ಕನ್ನಡಪ್ರಭ ವಾರ್ತೆ ಮಂಗಳೂರು
ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸ್ಥಳೀಯ ಜನರಿಗೆ ಉತ್ತಮ ಸೇವೆ ಸಿಗುತ್ತಿಲ್ಲ. ವಿಲೀನ ಪ್ರಕ್ರಿಯೆಯಿಂದಾಗಿ ಬ್ಯಾಂಕ್‌ಗಳು ಇನ್ನಷ್ಟು ಸಂಕುಚಿತಗೊಳ್ಳುತ್ತಿವೆ. ಸಹಕಾರಿ ಸಂಸ್ಥೆಗಳು ಜನರೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡು ಉತ್ತಮ ಸೇವೆ ನೀಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.ನಗರದ ಪಾಂಡೇಶ್ವರದ ಆರ್‌ಟಿಒ ಕಚೇರಿ ಸಮೀಪ ಎ.ಬಿ. ಶೆಟ್ಟಿ ಸರ್ಕಲ್ ಬಳಿ ಇರುವ ಪೆರೇಡಿಯಂ ಪ್ಲಾಜಾದಲ್ಲಿ ಆದರ್ಶ ವಿವಿಧೊದ್ದೇಶ ಸಹಕಾರ ಸಂಘದ 16ನೇ ಪಾಂಡೇಶ್ವರ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಶನಿವಾರ ಮಾತನಾಡಿದರು.
ಜನರಿಗೆ ಬೇಕಾದ ರೀತಿಯ ಉತ್ತಮ ಸೇವೆ ನೀಡುವುದರಿಂದ ಸಂಸ್ಥೆಗಳು ಬೆಳೆಯುತ್ತವೆ. ಇದಕ್ಕೆ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದಂತಹ ಅನೇಕ ಸಹಕಾರ ಸಂಸ್ಥೆಗಳು ಉದಾಹರಣೆಗಳಾಗಿವೆ. ಹಳ್ಳಿ ಹಳ್ಳಿಗಳಿಗೆ ಹೋಗಿ ಸೇವೆ ನೀಡುತ್ತಾ ವಿಕಸನಗೊಳ್ಳುತ್ತಿವೆ. ಮಾದರಿಯಾಗಿ ಬೆಳೆಯುತ್ತಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ 25 ವರ್ಷ ಪೂರ್ಣಗೊಳಿಸುವಾಗ 25 ಶಾಖೆಗಳ ಮೂಲಕ 250 ಕೋ.ರು. ಠೇವಣಿ ಸಂಗ್ರಹಿಸುವಂತಾಗಲಿ ಎಂದು ರಾಜೇಂದ್ರ ಕುಮಾರ್ ಹಾರೈಸಿದರು.ಪಾಂಡೇಶ್ವರ ಶಾಖೆಯನ್ನು ಉದ್ಘಾಟಿಸಿದ ಎ.ಜೆ.ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್ ಚೇರ್‌ಮೇನ್ ಡಾ. ಎ.ಜೆ.ಶೆಟ್ಟಿ ಮಾತನಾಡಿ, ಕೃಷಿ, ಉದ್ಯಮ, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಸೀತಾರಾಮ ರೈ ಸವಣೂರು ಅವರ ಮುಂದಾಳತ್ವದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಸಾಲ ವಿತರಣೆ, ಮರುಪಾವತಿ ಉತ್ತಮವಾಗಿ ನಡೆಯುತ್ತಿದೆ. ದಕ್ಷ ಆಡಳಿತ ಮಂಡಳಿ, ಸೇವಾ ಮನೋಭಾವದ ಸಿಬ್ಬಂದಿ ಸಂಸ್ಥೆಯ ಶಕ್ತಿಯಾಗಿದ್ದು ಮತ್ತಷ್ಟು ಸದಸ್ಯರೊಂದಿಗೆ ಸಂಸ್ಥೆ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಲಾಭದಾಯಕ ಸಂಸ್ಥೆ: ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿ ಮಾತನಾಡಿ, ಉತ್ತಮ ಸೇವೆಯಿಂದಾಗಿ ಬ್ಯಾಂಕ್ ಬೆಳೆಯುತ್ತಿದೆ. ಸುರಕ್ಷತೆ, ಲಾಭದಾಯಕ ವ್ಯವಹಾರ ಸಂಸ್ಥೆಯನ್ನು ಮುಂಚೂಣಿಗೆ ಕೊಂಡೊಯ್ದಿದೆ ಎಂದು ಹೇಳಿದರು.ಆರ್ಥಿಕತೆಗೆ ಕೊಡುಗೆ: ಠೇವಣಿ ಪತ್ರ ಬಿಡುಗಡೆಗೊಳಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಕಠಿಣ ಪರಿಶ್ರಮದಿಂದ ಬೆಳೆದಿರುವ ಸವಣೂರು ಸೀತಾರಾಮ ರೈ ಅವರು ತಾವು ತೊಡಗಿಸಿಕೊಂಡ ಎಲ್ಲ ಕ್ಷೇತ್ರಗಳಲ್ಲಿಯೂ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ. ಸಹಕಾರಿ ಸಂಸ್ಥೆಗಳು ರೈತರು, ವ್ಯಾಪಾರಸ್ಥರಿಗೆ ಕೈಗೆಟಕುವ ದರದಲ್ಲಿ ಸಾಲ ಸೌಲಭ್ಯ ಒದಗಿಸಿ ಅವರ ಜೀವನವನ್ನು ರೂಪಿಸುವ ಮೂಲಕ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿವೆ ಎಂದರು.
ನಂಬಿಕೆಯ ಸಂಸ್ಥೆ: ಇನ್ನೋರ್ವ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಸಹಕಾರಿ ಸಂಸ್ಥೆಗಳು ನಂಬಿಕೆಯ ಆಧಾರದಲ್ಲಿ ಸಾಲ ಸೌಲಭ್ಯ ಒದಗಿಸುತ್ತವೆ. ಜನರಲ್ಲಿಯೂ ನಂಬಿಕೆ ಮೂಡಿಸಿವೆ. ಕೊರೋನಾ ಕಾಲದಲ್ಲಿಯೂ ನಮ್ಮ ದೇಶದಲ್ಲಿ ಆರ್ಥಿಕವಾಗಿ ದುಷ್ಪರಿಣಾಮ ಉಂಟಾಗದಿರಲು ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿತ್ತು ಎಂದು ಹೇಳಿದರು.ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು, ಮಹಾಪ್ರಬಂಧಕ ವಸಂತ್ ಜಾಲಾಡಿ ಇದ್ದರು.ಪ್ರಭಾರ ಶಾಖಾ ವ್ಯವಸ್ಥಾಪಕಿ ಮಹಾಲಕ್ಷ್ಮಿ ವಂದಿಸಿದರು. ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.
----ಕೊಡಗು, ಉಡುಪಿಗೂ ಶಾಖೆ ವಿಸ್ತರಣೆ: ಸೀತಾರಾಮ ರೈಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಪ್ರಾಸ್ತಾವಿಕವಾಗಿ ಮಾತನಾಡಿ, 2002ರಲ್ಲಿ ಆರಂಭಗೊಂಡ ಸಂಸ್ಥೆ ಸದ್ಯ 30,400 ಸದಸ್ಯರನ್ನು ಹೊಂದಿದೆ. 155 ಕೋ.ರು. ಠೇವಣಿ, 140 ಕೋ.ರು. ಮುಂಗಡ ಹೊಂದಿದೆ. 166 ಕೋ.ರು. ದುಡಿಯುವ ಬಂಡವಾಳ ಹೊಂದಿದೆ. ಸಂಘದ ಶಾಖೆಗಳನ್ನು ಕೊಡಗು ಮತ್ತು ಉಡುಪಿ ಜಿಲ್ಲೆಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.----------------