ಕಂದಕೂರ ಕುಟುಂಬ ದೇವೇಗೌಡರಿಗೆ ನಿಷ್ಠಾವಂತ: ನಿಖಿಲ್‌

KannadaprabhaNewsNetwork |  
Published : Jul 6, 2025 1:48 AM IST
ಯಾದಗಿರಿಗೆ ಶನಿವಾರ ಆಗಮಿಸಿದ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರನ್ನು ಗುರುಮಠಕ್‌ ಶಾಸಕ ಶರಣಗೌಡ ಕಂದಕೂರ ಬರಮಾಡಿಕೊಂಡರು. | Kannada Prabha

ಸಾರಾಂಶ

ಯಾದಗಿರಿಯ ಕಂದಕೂರ ಕುಟುಂಬ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರಿಗೆ ನಿಷ್ಠಾವಂತ ಕುಟುಂಬ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಯಾದಗಿರಿ: ಯಾದಗಿರಿಯ ಕಂದಕೂರ ಕುಟುಂಬ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರಿಗೆ ನಿಷ್ಠಾವಂತ ಕುಟುಂಬ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಶನಿವಾರ, ಯಾದಗಿರಿಯಲ್ಲಿ ನಡೆದ ಜನರೊಂದಿಗೆ ಜನತಾದಳ - ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಸಾಕಷ್ಟು ಕೇಸ್‌ಗಳನ್ನು ಎದುರಿಸಿ, ಕಾರ್ಯಕರ್ತರಿಗೆ ಧೈರ್ಯ ತುಂಬಿದವರು ದಿ. ಸದಾಶಿವರೆಡ್ಡಿ ಹಾಗೂ ದಿ. ನಾಗನಗೌಡ ಕಂದಕೂರು ಅವರು. 2018 ರಲ್ಲಿ ಮೊದಲ ಬಾರಿಗೆ ನಾಗನಗೌಡ ಕಂದಕೂರು ಅವರು ಮೊದಲ ಬಾರಿ ಶಾಸಕರಾದರು. ಎಚ್‌. ಡಿ. ಕುಮಾರಸ್ವಾಮಿ ಅವರಿಗೆ ಶರಣಗೌಡ ಕಂದಕೂರು ನನ್ನಂತೆ, ಮಗನಿದ್ದಂತೆಯೇ ಎಂದ ನಿಖಿಲ್‌, ಜೆಡಿಎಸ್ ಪಕ್ಷದಿಂದ ಸಾಕಷ್ಟು ಜನ ಶಾಸಕರಾಗಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಬಹುತೇಕ ಶಾಸಕರು, ಸಚಿವರಾದವರು ಜನತಾದಳದ ಔಟ್ಪುಟ್ ಗಳು ಎಂದರು.

ಅಧಿಕಾರ ಅಥವಾ ಹಣದ ಆಸೆಗೆ ಕೆಲವರು ಪಕ್ಷವನ್ನು ತ್ಯಜಿಸಿರಬಹುದು. ಆದರೆ, ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ಬೆಂಬಲವಾಗಿ ನಿಂತಿರುವುದು ಕಂದಕೂರು ಕುಟುಂಬ. ಮಧು ಬಂಗಾರಪ್ಪ ಅವರ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿದ್ದರು. ಅವರು ನಂತರ ಪಕ್ಷವನ್ನು ಬಿಟ್ಟು ಹೋದರು. ಆಗ ದೇವೆಗೌಡ ಅವರು ಶಾಸಕ ಶರಣಗೌಡ ಅವರನ್ನು ಕರೆಸಿದರು. ಆಗ ಯುವ ಜನತಾದಳ ರಾಜ್ಯಾಧ್ಯಕ್ಷರಾಗಿ ಶರಣಗೌಡ ಅವರನ್ನು ಮಾಡಲು ದೇವೇಗೌಡ ಅವರು ಚಿಂತನೆ ನಡೆಸಿದ್ದರಾದರೂ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಬೇಕಿದೆ, ಜೊತೆಗೆ ತಂದೆಯವರೂ ಸಹ ಶಾಸಕರಿದ್ದು, ಕ್ಷೇತ್ರದ ಜನರ ಸೇವೆ ಮಾಡಬೇಕಿದೆ, ಅಧ್ಯಕ್ಷ ಸ್ಥಾನ ಬೇಡ ಅಂದಿದ್ದರು. ಆಗ ನನ್ನ ಹೆಸರನ್ನು ಶರಣಗೌಡ ಕಂದಕೂರು ಅವರು ಸೂಚಿಸಿದ್ದರು. ಜೆಪಿ ಭವನದಲ್ಲಿ ನನ್ನನ್ನು ಕರೆಸಿ ಯುವ ಘಟಕದ ರಾಜ್ಯಾಧ್ಯಕ್ಷರನ್ನು ಮಾಡಿದ್ದರು ಎಂದು ನಿಖಿಲ್‌ ಸ್ಮರಿಸಿದರು.

PREV