ಕನ್ನಡಪ್ರಭ ವಾರ್ತೆ ಯಾದಗಿರಿ
ರಾಜ್ಯದಲ್ಲಿ ಈಗ ಅಧಿಕಾರ ನಡೆಸುತ್ತಿರುವವರು ರಾಕ್ಷಸರು, ಇನ್ನೂ ಮೂರು ವರ್ಷ ಎಷ್ಟಾಗುತ್ತೋ, ಅಷ್ಟು ಬಾಚುವ ಕೆಲಸ ಮಾಡುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.ಜನರದೊಂದಿಗೆ ಜನತಾದಳ- ಸದಸ್ಯತ್ವದ ನೋಂದಣಿ ಅಭಿಯಾನದ ಅಂಗವಾಗಿ, ಶನಿವಾರ ಯಾದಗಿರಿ ನಗರದ ಸಪ್ತಪದಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಸೆಪ್ಟೆಂಬರ್ ಬಳಿಕ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಆಗುತ್ತದೆ ಎಂಬ ವಿಚಾರವಾಗಿ ಮಾತನಾಡಿದರು.
ರಾಜ್ಯದಲ್ಲಿ ಈಗ ಅಧಿಕಾರ ನಡೆಸುತ್ತಿರುವವರು ರಾಕ್ಷಸರು, ಯಾವುದೇ ಕ್ರಾಂತಿ ಆಗುವುದಿಲ್ಲ, ಎಲ್ಲವೂ ಶಾಂತಿಯುತವಾಗಿ ಹೋಗುತ್ತದೆ, ಇನ್ನೂ ಮೂರು ವರ್ಷಗಳ ಮೊದಲೆ ಸರ್ಕಾರ ಕೆಡವಿ ಮನೆಗೆ ಹೋಗುತ್ತಾರೆ ಇವರು, ಮುಂದಿನ ಚುನಾವಣೆಗೆ ನಮ್ಮ ಪಕ್ಷ 40 -50 ಸ್ಥಾನಕ್ಕೆ ಕುಸಿಯುತ್ತದೆ ಅಂತ ಕಾಂಗ್ರೆಸ್ ನಾಯಕರು ಚರ್ಚೆ ಮಾಡುತ್ತಾರೆ. ಒಳ ಒಪ್ಪಂದದಿಂದ ಎಲ್ಲವೂ ಶಾಂತಿಯುತವಾಗಿ ನಡೆಯುತ್ತದೆ ಯಾವುದೇ ಕ್ರಾಂತಿನೂ ಆಗಲ್ಲ, ಏನೂ ಆಗಲ್ಲ ಎಂದರು.ತಮ್ಮ ರಾಜ್ಯ ಪ್ರವಾಸದ ಹಿಂದೆ ರಾಜ್ಯಾಧ್ಯಕ್ಷ ಫ್ಲಾನ್ ಇದೆ ಅಂತ ಮಾಧ್ಯಮದಲ್ಲಿ ಚರ್ಚೆ ಆಗುತ್ತಿದೆ, ಇನ್ನೂ ಮೂರು ವರ್ಷಗಳ ಕಾಲ ಚುನಾವಣೆ ಎದುರು ನೋಡುತ್ತಿದ್ದೇವೆ, ನಿಖಿಲ್ ಕಾರ್ಯಕರ್ತನಾಗಿ ರಾಜ್ಯದುದ್ದಗಲಕ್ಕೂ ಕಾರ್ಯಕರ್ತರ ಜೊತೆ ಬಾಂಧವ್ಯ, ಸಂಪರ್ಕ, ಸಂಬಂಧ ಇಟ್ಟುಕೊಳ್ಳಲು ಪ್ರವಾಸ ಮಾಡುತ್ತಿದ್ದೇನೆ. ಕಾರ್ಯಕರ್ತರ ಕಷ್ಟ ಹಾಗೂ ನೋವು ಕೇಳಲು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ 2028ರಲ್ಲಿ ಮತ್ತೆ ಜೆಡಿಎಸ್ ,ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಪೂರ್ಣ ಪ್ರಮಾಣದ ಸರ್ಕಾರ ರಚನೆಗೊಂಡು ಕುಮಾರಣ್ಣ ಮುಖ್ಯಮಂತ್ರಿಯಾಗುವುದು ಶತಸಿದ್ಧ ಎಂದ ಅವರು, ರಾಜ್ಯದ್ದುದ್ದಗಲಕ್ಕೂ ಪ್ರವಾಸ ಕೈಗೊಳ್ಳುವ ಮೂಲಕ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿ, ಆ ಮೂಲಕ ಮುಂದಿನ ಚುನಾವಣೆಯಲ್ಲಿ ಮಿತ್ರ ಪಕ್ಷ ಬಿಜೆಪಿಯೊಂದಿಗೆ ಅಧಿಕಾರಕ್ಕೆ ಬಂದು ರೈತರ, ಮಹಿಳೆಯರ ಮತ್ತು ಯುವಕರ ಆಶಾಕಿರಣವಾಗಿ ಕೆಲಸ ಮಾಡುವ ಇಚ್ಛೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರದ್ದಾಗಿದೆ. ರಾಜ್ಯದ ಎಲ್ಲಡೆ ಸುಮಾರು 50 ಲಕ್ಷ. ಸದಸ್ಯತ್ವದ ಗುರಿ ಹೊಂದಲಾಗಿದ್ದು, ಇಲ್ಲಿ ಸೇರಿದಂತಹ ಎಲ್ಲರೂ ಮಿಸ್ ಕಾಲ್ ಕೊಡುವ ಸದಸ್ಯತ್ವ ಪಡೆಯರಿ ಮತ್ತು ಬೂತ್‌ಮಟ್ಟದಲ್ಲಿ ಕೂಡಾ ಸದಸ್ಯತ್ವ ಮಾಡಿಸಿರಿ ಎಂದರು.ಕುಮಾರಣ್ಣ ಅವರು ಎರಡು ಬಾರಿ ಮುಖ್ಯಮಂತ್ರಿಯಾದರೂ ಅಲ್ಪಾವಧಿ ಕಾಲವಾಗಿತ್ತು. ಕಾರ್ಯಕರ್ತರ ಹೋರಾಟದ ಶ್ರಮದಿಂದ ಎನ್‌ಡಿಎ ಮೈತ್ರಿ ಸರ್ಕಾರ ರಚನೆ ಆಗುತ್ತದೆ. ಈಗ ಕುಮಾರಣ್ಣ ರಾಜ್ಯಾಧ್ಯಕ್ಷರಾಗಿದ್ದಾರೆ, ಕೇಂದ್ರ ಸಚಿವರಿದ್ದಾರೆ. ನೈತಿಕತೆ ಇಟ್ಟುಕೊಂಡು ರಾಜಕಾರಣ ಮಾಡ್ತಿರುವವರು ಕುಮಾರಸ್ವಾಮಿ ಎಂದ ಅವರು, ಮೋದಿ ಅವರ 11 ವರ್ಷದ ಕಾರ್ಯವೈಖರಿ ಇಡೀ ಜಗತ್ತು ಮೆಚ್ಚಿದೆ ಎಂದರು.
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯದ ಜನರ ಸೇವೆ ಮಾಡುತ್ತಿದ್ದಾರೆ. ತಂಬಾಕು ಬೆಳೆಗಾರರು ತಂಬಾಕನ್ನು ಬೆಳೆದಿದ್ದರೂ ಅದಕ್ಕೆ ಬೆಂಬಲ ಬೆಲೆ ನಿರ್ಧಾರ ಆಗಿರಲಿಲ್ಲ. ಆಗ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಹೇಳಿ ಬೆಂಬಲ ಬೆಲೆ ಘೋಷಿಸಿದ್ದರು. ಮಾವು ಬೆಳೆಗಾರರಿಗೂ ಮಾವಿಗೆ ಬೆಂಬಲ ಬೆಲೆಯನ್ನು ಕೊಡಿಸಿದ್ದಾರೆಂದು ಹೇಳಿದರು.ಕಾರ್ಯಕ್ರಮದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ನರಿಬೋಳ್, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ ಕಟಕಟೆ, ಚೆನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಶಿರವಾಳ ಮುಂತಾದವರಿದ್ದರು.
ರಾಜ್ಯ ಸರ್ಕಾರ ದಿವಾಳಿ : ನಿಖಿಲ್ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಜೆಡಿಎಸ್ ಕಥೆ ಮುಗಿದೋಯ್ತು ಅಂತಾರೆ. ಆದರೆ ನಿಮ್ಮ ಪಕ್ಷ ಎಷ್ಟು ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂದು ಅವರು ಪ್ರಶ್ನಿಸಿದರು. ನೂರು ವರ್ಷ ಇತಿಹಾಸ ಇರುವ ಕಾಂಗ್ರೆಸ್ ಮೂರು ರಾಜ್ಯಕ್ಕೆ ಸೀಮಿತವಾಗಿದೆ. ಮತ ಪಡೆಯಲು ಪ್ರಣಾಳಿಕೆಯಲ್ಲಿ ಗ್ಯಾರೆಂಟಿ ಘೋಷಿಸಿದ್ದರು, ಗ್ಯಾರಂಟಿಯಿಂದ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ, ಸರ್ಕಾರಿ ನೌಕರರಿಗೆ ವೇತನ ಕೊಡಲು ಈ ಸರ್ಕಾರಕ್ಕೆ ಆಗುತ್ತಿಲ್ಲ. ಇಷ್ಟಾದರೂ ಕಾಂಗ್ರೆಸ್ ನಾಯಕರು ಗ್ಯಾರೆಂಟಿಯೇ ಗ್ಯಾರೆಂಟಿ ಕೊಡುತ್ತಿದ್ದೀವಿ ಎಂದು ಹೇಳುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
ನಿಷ್ಠಾವಂತ ಅಧಿಕಾರಿಗಳಿಗೆ ಬೆಲೆ ಇಲ್ಲ: ನಿಖಿಲ್ಕನ್ನಡಪ್ರಭ ವಾರ್ತೆ ಯಾದಗಿರಿ
ರಾಜ್ಯದಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಬೆಲೆ ಇಲ್ಲ ಎಂದು ಸರ್ಕಾರದ ವಿರುದ್ಧ ಟೀಕಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೇವಲ ಯಾದಗಿರಿಯಲ್ಲಷ್ಟೇ, ಅಲ್ಲ ಇಡೀ ರಾಜ್ಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಬೆಲೆ ಇಲ್ಲ. ಕಷ್ಟಪಟ್ಟು ಓದಿ ಬಡ ಕುಟುಂಬದಿಂದ ಬಂದ ಅಧಿಕಾರಿಗಳು ಯಾರ ಕೈಗೊಂಬೆ ಆಗಿ ಕೆಲಸ ಮಾಡುವ ಅಗತ್ಯವಿಲ್ಲ. 31 ವರ್ಷ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮೇಲೆ ಸಿಎಂ ಕಪಾಳ ಮೋಕ್ಷ ಮಾಡಲು ಹೋಗಿದ್ದರು. ಇದಕ್ಕಾಗಿ ಅವರು ಮನನೊಂದು ಸೇವೆಯಿಂದ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಮಂಡ್ಯ ಮೂಲದ ಯಾದಗಿರಿ ಎಸ್ ಪಿ ಪೃಥ್ವಿಕ್ ಶಂಕರ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮಟ್ಕಾ, ಜೂಜು, ಮರಳು ದಂಧೆಯನ್ನ ತಡೆದಿದ್ದಾರೆ. ಪ್ರಭಾವಿಗಳ ಚೇಲಾಗಳಿಗೆ ಉತ್ತೇಜನ ನೀಡಲು ಪ್ರಾಮಾಣಿಕ ಅಧಿಕಾರಿ ಮೆಲೆ ದಬ್ಬಾಳಿಕೆ ಮಾಡೋದು ಬಹಳ ದಿನ ನಡೆಯಲ್ಲ ಎಂದು ನಿಖಿಲ್ ಕಿಡಿ ಕಾರಿದರು.ಯಾದಗಿರಿ ಡಿಸಿಎಫ್ ಆಗಿದ್ದ ಪ್ರಭಾಕರ್ ಪ್ರಿಯದರ್ಶಿಯವರನ್ನು ಆರೇ ತಿಂಗಳಲ್ಲಿ ವರ್ಗಾವಣೆಗೊಳಿಸಿರುವುದು ಹಾಗೂ ಎಂಟು ತಿಂಗಳಲ್ಲೇ ಎಸ್ಪಿ ಪೃಥ್ವಿಕ್ ಶಂಕರ್ ವರ್ಗಾವಣೆ ಬಗ್ಗೆ ಹುನ್ನಾರದ ಕುರಿತು ಮಾಧ್ಯಮಗಳಿಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
--------------------ಯಾದಗಿರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ- ಸದಸ್ಯತ್ವ ನೋಂದಣಿ ಅಭಿಯಾನದಂಗವಾಗಿ ಆಯೊಜಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.