ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ರಾಜ್ಯ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಇರುವವರ ಸಂಪರ್ಕದಲ್ಲಿರುವ ವ್ಯಕ್ತಿಗಳು ಹಾಗೂ ಗುತ್ತಿಗೆದಾರರ ಸಂಘದ ಪ್ರಮುಖರ ಮನೆಗಳಲ್ಲಿ ದೊರೆತ ಮೂಟೆಗಟ್ಟಲೆ ಹಣವನ್ನು ಗಮನಿಸಿದರೆ ಬೇರೆ ರಾಜ್ಯಗಳಲ್ಲಿ ನಡೆಯುವ ಚುನಾವಣೆಗೆ ರಾಜ್ಯ ಸರ್ಕಾರ ಎಟಿಎಂ ಆಗಿ ಕಾರ್ಯನಿರ್ವಹಿಸುವ ಅನುಮಾನ ಕಾಡುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು. ಕ್ಷೇತ್ರ ಬಿಜೆಪಿ ವತಿಯಿಂದ ಬುಧವಾರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಳೆದ 5 ತಿಂಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಒಂದು ವಾರದ ಈಚೆಗೆ ನಡೆದ ಆದಾಯ ಇಲಾಖೆ ದಾಳಿಯಲ್ಲಿ ದೊರೆತ ಅನಧಿಕೃತ ಹಣವೇ ಸಾಕ್ಷಿ. ಈ ಕ್ಷಣದಲ್ಲಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಆಗ್ರಹಿಸಿದರು. ಅಕ್ಕಿ ಧಾರಣೆ ಇತಿಹಾಸದಲ್ಲಿ ಕಾಣದಷ್ಟು ದುಬಾರಿಯಾಗಿದೆ. ನೋಂದಣಿ ಶುಲ್ಕ ಇಮ್ಮಡಿಗೊಳಿಸಲಾಗಿದ್ದು, ಕಿಸಾನ್ ಸಮ್ಮಾನ್ ಯೋಜನೆ ಹಣವನ್ನು ನೀಡದೇ ವಂಚಿಸಲಾಗಿದೆ. ಮದ್ಯದ ಧಾರಣೆ ಹೆಚ್ಚಿಸಿದೆ. ಉಚಿತ ವಿದ್ಯುತ್ತನ್ನು ಯಾರೂ ಕೇಳಿರಲಿಲ್ಲ. ಅಧಿಕಾರಕ್ಕೆ ಬರುವ ಧಾವಂತ ಮತ್ತು ಹಣ ಗಳಿಸೋ ಹಪಾಹಪಿಯಲ್ಲಿ ಸರ್ಕಾರ ವಿದ್ಯುತ್ ಬೆಲೆಯನ್ನು ಏರಿಕೆ ಮಾಡಿದೆ. ಅನಿಯಮಿತ ವಿದ್ಯುತ್ ನಿಲುಗಡೆ ಖಂಡನೀಯ. ಕ್ಷೇತ್ರಕ್ಕೆ ಮಂಜೂರಾಗಿದ್ದ ₹200 ಕೋಟಿ ಕಾಮಗಾರಿ ತಡೆಹಿಡಿಯಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ದೇಶದ್ರೋಹಿ ಮತ್ತು ಮತಾಂಧ ಶಕ್ತಿಗಳು ತಲೆಯೆಎತ್ತಿ ಮೆರೆಯುತ್ತಿವೆ ಎಂದರು. ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ರಾಘವೇಂದ್ರ ನಾಯಕ್, ಆರ್.ಮದನ್, ಹೆದ್ದೂರು ನವೀನ್, ಸಾಲೇಕೊಪ್ಪ ರಾಮಚಂದ್ರ, ಬೇಗುವಳ್ಳಿ ಕವಿರಾಜ್, ಕೆ.ಶ್ರೀನಿವಾಸ್, ಎಸಿಸಿ ಕೃಷ್ಣಮೂರ್ತಿ, ರಕ್ಷಿತ್ ಮೇಗರವಳ್ಳಿ ಇತರರಿದ್ದರು. - - - -18ಟಿಟಿಎಚ್01: ಸರ್ಕಾರದ ವೈಫಲ್ಯಗಳನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.