ಭಟ್ಕಳ: ಇಲ್ಲಿನ ಶರಾಬಿ ಹೊಳೆಯ ಹೂಳೆತ್ತಲು ಸರ್ಕಾರದಿಂದ ₹10 ಕೋಟಿ ಅನುದಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ.
ಈ ಹಿಂದೆ ಶರಾಬಿ ನದಿಯಂಚಿನ ಜನರು ಸಚಿವ ಮಂಕಾಳ ವೈದ್ಯ ಅವರನ್ನು ಸ್ಥಳಕ್ಕೆ ಕರೆಯಿಸಿ ಅಲ್ಲಿನ ಹೊಳೆ ಪಾತ್ರದ ಹೂಳಿನ ಸಮಸ್ಯೆಯಿಂದ ಆಗುತ್ತಿರುವ ತೊಂದರೆಗಳನ್ನು ವಿವರಿಸಿದ್ದರು. ಜನರ ಅಹವಾಲು ಆಲಿಸಿದ್ದ ಸಚಿವರು ಹೊಳೆಯಲ್ಲಿರುವ ಹೂಳೆತ್ತುವುದಕ್ಕೆ ಅನುದಾನ ಮಂಜೂರಿ ಮಾಡಿಕೊಡುವ ಭರವಸೆ ನೀಡಿದ್ದರು. ಜನರಿಗೆ ಕೊಟ್ಟ ಭರವಸೆಯಂತೆ ಸಚಿವರು ಹೂಳೆತ್ತಲು ₹10 ಕೋಟಿಯನ್ನು ಮಂಜೂರಿಸಿಕೊಂಡು ಬಂದಿದ್ದಾರೆ. ಪ್ರಸ್ತಾವಿತ ಕಾಮಗಾರಿಯ ರೂಪುರೇಷೆಗಳನ್ನು ಅಂದಾಜಿಸಲು ಕಾರವಾರದ ಸಣ್ಣ ನೀರಾವರಿ ತಂಡವು ಶರಾಬಿ ಹೊಳೆ ತೀರದ ಪ್ರದೇಶಕ್ಕೆ ನೀಡಿ ಪರಿಶೀಲನೆ ನಡೆಸಿತು. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎನ್. ಪ್ರಶಾಂತ ನೇತೃತ್ವದ ಪರಿಶೀಲನಾ ತಂಡದಲ್ಲಿ ಇಲಾಖೆಯ ಅಧಿಕಾರಿ ರಜನಿ ಮತ್ತು ಇತರ ಅಧಿಕಾರಿಗಳು ಇದ್ದರು.ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಪ್ರಮುಖರು ಶರಾಬಿ ನದಿಯು ಚೌಥನಿಯಿಂದ ಭಟ್ಕಳ ಬಂದರ ತನಕ ಸುಮಾರು ೫ ಕಿ.ಮೀ. ಗಳಷ್ಟು ಹರಿದು ಹೋಗಿ ಸಮುದ್ರವನ್ನು ಸೇರುತ್ತದೆ. ಕಳೆದ ೧೦೦ ವರ್ಷಗಳಿಂದ ನದಿಯಲ್ಲಿ ಹೂಳು ತೆಗೆಯದೇ ಇರುವುದರಿಂದ ತೀವ್ರ ತೊಂದರೆಯಾಗಿದ್ದು ಹೂಳೆತ್ತುವುದರೊಂದಿಗೆ ಹೊಳೆ ಪಾತ್ರದಲ್ಲಿ ಪಿಚ್ಚಿಂಗ್, ಡೊಂಗರ ಪಳ್ಳಿಯ ಪ್ರದೇಶದಲ್ಲಿ ಬ್ಯಾರೇಜ್ ನಿರ್ಮಾಣ ಕೂಡಾ ಅಗತ್ಯ ಎಂದು ತಿಳಿಸಿದರು.
ಮಂಜೂರಾದ ₹೧೦ ಕೋಟಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲದ ಕಾರಣ ಕನಿಷ್ಠ ೩ ಕಿ.ಮೀ. ವ್ಯಾಪ್ತಿಯಲ್ಲಿರುವ ನದಿ ಹೂಳು ತೆಗೆಯಲು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ತಂಝೀಮ್ ಅಧ್ಯಕ್ಷ ಇನಾಯತ್‌ವುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಇಮ್ರಾನ್ ಲಂಕಾ, ಅಜೀಜುರ್ ರೆಹಮಾನ್ ರುಕ್ನುದ್ದೀನ್, ಆದಮ್ ಪಣಂಬೂರ್, ಪುರಸಭಾ ಪ್ರಭಾರ ಅಧ್ಯಕ್ಷ ಅಲ್ತಾಫ್ ಖರೂರಿ, ಸದಸ್ಯ ಕೈಸರ್ ಮೊಹತೆಶಮ್, ಶರಾಬಿ ನದಿ ಹೊರಾಟ ಸಮಿತಿ ಸದಸ್ಯ ತೈಮೂರ್ ಗವಾಯಿ, ಅಷ್ಫಾಕ್ ಕೆ.ಎಂ. ಮುಂತಾದವರಿದ್ದರು.