ದೇವಾಲಯದ ವಸತಿ ಸೌಲಭ್ಯ ಸದ್ಬಳಕೆಗೆ ಕರೆ

KannadaprabhaNewsNetwork | Published : Mar 6, 2024 2:17 AM

ಸಾರಾಂಶ

ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಗ್ರಾಮದಲ್ಲಿ ದಿ. ಲಕ್ಷ್ಮಮ್ಮ ದಿ. ಹನುಮಶೆಟ್ಟರ (ನಿ.ಶಿಕ್ಷಕರು) ಜ್ಞಾಪಕಾರ್ಥವಾಗಿ ಪುತ್ರ ಡಾ. ಎಚ್.ರವಿಕುಮಾರ್ ದೇವಾಲಯದ ಆವರಣದಲ್ಲಿ ಕಟ್ಟಿಸಿದ ಉಚಿತ ಕಲ್ಯಾಣ ಮಂಟಪ, ಕೊಠಡಿಗಳ ಉದ್ಘಾಟನೆಯನ್ನು ಮಾಜಿ ಶಾಸಕ ಯತೀಂದ್ರ ಸಿದ್ಧರಾಮಯ್ಯ ಉದ್ಘಾಟಿಸಿದರು.

ಉಚಿತ ಕಲ್ಯಾಣ ಮಂಟಪ ಉದ್ಘಾಟಿಸಿದ ಯತೀಂದ್ರ ಸಿದ್ದರಾಮಯ್ಯಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಹಳ್ಳಿಮೈಸೂರು ಗ್ರಾಮದಲ್ಲಿ ಶೀಗೆತಾಳಮ್ಮ ದೇವಿಯ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪ, ವಸತಿ ಗೃಹಗಳು ಮತ್ತು ಪಾಕಶಾಲಾ ಕೊಠಡಿಗಳು ಸಾರ್ವಜನಿಕರ ಬಳಕೆಗೆ ಸಂಪೂರ್ಣ ಉಚಿತವಾಗಿದ್ದು, ಹಳ್ಳಿಮೈಸೂರು ಹೋಬಳಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀ ಶೀಗೆತಾಳಮ್ಮ ದೇವಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ವೈದ್ಯಕೀಯ ಸಲಹೆಗಾರ ಎಚ್.ರವಿಕುಮಾರ್ ತಿಳಿಸಿದ್ದಾರೆ.

ತಾಲೂಕಿನ ಹಳ್ಳಿಮೈಸೂರು ಗ್ರಾಮದಲ್ಲಿ ದಿ. ಲಕ್ಷ್ಮಮ್ಮ ದಿ. ಹನುಮಶೆಟ್ಟರ (ನಿ.ಶಿಕ್ಷಕರು) ಜ್ಞಾಪಕಾರ್ಥವಾಗಿ ಪುತ್ರ ಡಾ. ಎಚ್.ರವಿಕುಮಾರ್ ದೇವಾಲಯದ ಆವರಣದಲ್ಲಿ ಕಟ್ಟಿಸಿದ ಉಚಿತ ಕಲ್ಯಾಣ ಮಂಟಪ, ಕೊಠಡಿಗಳ ಉದ್ಘಾಟನೆಯನ್ನು ಮಾಜಿ ಶಾಸಕ ಯತೀಂದ್ರ ಸಿದ್ಧರಾಮಯ್ಯ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಹಳ್ಳಿಮೈಸೂರು ಹೋಬಳಿಯಲ್ಲಿ ಮಳೆ ಆಶ್ರಯಿಸಿದ ಹಾಗೂ ನಾಲೆ ನೀರನ್ನು ನಂಬಿಕೊಂಡು ಬೆಳೆಗಳನ್ನು ಬೆಳೆಯಲು ಮಾತ್ರ ಅವಕಾಶವಿದೆ. ಆದ್ದರಿಂದ ಸ್ಥಿತಿವಂತರು ಕಡಿಮೆ ಇದ್ದಾರೆ. ಆದರೆ ಮದ್ಯಮವರ್ಗ ಹಾಗೂ ಬಡವರು, ಕೂಲಿ ಕಾರ್ಮಿಕರು ಹೆಚ್ಚಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮದುವೆ ಅಥವಾ ಶುಭ ಸಮಾರಂಭಗಳನ್ನು ಮಾಡಲು ಕಲ್ಯಾಣ ಮಂಟಪ ಅಥವಾ ವಿಶಾಲವಾದ ಕೊಠಡಿಗಳನ್ನು ಬಾಡಿಗೆ ಪಡೆಯಲು ಕನಿಷ್ಠ ೩೦ ಸಾವಿರ ರು. ಬೇಕಾಗುತ್ತದೆ. ಆದ್ದರಿಂದ ಮಾಜಿ ಶಾಸಕ ಯತೀಂದ್ರ ಸಿದ್ಧರಾಮಯ್ಯ ಉದ್ಘಾಟಿಸಿದ ಉಚಿತ ಕಲ್ಯಾಣ ಮಂಟಪ ಹಾಗೂ ಕಟ್ಟಡಗಳು, ಬಡವರ ಪಾಲಿಗೆ ಮಹತ್ವದ್ದಾಗಿದೆ. ಜತೆಗೆ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಿದೆ. ಈ ಉಚಿತ ಯೋಜನೆಯೂ ಶಾಶ್ವತ ಪರಿಕಲ್ಪನೆಯಾಗಿದೆ, ಹೋಬಳಿಯ ಜನತೆ ಇದನ್ನು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ನೀರು ಹಾಗೂ ಪರಿಸರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.

ಶ್ರೀ ಶೀಗೆತಾಳಮ್ಮ ದೇವಿ ಅಭಿವೃದ್ಧಿ ಟ್ರಸ್ಟ್ ಸದಸ್ಯರು ಹಾಜರಿದ್ದರು.

Share this article