41 ಕೆರೆಗಳಿಗೆ ನೀರು ಹರಿಸಲು ಸರ್ಕಾರ ಅನುಮೋದನೆ

KannadaprabhaNewsNetwork |  
Published : Jul 6, 2025 1:48 AM IST
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತೀರುವ ತಾಲೂಕು ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಸಿ.ಹೆಚ್.ಶ್ರೀನಿವಾಸ್ | Kannada Prabha

ಸಾರಾಂಶ

ರಾಜ್ಯದಲ್ಲಿ 2013ರಿಂದ 18ರವರೆಗೆ ಅಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದಲ್ಲಿ ಕ್ಷೇತ್ರದ ಶಾಸಕರಾಗಿದ್ದ ವಡ್ನಾಳ್ ರಾಜಣ್ಣ ಸಾಸಿವೆಹಳ್ಳಿ ಏತನೀರಾವರಿ ಯೋಜನೆ ಜಾರಿಗೆ ತಂದರು. ಅನುದಾನ ಸಹ ಮಂಜೂರು ಮಾಡಿಸಿದ್ದರು. ಇದರ ಫಲವಾಗಿ ಈ ಯೋಜನೆ ಕಾಮಗಾರಿ ಮುಕ್ತಾಯಗೊಂಡು ಕೆರೆಗಳಿಗೆ ನೀರು ತುಂಬಿಸುವ ಟ್ರಯಲ್ ರನ್ ನಡೆಯುತ್ತಿದೆ ಎಂದು ತಾಲೂಕು ಪಕ್ಷದ ಅಧ್ಯಕ್ಷ ಸಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

- ನೀರು ತುಂಬಿಸುವ ಟ್ರಯಲ್ ರನ್ ಜಾರಿ: ಶ್ರೀನಿವಾಸ್ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ರಾಜ್ಯದಲ್ಲಿ 2013ರಿಂದ 18ರವರೆಗೆ ಅಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದಲ್ಲಿ ಕ್ಷೇತ್ರದ ಶಾಸಕರಾಗಿದ್ದ ವಡ್ನಾಳ್ ರಾಜಣ್ಣ ಸಾಸಿವೆಹಳ್ಳಿ ಏತನೀರಾವರಿ ಯೋಜನೆ ಜಾರಿಗೆ ತಂದರು. ಅನುದಾನ ಸಹ ಮಂಜೂರು ಮಾಡಿಸಿದ್ದರು. ಇದರ ಫಲವಾಗಿ ಈ ಯೋಜನೆ ಕಾಮಗಾರಿ ಮುಕ್ತಾಯಗೊಂಡು ಕೆರೆಗಳಿಗೆ ನೀರು ತುಂಬಿಸುವ ಟ್ರಯಲ್ ರನ್ ನಡೆಯುತ್ತಿದೆ ಎಂದು ತಾಲೂಕು ಪಕ್ಷದ ಅಧ್ಯಕ್ಷ ಸಿ.ಎಚ್.ಶ್ರೀನಿವಾಸ್ ಹೇಳಿದರು.

ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚನ್ನಗಿರಿ ತಾಲೂಕಿನಲ್ಲಿ 2 ಏತನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ. ಈ 2 ಯೋಜನೆಯಲ್ಲಿ ಬಿಟ್ಟುಹೋಗಿದ್ದ ಸುಮಾರು 41 ಕೆರೆಗಳಿಗೆ ನೀರು ತುಂಬಿಸಲು ಹೊಸ ಏತನೀರಾವರಿ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಲ್ಲಿ ಕ್ಷೇತ್ರದ ಶಾಸಕರ ಕಾಳಜಿ ಎದ್ದು ಕಾಣುತ್ತಿದೆ ಎಂದರು.

ಜು.2ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಹೊನ್ನಾಳಿ ತಾಲೂಕಿನ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ತಾಲೂಕಿನ 41 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಗೆ ₹365 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿದೆ. ಮೊದಲ ಹಂತದಲ್ಲಿ ₹100 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವುದು ತಾಲೂಕಿನ ರೈತರಿಗೆ ವರದಾನವಾಗಿದೆ ಎಂದರು.

ರಾಜ್ಯದಲ್ಲಿ ರೈತಪರ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಕ್ಷೇತ್ರ ಶಾಸಕ ಆಗಿರುವ ಬಸವರಾಜು ಶಿವಗಂಗಾ ಈ ಹೊಸ ಏತನೀರಾವರಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿಸಲು ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ಚರ್ಚೆ ನಡೆಸಿ, ಆಡಳಿತಾತ್ಮಕ ಅನುಮೋದನೆ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಶ್ಲಾಘಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಡ್ನಾಳ್ ಜಗದೀಶ್ ಮಾತನಾಡಿ, ಈ ಯೋಜನೆಗೆ ಹೊಸಹಳ್ಳಿ ಗ್ರಾಮದಿಂದ ನೀರನ್ನು ಲಿಫ್ಟ್‌ ಮಾಡಬೇಕೋ, ಹಾನವೇರಿಯಿಂದ ನೀರನ್ನು ಲಿಫ್ಟ್‌ ಮಾಡಬೇಕೋ ಎಂಬ ಸೂಕ್ತ ಸ್ಥಳ ನಿಗದಿ ಮಾಡಲು ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆಗೆ ಹೆಸರಿಡಲಿದ್ದು, 2017ರಿಂದ ಕೆರೆಗಳಿಗೆ ನೀರನ್ನು ತುಂಬಿಸಬೇಕು ಎನ್ನುವ ಹೋರಾಟಕ್ಕೆ ಈಗ ಜಯ ಸಿಕ್ಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಮುಖಂಡರಾದ ಅಮಾನುಲ್ಲಾ, ಸಿ,ನಾಗರಾಜ್, ಸಂತೆಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಬೀಉಲ್ಲಾ, ಪಿ.ಆರ್. ಮಂಜುನಾಥ್, ಕಾಫಿಪುಡಿ ಶಿವಾಜಿ ರಾವ್, ಜಿತೇಂದ್ರ ರಾಜ್, ಸಂಜು ಪಾಟೀಲ್, ಮುದಿಗೆರೆ ಗಿರೀಶ್ ಮೊದಲಾದವರು ಹಾಜರಿದ್ದರು.

- - -

-5ಕೆಸಿಎನ್ಜಿ1: ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಿ.ಎಚ್.ಶ್ರೀನಿವಾಸ್ ಮಾತನಾಡಿದರು.

PREV