ಕಾರವಾರ: ಜಿಪಂ ವತಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಗುರುತಿಸಿ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಜೂನ್ ತಿಂಗಳಿಗೆ ಕಾರವಾರ ತಾಲೂಕಿನ ತೋಡೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ ಟಿ.ಸಿ. ಆಯ್ಕೆಯಾಗಿದ್ದು, ಗುರುವಾರ ನಗರದ ಜಿಪಂ ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಪ್ರಶಸ್ತಿ ಪತ್ರ ನೀಡಿ, ಅಭಿನಂದಿಸಿದರು.ಬಳಿಕ ಮಾತನಾಡಿದ ಸಿಇಒ ಈಶ್ವರಕುಮಾರ, ಗ್ರಾಮೀಣ ಮಟ್ಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಿ, ಸಾರ್ವಜನಿಕರಿಗೆ ಉತ್ಕೃಷ್ಟ ಸೇವೆ ಒದಗಿಸುವ ಮೂಲಕ ಮಾದರಿ ಕಾರ್ಯಕ್ಷಮತೆಯನ್ನು ತೋರಿದವರಿಗೆ ನಿಗದಿತ ಮಾನದಂಡಗಳನ್ನು ಆಧರಿಸಿ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿ ನೀಡುತ್ತಿದ್ದೇವೆ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನು ಪ್ರೋತ್ಸಾಹಿಸಿ, ಇತರರನ್ನು ಅವರಂತೆ ಕೆಲಸ ಮಾಡಲು ಪ್ರೇರೇಪಿಸುವುದು ನಮ್ಮ ಆಶಯವಾಗಿದ್ದು, ಅದರಂತೆ ಪ್ರತಿ ತಿಂಗಳು ಅರ್ಹ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.ಪ್ರಶಸ್ತಿ ಪಡೆದು ಮಾತನಾಡಿದ ಮಂಜುನಾಥ ಟಿ.ಸಿ. ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದಿರುವುದಕ್ಕೆ ಸಂತಸವಿದೆ. ಇದು ಆರಂಭ. ಸಾಧನೆ ಹಾದಿಯಲ್ಲಿ ಮೈಲಿಗಲ್ಲು. ಸಾಗುವ ದಾರಿ, ಆಗಬೇಕಿರುವ ಕಾರ್ಯಗಳು ಸಾಕಷ್ಟಿವೆ. ಇನ್ನುಮುಂದೆಯೂ ಉತ್ತಮ ರೀತಿಯಲ್ಲಿ ಜನರಿಗೆ ಸೇವೆ ನೀಡಲು ಪ್ರಯತ್ನಿಸುತ್ತೇನೆ. ಮಾರ್ಗದರ್ಶನ ನೀಡಿ, ಸಹಕರಿಸಿದ ಎಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಪಂ ಸಿಬ್ಬಂದಿಗೆ ಧನ್ಯವಾದ ತಿಳಿಸಿದರು.ಜಿಪಂ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಅಭಿವೃದ್ಧಿ ಶಾಖೆ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಮತ್ತಿತರರು ಇದ್ದರು.