ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದ ಜಮಖಂಡಿ ಸಕ್ಕರೆ ಕಾರ್ಖಾನೆಯನ್ನು ಮಹಾರಾಷ್ಟ್ರದಿಂದ ಬಂದವರು ಗೂಂಡಾಗಿರಿ ಮೂಲಕ ನಾಶಪಡಿಸಲು ಯತ್ನಿಸಿರುವುದು ಖಂಡನೀಯ ಎಂದು ರೈತ ಮುಖಂಡ ಬಿ.ಎಸ್.ಸಿಂಧೂರ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಹಿರೇಪಡಸಲಗಿ ಗ್ರಾಮದ ಜಮಖಂಡಿ ಸಕ್ಕರೆ ಕಾರ್ಖಾನೆಯನ್ನು ಮಹಾರಾಷ್ಟ್ರದಿಂದ ಬಂದವರು ಗೂಂಡಾಗಿರಿ ಮೂಲಕ ನಾಶಪಡಿಸಲು ಯತ್ನಿಸಿರುವುದು ಖಂಡನೀಯ ಎಂದು ರೈತ ಮುಖಂಡ ಬಿ.ಎಸ್.ಸಿಂಧೂರ ಆಕ್ರೋಶ ವ್ಯಕ್ತಪಡಿಸಿದರು.ಕಾರ್ಖಾನೆಯ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರ, ಕಬ್ಬಿನ ಬಾಕಿ ಬಿಲ್ ಕೇಳಲು ಬಂದ ರೈತರನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಕಾರ್ಖಾನೆ ಧ್ವಂಸಗೊಳಿಸುವ ಉದ್ದೇಶದಿಂದ ಕೆಲವರು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರೈತರಿಗೆ ಸುಮಾರು ₹4 ಕೋಟಿ ಬಾಕಿ ಬಿಲ್ ಪಾವತಿಸಿಲ್ಲ. ಕಬ್ಬು ಸಾಗಣೆ ಗುತ್ತಿಗೆದಾರರಿಗೆ ಹಣ ನೀಡಿಲ್ಲ. ಸಿಬ್ಬಂದಿಗೆ ಮೂರು ತಿಂಗಳ ವೇತನವೂ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ರೈತರ ಹಿತಕಾಯುವ ಬದಲು ದಬ್ಬಾಳಿಕೆ ನಡೆಸುವುದು ಸರಿಯಲ್ಲ ಎಂದು ಆರೋಪಿಸಿದರು.
ಕಾರ್ಖಾನೆ ಸ್ಥಾಪನೆಗೆ ಸಾವಿರಾರು ರೈತರು ಶ್ರಮಿಸಿದ್ದಾರೆ. ಹೀಗಾಗಿ ಕಾರ್ಖಾನೆಯ ಉಳಿವು ಮುಖ್ಯವಾಗಿದ್ದು, ಆಡಳಿತದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಕಾನೂನುಬದ್ಧವಾಗಿ ಹೋರಾಡಬೇಕು. ಗೂಂಡಾಗಿರಿ ಮೂಲಕ ರೈತರನ್ನು ಬೆದರಿಸುವುದನ್ನು ಸಹಿಸುವುದಿಲ್ಲ. ಕಾರ್ಖಾನೆ ಉಳಿಸಲು ರೈತರೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.
ಕಾರ್ಖಾನೆ ನಿರ್ವಹಣೆಗೆ ಸಂಬಂಧಿಸಿದಂತೆ ಅ.27ರಂದು ನಡೆಯುವ ಷೇರುದಾರರ ಸಭೆಯಲ್ಲಿ ಕಾನೂನುಬದ್ಧ ನಿರ್ಧಾರ ಕೈಗೊಳ್ಳಬೇಕು. ರೈತರ ಸಹಕಾರವಿಲ್ಲದೆ ಯಾವುದೇ ಕಾರ್ಖಾನೆ ನಡೆಸಲು ಸಾಧ್ಯವಿಲ್ಲ. ರೈತರ ಬಾಕಿ ಪಾವತಿಸಿ, ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಡಿಎಸ್ಎಸ್ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಮಾತನಾಡಿ, ಜಮಖಂಡಿ ಸಕ್ಕರೆ ಕಾರ್ಖಾನೆಯನ್ನು ಧ್ವಂಸಗೊಳಿಸಲು ಯತ್ನಿಸಿದವರನ್ನು, ಇದಕ್ಕೆ ಕುಮ್ಮಕ್ಕು ನೀಡಿದವರನ್ನು ತಕ್ಷಣ ಬಂಧಿಸಿ, ಸಮಗ್ರ ತನಿಖೆ ನಡೆಸಬೇಕು. ಕಾರ್ಖಾನೆ ಉಳಿಸಲು ರೈತರು ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಖಾನೆಗೆ ಮಾರಕಾಸ್ತ್ರಗಳೊಂದಿಗೆ ಬಂದಿದ್ದವರನ್ನು ರೈತರು ತಡೆದಿದ್ದಾರೆ. ಈ ವೇಳೆ ಅವರು ವಾಹನದೊಂದಿಗೆ ಪರಾರಿಯಾಗಲು ಯತ್ನಿಸಿದ್ದು, ಘಟನೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ರೈತರಿಗೆ ಸುಮಾರು ₹4 ಕೋಟಿ ಕಬ್ಬಿನ ಬಿಲ್ ಬಾಕಿಯಿದ್ದು, ಸಿಬ್ಬಂದಿಗೂ ಮೂರು-ನಾಲ್ಕು ತಿಂಗಳ ವೇತನ ಪಾವತಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ಅಥಣಿಯ ಬ್ಯಾಂಕ್ ಖಾತೆಯಿಂದ ಪಡೆದಿರುವ ಸುಮಾರು ₹3.5 ಕೋಟಿ ರೈತರ ಬಾಕಿ ಪಾವತಿಸಲು ಏಕೆ ಬಳಸಿಲ್ಲ ಎಂದು ಪ್ರಶ್ನಿಸಿದರು.
ಕಾರ್ಖಾನೆಯನ್ನು ಸಮರ್ಪಕವಾಗಿ ನಡೆಸಿ ರೈತರಿಗೆ ನ್ಯಾಯಯುತ ಕಬ್ಬಿನ ಬೆಲೆ ನೀಡುವವರು ಯಾರೇ ಆಗಿದ್ದರೂ ಅವರಿಗೆ ರೈತರ ಸಹಕಾರವಿದೆ. ಆದರೆ, ಗುಂಡಾಗಿರಿ ಮೂಲಕ ಕಾರ್ಖಾನೆ ಮುಚ್ಚಿಸುವ ಅಥವಾ ಧ್ವಂಸಗೊಳಿಸುವ ಪ್ರಯತ್ನ ಸಹಿಸುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಲಿಂಗರಾಜ ಪಾಟೀಲ, ಅಭಯಕುಮಾರ ನಾಂದ್ರೆಕರ, ಬಾಹುಬಲಿ ಆಲಗೂರ, ಸಂಗಪ್ಪ ಅಂಕಲಗಿ, ಅನೀಲ ಜಾಧವ, ರಾಘು ಗೋಲಬಾವಿ, ನಿಖಿಲ ಪಾಟೀಲ, ಭರತೇಶ ಖಿದ್ರಾಪುರ, ರವಿ ಕವಳೆ, ರವಿ ಐಗಳಿ, ಕಲ್ಲಪ್ಪ ಗಿರಡ್ಡಿ ಸೇರಿದಂತೆ ನೂರಾರು ರೈತರು ಸೇರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.