ಪ್ರತಿ ವರ್ಷ 10.50 ಮಿಲಿಯನ್ ಟನ್ ಉತ್ಪಾದನೆ ಸಾಮರ್ಥ್ಯ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಈಗಾಗಲೇ ಭೂ ಸ್ವಾಧೀನ ಮಾಡಿಕೊಂಡು ಕಾಂಪೌಂಡ್ ಹಾಕಲಾಗಿರುವ ಜಾಗೆಯಲ್ಲಿ ರಾಜ್ಯದಲ್ಲಿಯೇ ಅತೀ ದೊಡ್ಡ ಸ್ಟೀಲ್ ಕಾರ್ಖಾನೆ ಹಾಕಲು ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರ್ಕಾರ ಅಸ್ತು ಎಂದಿದೆ.
ಸುಮಾರು ₹54 ಸಾವಿರ ಕೋಟಿ ವೆಚ್ಚದ ಬಲ್ಡೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಟ್ (ಬಿಎಸ್ ಪಿಎಲ್ ) ಕಂಪನಿಯ ಪ್ರಸ್ತಾವನೆಗೆ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಬಿಎಸ್ ಪಿಎಲ್ ಕಂಪನಿಯ ರಾಹುಲ್ ಬಲ್ಡೋಟಾ ಪರಸ್ಪರ ರುಜು ಹಾಕಿದ್ದಾರೆ. ಈ ಕುರಿತು ಕಂಪನಿಯ ಪ್ರತಿನಿಧಿಯೋರ್ವರು ಕನ್ನಡಪ್ರಭಕ್ಕೆ ಮಾಹಿತಿ ಖಚಿತಪಡಿಸಿದ್ದಾರೆ.
ಬಲ್ಡೋಟಾ ಕಂಪನಿ ಈ ಕುರಿತ ಪ್ರಸ್ತಾವನೆಯನ್ನು ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೂ ಮುನ್ನವೇ ಸಲ್ಲಿಕೆ ಮಾಡಿದ್ದು, ರಾಜ್ಯ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶದ ಮೊದಲ ದಿನವೇ ಅಸ್ತು ಎಂದಿದೆ.
ಬಲ್ಡೋಟಾ ಕಂಪನಿ ಕೊಪ್ಪಳ ಬಳಿ ತನ್ನ ಉದ್ದೇಶಿತ ಕಾರ್ಖಾನೆಯಲ್ಲಿ ವಾರ್ಷಿಕ 10.50 ಮಿಲಿಯನ್ ಟನ್ ಉತ್ಪಾದನೆ ಗುರಿ ಹೊಂದಲಾಗಿದ್ದು, ಸುಮಾರು 15 ಸಾವಿರ ನೇರ ಉದ್ಯೋಗ ಸೃಷ್ಟಿಯಾಗುತ್ತವೆ ಎಂದಿದೆ. ₹54 ಸಾವಿರ ಕೋಟಿ ರುಪಾಯಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಒಡಂಬಡಿಕೆ ಪತ್ರದಲ್ಲಿ ಕಂಪನಿ ಹೇಳಿಕೊಂಡಿದೆ.
ಆಧುನಿಕ ತಂತ್ರಜ್ಞಾನ ಇದೆ ಎನ್ನಲಾಗುತ್ತಿದೆಯಾದರೂ ಕೇವಲ 980 ಎಕರೆ ಪ್ರದೇಶದಲ್ಲಿ ಇಷ್ಟೊಂದು ಬೃಹತ್ ಕಾರ್ಖಾನೆ ತಲೆ ಎತ್ತಿದ್ದೇ ಆದರೆ ಅದಕ್ಕೆ ಹೊಂದಿಕೊಂಡು ಇರುವ ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳದ ಗತಿ ಏನು ಎನ್ನುವುದು ಈಗ ಎದ್ದಿರುವ ಪ್ರಶ್ನೆಯಾಗಿದೆ.