಗಿಡಮರಗಳನ್ನು ಬೆಳೆಸಿ ಅಂದಿನಿಂದ ಇಂದಿನವರೆಗೂ ನಾನು ಮತ್ತು ನಮ್ಮ ಕುಟುಂಬ ಭೂಸ್ವಾಧೀನದಲ್ಲಿದ್ದೇವೆ ಎಂದು ತಿಳಿಸಿದರು.

ಹಾರೋಕೊಪ್ಪ ಡಿ.ಕೋಮಾರಿಗೌಡರು ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರಾಗಿದ್ದು, ಅವರಿಗೆ ೧೯೭೧ರಲ್ಲಿ ಕನ್ನಮಂಗಲ ಸರ್ವೆ ನಂ. ೧೪೯ರಲ್ಲಿ ೪ ಎಕರೆ ಜಮೀನು ಮಂಜೂರಾಗಿದೆ. ಇವರು ಸರ್ಕಾರಿ ನೌಕರರು, ಸಾಗುವಳಿದಾರರಲ್ಲ. ಅಕ್ಕಪಕ್ಕದ ಗ್ರಾಮದವರೂ ಅಲ್ಲ. ಆದರೂ ತಮ್ಮ ಅಧಿಕಾರ ಬಳಸಿಕೊಂಡು ಜಮೀನು ಸಾಗುವಳಿ ಮಾಡುತ್ತಿದ್ದೆ ಎಂದು ಸುಳ್ಳು ಮಾಹಿತಿ ನೀಡಿ ಸರ್ಕಾರದಿಂದ ಜಮೀನು ಪಡೆದುಕೊಂಡಿದ್ದಾರೆ. ಎಕರೆ ಎನ್ನುವುದರ ಬದಲಾಗಿ ಹೆಕ್ಟೇರ್ ಎಂದು ಬರೆಯಿಸಿಕೊಂಡಿದ್ದಾರೆ. ೧೯೭೯ರಲ್ಲಿ ಆ ಜಮೀನಿಗೆ ಆರ್‌ಟಿಸಿ ಸೃಷ್ಟಿಸಿಕೊಂಡು, ನಾವು ದುರಸ್ತಿಗೆ ಅರ್ಜಿ ನೀಡದಿದ್ದರೂ, ನಮ್ಮ ಗಮನಕ್ಕೆ ಬಾರದೇ, ೨೦೦೧ರಲ್ಲಿ ಜಮೀನಿಗೆ ದುರಸ್ತಿ ಮಾಡಿಸಿಕೊಂಡು ಸರ್ವೆ ನಂಬರ್ ಬದಲಾಯಿಸಿಕೊಂಡು ನಾವು ಅಭಿವೃದ್ಧಿ ಪಡಿಸಿರುವ ಜಮೀನು ನನ್ನದು ಎನ್ನುತ್ತಿದ್ದಾರೆ ಎಂದರು.

ನಮ್ಮ ತಂದೆ ವಿ.ರಾಮು ರಾಂಪುರ ಗ್ರಾಮ ಪಂಚಾಯಿತಿಯಲ್ಲಿ ೨೦೦೦ರಲ್ಲಿ ಅನುಮತಿ ಪಡೆದು ಮನೆ ಕಟ್ಟಿದ್ದಾರೆ. ವಿದ್ಯುತ್ ಸಂಪರ್ಕ ಪಡೆದಿದ್ದೇವೆ. ಕಳೆದ ೨೪ ವರ್ಷಗಳಿಂದ ಗ್ರಾಪಂಗೆ ತೆರಿಗೆ ಕಟ್ಟುತ್ತಿದ್ದೇವೆ. ಜಮೀನನ್ನು ವಶಪಡಿಸಿಕೊಳ್ಳಲು ಡಿ.ಕೋಮಾರಿಗೌಡ ಭೂಮಾಫಿಯಾ ಗ್ಯಾಂಗ್ ಕಟ್ಟಿಕೊಂಡು ಆಗಿಂದಾಗ್ಗೆ ನಮಗೆ ಬೆದರಿಕೆ ಹಾಕಿ, ದೌರ್ಜನ್ಯ ನಡೆಸುತ್ತಿದ್ದಾರೆ. ನಮ್ಮ ಮನೆ ದ್ವಂಸ ಮಾಡಿ, ವಸ್ತುಗಳನ್ನು ದೋಚಿದ್ದು, ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಅವರ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಷರತ್ತು ಬದ್ಧ ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.

ಭೂ ದಾಖಲೆ ಪತ್ರಗಳನ್ನು ಪರಿಶೀಲಿಸಿ, ಮಾಜಿ ಸೈನಿಕರ ಕುಟುಂಬಕ್ಕೆ ಅನ್ಯಾಯವಾಗುತ್ತಿದೆ ಎಂಬ ಮನವರಿಕೆಯಿಂದ ಜಿಲ್ಲಾಡಳಿತ ಮತ್ತು ಪೊಲೀಸ್‌ ಅಧಿಕಾರಿಗಳು ಮಾತನಾಡಿದ್ದಕ್ಕೆ, ಇದೀಗ ಕೋಮಾರಿಗೌಡ ಜಿಲ್ಲಾಡಳಿತ ಮತ್ತು ಪೊಲೀಸರ ವಿರುದ್ಧ ಆರೋಪಿಸುವುದಲ್ಲದೆ, ದಯಾಮರಣದ ಹೊಸ ಡ್ರಾಮಾ ಆರಂಭಿಸಿದ್ದಾರೆ. ನಮಗೆ ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಇದೆ. ನ್ಯಾಯಾಲಯದ ತೀರ್ಪಿಗೆ ನಾವು ಬದ್ಧರಾಗಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಂಪುರದ ಸ್ವಾಮಿ, ಆರ್.ಎಸ್.ವೆಂಕಟಯ್ಯ, ಕನ್ನಮಂಗಲ ಸಿದ್ದೇಗೌಡ, ಶಿವರಾಜು, ಡಾ.ನಿಶ್ಚಲ್, ಕನ್ನಮಂಗಲ ಮಹೇಶ್, ಕುಮಾರ್, ಪ್ರಕಾಶ್, ಎಲೇಕೇರಿ ಸಿದ್ದಪ್ಪ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!