ಶಿರಸಿ: ಕನ್ನಡದ ಮೊದಲ ರಾಜಧಾನಿ ಬನವಾಸಿಯ ಬಸ್ ನಿಲ್ದಾಣದ ಶೋಚನೀಯ ಸ್ಥಿತಿ ಕಂಡು ಪ್ರವಾಸಿಗರು ಹಾಗೂ ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಿರುವುದಲ್ಲದೇ ಸಾರಿಗೆ ಸಂಸ್ಥೆಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಯಾಣಿಕರು, ಸ್ಥಳೀಯರು ಹಲವು ಬಾರಿ ಘಟಕ ವ್ಯವಸ್ಥಾಪಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಬರುವ ಪ್ರವಾಸಿಗರು ಇಲ್ಲಿನ ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಪ್ರತಿನಿತ್ಯ ಬಸ್ ನಿಲ್ದಾಣಕ್ಕೆ ಬರುವ ಸಾವಿರಾರು ವಿದ್ಯಾರ್ಥಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.
ಬಸ್ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಕುಡಿಯುವ ನೀರಿನ ಟ್ಯಾಂಕ್ ಇದ್ದರೂ ಸ್ವಚ್ಛತೆ ಇಲ್ಲವಾಗಿದೆ. ಕುಡಿಯುವ ನೀರಿನ ನಲ್ಲಿಯ ಸುತ್ತಲೂ ಪಾಚಿ ಕಟ್ಟಿರುವುದು ಒಂದು ಭಾಗವಾದರೆ, ಗುಟ್ಕಾ, ಎಲೆ ಅಡಕೆ ತಿಂದು ಅಲ್ಲಿಯೇ ಉಗುಳುವುದರಿಂದ ಕುಡಿಯುವ ನೀರಿನ ಜಾಗ ಗಲೀಜು ಆಗಿದೆ.ಶೌಚಾಲಯದ ನಿರ್ವಹಣೆ ಸರಿಯಾಗಿಲ್ಲದ ಕಾರಣ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಸಮರ್ಪಕವಾದ ನೀರಿನ ವ್ಯವಸ್ಥೆ ಇಲ್ಲದೇ ಇರುವುದು ಇದಕ್ಕೆ ಮುಖ್ಯ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ.
ನಿಲ್ದಾಣದಲ್ಲಿ ಸಮರ್ಪಕ ಲೈಟಿಂಗ್ ವ್ಯವಸ್ಥೆಯಿಲ್ಲದ ಕಾರಣ ಕಟ್ಟಡ ಪಕ್ಕದಲ್ಲಿಯೇ ಪ್ರಯಾಣಿಕರು ಮೂತ್ರ ವಿಸರ್ಜನೆ ಮಾಡುತ್ತಾರೆ. ಶೌಚಾಲಯ ಮತ್ತು ಬಸ್ ನಿಲ್ದಾಣ ಆವರಣದಲ್ಲಿ ಗಿಡ-ಗಂಟಿಗಳು ಬೆಳೆದಿವೆ. ಅಲ್ಲಲ್ಲಿ ಕಸದ ರಾಶಿ, ಬಣ್ಣ ಕಾಣದ ಕಟ್ಟಡ, ಬಸ್ ನಿಲ್ದಾಣದ ಮುಂಭಾಗದಲ್ಲಿ ಡಾಂಬರ್ ಇಲ್ಲದೇ ಅಲ್ಲಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಗುಂಡಿಗಳು ಬನವಾಸಿಯ ಅಂದಕ್ಕೆ ಮಸಿ ಬಳಿಯುವಂತಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆನ್ನುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ. ಶೀಘ್ರ ಸ್ವಚ್ಛತಾ ಕಾರ್ಯ: ಬನವಾಸಿ ಬಸ್ ನಿಲ್ದಾಣದ ಅವ್ಯವಸ್ಥೆ ನನ್ನ ಗಮನಕ್ಕೆ ಬಂದಿದೆ. ಆರೋಗ್ಯ ಸಮಸ್ಯೆಯಾಗಿರುವುದರಿಂದ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಣಾಧಿಕಾರಿ ರಜೆಯಲ್ಲಿದ್ದಾರೆ. ಶೀಘ್ರ ಸ್ವಚ್ಛತಾ ಕಾರ್ಯ ಮಾಡಿಸಲಾಗುವುದು ಎಂದು ಶಿರಸಿ ಘಟಕ ವ್ಯವಸ್ಥಾಪಕ ಎಸ್.ಎಂ. ಕುರ್ತಕೋಟಿ ಹೇಳಿದರು.ಹದಿನೈದು ದಿನಗಳಿಂದ ಬಸ್ ನಿಲ್ದಾಣದಲ್ಲಿ ಸಾರಿಗೆ ನಿಯಂತ್ರಣಾಧಿಕಾರಿಗಳಿಲ್ಲ. ನಿಲ್ದಾಣದಲ್ಲಿ ಕಸ ಗುಡಿಸದೇ ಅಲ್ಲಲ್ಲಿ ಕಸದ ರಾಶಿ ತುಂಬಿದೆ. ಬಸ್ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಡಿಪೋ ಮ್ಯಾನೇಜರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಾರಿಗೆ ಇಲಾಖೆ ಈ ಬಗ್ಗೆ ಶೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಬನವಾಸಿ ಗ್ರಾಮಸ್ಥ ಬೆನಕ ನಾಯ್ಕ ಹೇಳಿದರು.