ಹರ್ಷ ಆಸ್ಪತ್ರೆಯಿಂದ ಉತ್ತಮ ಚಿಕಿತ್ಸಾ ಸೌಲಭ್ಯ

KannadaprabhaNewsNetwork | Published : Mar 17, 2025 12:30 AM

ಸಾರಾಂಶ

ನಗರದ ಹರ್ಷಾ ಆಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಧನೆಯ ಸಮಾರಂಭ ಕಾರ್ಯಕ್ರಮವನ್ನು ಡಾ ಕೆ ಎಸ್ ರವೀಂದ್ರನಾಥ್ ಉದ್ಘಾಟಿಸಿ ಮಾತನಾಡಿದರು

ಸಾಧನೆ ಸಮಾರಂಭದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ರವೀಂದ್ರನಾಥ್‌ ಅಭಿಮತಕನ್ನಡಪ್ರಭ ವಾರ್ತೆ ಹಿರಿಯೂರು

ಅತ್ಯಾಧುನಿಕ ಗುಣಮಟ್ಟದಿಂದ ಕೂಡಿರುವ ಹರ್ಷಾ ಆಸ್ಪತ್ರೆಯು ಉತ್ತಮ ವ್ಯವಸ್ಥೆ ಹೊಂದಿದ ಚಿಕಿತ್ಸೆ ನೀಡುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಅಭಿಪ್ರಾಯಪಟ್ಟರು.

ನಗರದ ಹರ್ಷಾ ಆಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಧನೆಯ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕು ಮಟ್ಟದಲ್ಲಿ ಉತ್ತಮ ವಾತಾವರಣದಿಂದ ಕೂಡಿರುವ ಆಸ್ಪತ್ರೆಯಲ್ಲಿ ನೂರು ಮಂದಿಗೆ ಯಶಸ್ವಿ ಮಂಡಿ ಚಿಪ್ಪು ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿರುವುದು ಸಣ್ಣ ಸಾಧನೆಯಲ್ಲ.

ದೈಹಿಕ ಚಟುವಟಿಕೆಗಳು ಇಲ್ಲದಿದ್ದಾಗ ಮನುಷ್ಯನಿಗೆ ರೋಗಗಳು ಬರುತ್ತವೆ. ಬೆಂಗಳೂರಿನಲ್ಲಿ ಚಿಕಿತ್ಸೆಗೆ ಹೆಚ್ಚಿನ ವೆಚ್ಚವಾಗುತ್ತದೆ. ಆದರೆ ಹಿರಿಯೂರಿನಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಸೌಲಭ್ಯ ಒದಗಿಸುತ್ತಿರುವುದು ಪ್ರಶಂಸನೀಯ.

ಡಾಕ್ಟರ್‌ಗಳು ರೋಗಿಗಳ ಜೊತೆ ಹೆಚ್ಚು ಮಾತಾಡಬೇಕು. ಆತ್ಮೀಯತೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಿದಾಗ ರೋಗಿ ಮತ್ತು ವೈದ್ಯರ ಮಧ್ಯೆ ಆತ್ಮವಿಶ್ವಾಸ ಬರಲು ಸಾಧ್ಯವಾಗುತ್ತದೆ ಎಂದರು.

ಹರ್ಷಾ ಆಸ್ಪತ್ರೆಯ ಡಾ.ಹರ್ಷವರ್ಧನ್ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ 100 ರೋಗಿಗಳಿಗೆ ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ ಯಶಸ್ಸು ಮುಂದಿನ ನೂರಾರು ಚಿಕಿತ್ಸೆಗಳಿಗೆ ಸ್ಫೂರ್ತಿಯಾಗಿದೆ. ನನ್ನ ಮೇಲೆ ಭರವಸೆ ಇಟ್ಟು ತಾಲೂಕಲ್ಲದೆ ಬೇರೆ ಬೇರೆ ತಾಲೂಕಿನಿಂದ ಬಂದ ರೋಗಿಗಳಿಗೆ ಧನ್ಯವಾದಗಳನ್ನು ಅರ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಲೂಕು ಮಟ್ಟದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವುದು ತುಂಬಾ ಕಷ್ಟದ ಕೆಲಸ. ಆದರೂ ತಾಲೂಕಿನ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂಬ ನಿಟ್ಟಿನಲ್ಲಿ ಈ ಆಸ್ಪತ್ರೆ ಆರಂಭಿಸಲಾಯಿತು. ಮುಂದಿನ ದಿನಗಳಲ್ಲಿ ನಮ್ಮ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ತೆರೆಯಲು ಚಿಂತನೆ ನಡೆಸಲಾಗಿದೆ ಎಂದರು.

ಈ ವೇಳೆ ರಾಘವೇಂದ್ರ ವಿದ್ಯಾಸಂಸ್ಥೆ ಅಧ್ಯಕ್ಷ ಜಯರಾಂ, ಜಿಪಂ ಮಾಜಿ ಅಧ್ಯಕ್ಷ ಬಿ.ಎಸ್.ರಘುನಾಥ್ ಮಾತನಾಡಿದರು.

ಈ ಸಂದರ್ಭದಲ್ಲಿ ಆಲೂರು ಹನುಮಂತರಾಯಪ್ಪ, ಡಾ.ಮಹಾಲಿಂಗಪ್ಪ, ಡಾ.ಶಿವಣ್ಣ, ರಂಜಿತ್, ಜನಾರ್ಧನ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Share this article