ಶಿವಮೊಗ್ಗ: ಉದ್ದೇಶ ಪೂರ್ವಕವಾಗಿ ಪುಸ್ತಕಗಳ ಸಂವಹನವನ್ನು ಹತ್ತಿಕ್ಕುವ ಕಾರ್ಯ ಸರ್ಕಾರದಿಂದ ಆಗುತ್ತಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಭಾನುವಾರ ಹೊಂಗಿರಣ ತಂಡದ ವತಿಯಿಂದ ಏರ್ಪಡಿಸಿದ್ದ ಲೇಖಕ ಪ್ರೊ.ಚನ್ನೇಶ್ ಹೊನ್ನಾಳಿಯವರ ಸ್ವರಚಿತ ಕೃತಿ ‘ಅರಿವಿನ ಬೆಳಕು’ ಸೇರಿದಂತೆ ಸಂಗ್ರಹ ಕೃತಿಗಳಾದ ‘ಗಾಂಧಿ ಚರಿತ ಮತ್ತು ಸ್ವಾಗತ ಗೀತೆ’ ಹಾಗೂ ‘ಕಾವ್ಯಮಡಿಕೆ’ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಸರ್ಕಾರದ ಏಕಗವಾಕ್ಷಿ ಯೋಜನೆಯಡಿ ಪ್ರಕಟಿತ ಪುಸ್ತಕಗಳ ಖರೀದಿ ಸ್ಥಗಿತಗೊಳಿಸಲಾಗಿದೆ. 2021ರಿಂದ ಪ್ರಕಾಶಕರು, ಲೇಖಕರಿಗೆ ಗ್ರಂಥಾಲಯದ ಅನುದಾನ ಬಿಡುಗಡೆಯೇ ಆಗಿಲ್ಲ. ಇದು ದುರ್ದೈವ ಸಂಗತಿ ಎಂದರು.ಸಾರ್ವಜನಿಕರಿಂದ ಸಂಗ್ರಹಿಸಿದ ಲೈಬ್ರರಿ ಸೆಸ್ 500 ರಿಂದ 1,000 ಕೋಟಿ ರು. ಸರ್ಕಾರದ ಬೊಕ್ಕಸದಲ್ಲಿದೆ. ಇದನ್ನು ಬಿಡುಗಡೆ ಮಾಡುವ ಚಿಂತೆಯೇ ಸರ್ಕಾರಗಳಿಗಿಲ್ಲ. ಪುಸ್ತಕಗಳು ಚಲಾವಣೆ ಆಗದಂತೆ ತಡೆ ಹಿಡಿಯಲಾಗುತ್ತಿದೆ. ಈ ವಿಚಾರವಾಗಿ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲಾಗಿದ್ದು, ಗ್ರಂಥಾಲಯ, ಶಾಲಾ–ಕಾಲೇಜು ಅಭಿವೃದ್ಧಿಗಿಂದ ದೇವಾಲಯಗಳನ್ನು ಆಕರ್ಷಿತವಾಗಿ ಕಾಣುವಂತೆ ಮಾಡಲಾಗುತ್ತಿದೆ. ನಾನು ದೇವರ ವಿರೋಧಿಯಲ್ಲ, ಆದರೆ ಲೇಖಕರ ಪಂಚೇಂದ್ರಿಯಗಳನ್ನು ಸ್ಥಗಿತಗೊಳಿಸುವ ಕೆಲಸ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಇದು ಸರಿಯಲ್ಲ ಎಂದರು.ನಿವೃತ್ತ ಕನ್ನಡ ಪ್ರಾಧ್ಯಾಪಕ ಎಚ್.ಟಿ.ಕೃಷ್ಣಮೂರ್ತಿ ಮಾತನಾಡಿ, ಮಾತನಾಡಬೇಕಾದ ವೇದಿಕೆಯಲ್ಲಿ ನಾವು ಮಾತನಾಡುತ್ತಿಲ್ಲ. ಭೌತಿಕ ಕಸುವು ಸಂಕಷ್ಟದ ಸ್ಥಿತಿಯಲ್ಲಿದ್ದು, ಇಂತಹ ಸಂದರ್ಭದಲ್ಲಿ ಬರವಣಿಗೆ ಸಾಧ್ಯವಾಗುತ್ತಿಲ್ಲ. ಇಲ್ಲಿ ವಿಮರ್ಶೆಯ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲದ ಸ್ಥಿತಿಗೆ ಬಂದಿದ್ದೇವೆ. ನಮ್ಮನ್ನು ಮೌಢ್ಯ ಆಳುತ್ತಿದ್ದು, ಇದನ್ನು ವಿಮರ್ಶೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಅಕ್ಷರಸ್ಥರೇ ವಿನಃ ಅನಕ್ಷರಸ್ಥರಲ್ಲ ಎಂದು ಬೇಸರಿಸಿದರು. ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕಿ ಪಿ.ಭಾರತೀದೇವಿ ಮಾತನಾಡಿ, ಗಾಂಧಿ ಚರಿತ ಮತ್ತು ಸ್ವಾಗತ ಗೀತ ಹಾಗೂ ಕಾವ್ಯ ಮಡಿಕೆ ಕೃತಿಯಲ್ಲಿ ಹೊನ್ನಾಳಿ ಸೀಮೆಯ ಕಾವ್ಯ ಪರಂಪರೆ, ಚರಿತ್ರೆಯನ್ನು ಚನ್ನೇಶ್ ಅವರು ಕಟ್ಟಿಕೊಟ್ಟಿದ್ದಾರೆ. ಕೃತಿಯಲ್ಲಿ ರಾಜ ಪ್ರಭುತ್ವವಾಗಿದ್ದ ವ್ಯವಸ್ಥೆಯನ್ನು ಪ್ರಜಾಪ್ರಭುತ್ವಕ್ಕೆ ಹೊರಳುವ ಸಂಕ್ರಮಣ ಕಾಲವನ್ನು ನೋಡಬಹುದು’ ಎಂದು ತಿಳಿಸಿದರು. ಚಿಂತಕ ರಾಜೇಂದ್ರ ಚೆನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಹಾಗೂ ಲೇಖಕರೂ ಆದ ಪ್ರೊ.ಚನ್ನೇಶ್ ಹೊನ್ನಾಳಿ, ಹೊಂಗಿರಣ ತಂಡದ ರಂಗಭೂಮಿ ಕಲಾವಿದ ಸಾಸ್ವೆಹಳ್ಳಿ ಸತೀಶ್ ಇದ್ದರು.