ಉತ್ತಮ ಬೋಧನೆಯಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ

KannadaprabhaNewsNetwork |  
Published : Jan 04, 2025, 12:31 AM IST
ಚಿತ್ರದುರ್ಗ ನಾಲ್ಕನೇ ಪುಟದ ಲೀಡ್ | Kannada Prabha

ಸಾರಾಂಶ

ಪ್ರೌಢಶಾಲೆ ಆಂಗ್ಲ ಭಾಷೆ ಶಿಕ್ಷಕರಿಗೆ ತರಾಸು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರವನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಕ್ಕಳಿಗೆ ಬೋಧನೆ ಮಾಡುವುದನ್ನು ಯಾರೂ ಒತ್ತಡ ಅಂದುಕೊಳ್ಳದೆ ತೃಪ್ತಿ ಕೊಡುವ ವೃತ್ತಿ ಎಂದು ಭಾವಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಶಿಕ್ಷರಿಗೆ ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲೆಯ ಇಂಗ್ಲಿಷ್ ಶಿಕ್ಷಕರ ಕ್ಲಬ್ ಸಹಯೋಗದೊಂದಿಗೆ ತರಾಸು ರಂಗಮಂದಿರದಲ್ಲಿ ಜಿಲ್ಲೆಯ ಪ್ರೌಢಶಾಲೆಯ ಆಂಗ್ಲ ಶಿಕ್ಷಕರಿಗೆ ಶುಕ್ರವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮಲ್ಲಿರುವ ಕೌಶಲ್ಯ, ಪರಿಣಿತಿಯನ್ನು ಬಳಸಿ ಶಾಲೆಯಲ್ಲಿ ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಪಾಠ ಬೋಧಿಸಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಶಿಕ್ಷಕರ ಮೇಲೆ ಒತ್ತಡವಿದೆ ನಿಜ. ಆದರೆ ಎಂದಿಗೂ ನೀವುಗಳು ಒತ್ತಡ ಅಂದುಕೊಳ್ಳಬಾರದು. ಸಮಾಜದಲ್ಲಿ ಅತ್ಯಂತ ತೃಪ್ತಿ ಕೊಡುವ ವೃತ್ತಿ ಯಾವುದಾದರೂ ಇದ್ದರೆ ಅದು ಶಿಕ್ಷಕ ವೃತ್ತಿ ಮಾತ್ರ. ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ಕೊಡುವ ಅವಕಾಶ ಶಿಕ್ಷಕರ ಕೈಯಲ್ಲಿದೆ. ಮಕ್ಕಳು ಹತ್ತನೆ ತರಗತಿಗೆ ಬಂದಾಗ ಮಾತ್ರ ಫಲಿತಾಂಶ ಸುಧಾರಣೆಯತ್ತ ಗಮನ ಕೊಡುವ ಬದಲು ಎಂಟನೆ ತರಗತಿಯಿಂದಲೆ ಪರೀಕ್ಷೆಗೆ ತಯಾರು ಮಾಡುವ ಕೆಲಸವಾಗಬೇಕು. ಎಲ್ಲಾ ಮಕ್ಕಳಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆಯಿರುತ್ತದೆ. ಅದನ್ನು ಗುರುತಿಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರುಗಳ ಮೇಲಿದೆ ಎಂದು ಹೇಳಿದರು.

ಗಣಿತ ಹೊರತುಪಡಿಸಿದರೆ ಎರಡನೆಯದು ಇಂಗ್ಲಿಷ್ ಕಷ್ಟ ಎನ್ನುವ ಭಯವನ್ನು ಮಕ್ಕಳ ಮನಸ್ಸಿನಿಂದ ತೆಗೆಯಬೇಕಿರುವುದರಿಂದ ಶಿಕ್ಷಕರು ಮಕ್ಕಳ ಮನೋ ಸಾಮರ್ಥ್ಯವನ್ನು ಅರಿತು ಮನಸ್ಸಿಗೆ ನಾಟುವ ರೀತಿಯಲ್ಲಿ ಇಂಗ್ಲಿಷ್ ಬೋಧಿಸಬೇಕು. ಪದ, ವಾಕ್ಯ, ವ್ಯಾಕರಣದ ಜೊತೆ ಸುಲಭವಾಗಿ ಇಂಗ್ಲಿಷ್ ಭಾಷೆಯನ್ನು ಮಕ್ಕಳಿಗೆ ಕಲಿಸಬೇಕಿದೆ. ಗುಣಮಟ್ಟದ ಶಿಕ್ಷಣದಿಂದ ಮಾತ್ರ ಫಲಿತಾಂಶದಲ್ಲಿ ಸುಧಾರಣೆ ಸಾಧ್ಯ. ಇಂದಿನ ದಿನಗಳಲ್ಲಿ ಬರವಣಿಗೆಯೇ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ಶಿಕ್ಷಣದ ಜೊತೆ ಸೃಜನಶೀಲ ಕೌಶಲ್ಯವನ್ನು ಮಕ್ಕಳಿಗೆ ಕಲಿಸಬೇಕಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ಹೆಚ್ಚಿನ ಗಮನ ಕೊಡುವಂತೆ ಶಿಕ್ಷಕರಿಗೆ ಅಪರ ಜಿಲ್ಲಾಧಿಕಾರಿ ಕರೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಮಂಜುನಾಥ್ ಮಾತನಾಡಿ, ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಬೇಕಾದರೆ ಭಾಷಾವಾರು ಕಾರ್ಯಾಗಾರ ಅನುಕೂಲವಾಗುತ್ತದೆ. ಗುಣಮಟ್ಟದ ಶಿಕ್ಷಣವನ್ನು ಶಾಲೆಗಳಲ್ಲಿ ಬೋಧಿಸಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಿದಾಗ ಫಲಿತಾಂಶದಲ್ಲಿ ಸುಧಾರಣೆ ಕಂಡುಕೊಳ್ಳಬಹುದು ಎಂದು ಶಿಕ್ಷಕರಿಗೆ ತಾಕೀತು ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾಧಿಕಾರಿಗಳಾದ ಎನ್.ಆರ್.ತಿಪ್ಪೇಸ್ವಾಮಿ, ಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಡಿವೈಪಿಸಿ ವೆಂಕಟೇಶ್, ವಿಷಯ ಪರಿವೀಕ್ಷಕರಾದ ಶಿವಣ್ಣ, ಗೋವಿಂದಪ್ಪ, ಚಂದ್ರಣ್ಣ, ಪ್ರಶಾಂತ್, ಮಹಲಿಂಗಪ್ಪ, ಶಿವಣ್ಣ, ಸಂಪತ್, ಆಂಗ್ಲ ಭಾಷೆ ಶಿಕ್ಷಕರ ಕ್ಲಬ್ ಅಧ್ಯಕ್ಷ ಸಿ.ಬಿ.ಸಿದ್ದೇಶ್, ತಾಲೂಕು ಅಧ್ಯಕ್ಷ ಎಸ್.ಗುರುಮೂರ್ತಿ, ಆಂಗ್ಲ ಭಾಷಾ ವಿಷಯ ಪರಿವೀಕ್ಷಕ ಹೆಚ್.ಟಿ.ಚಂದ್ರಣ್ಣ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಸ್.ರಾಜಪ್ಪ, ಕಾರ್ಯದರ್ಶಿ ಶ್ರೀನಿವಾಸ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ ವೇದಿಕೆಯಲ್ಲಿದ್ದರು. ಸಂಪನ್ಮೂಲ ವ್ಯಕ್ತಿ ಬೆಳಗಾಂನ ಅಲ್ತಾಫ್ ಜಹಾಂಗೀರ್ ಉಪನ್ಯಾಸ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ