- ಕೆಲವು ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ, ಗ್ರಾಮೀಣ ಭಾಗದ ಜನರಿಗೆ ತಟ್ಟಿದ ಪ್ರತಿಭಟನೆಯ ಬಿಸಿ,
ವೇತನ ಹೆಚ್ಚಳ ಹಾಗೂ ಬಾಕಿ ವೇತನ ಪಾವತಿ ಬೇಡಿಕೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟು ಮಂಗಳವಾರ ಕೆಎಸ್‌ಆರ್‌ಟಿಸಿ ನೌಕರರು ಕರೆ ನೀಡಿದ ಮುಷ್ಕರಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಸಂಸ್ಥೆ ಸಿಬ್ಬಂದಿ ಬೆಂಬಲ ಸೂಚಿಸಿದ್ದರು.
ಹೀಗಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಶೃಂಗೇರಿ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆಯಿಂದಲೇ ಸರ್ಕಾರಿ ಬಸ್‌ಗಳು ಡಿಪೋಗಳಿಂದ ನಿಲ್ದಾಣದೊಳಗೆ ಪ್ರವೇಶ ಮಾಡಲೇ ಇಲ್ಲ. ಆದ್ದರಿಂದ ಮುಷ್ಕರದ ಮೊದಲ ದಿನವೇ ಜನ ಜೀವನದ ಮೇಲೆ ಪರಿಣಾಮ ಬೀರಿತ್ತು.38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿ ಹಾಗೂ 2024ರ ಜನವರಿಯಿಂದ ಹೊಸದಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಮಂಗಳವಾರ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ ಕಾರಣ ಸಂಸ್ಥೆಯ ನೌಕರರು ಎಂದಿನಂತೆ ಕೆಲಸಕ್ಕೆ ಹಾಜರಾಗಿರಲಿಲ್ಲ. ಬೆಳಿಗ್ಗೆ ಯಾವುದೇ ಬಸ್ ಡಿಪೋದಿಂದ ನಿಲ್ದಾಣಕ್ಕೆ ಬರಲಿಲ್ಲ.
ಇಂತಹ ಸಂದರ್ಭದಲ್ಲಿ ಚಾಲಕರು ಪ್ರಯಾಣಿಕರಿಂದ ಟಿಕೆಟ್ ದರಗಿಂತ ಹೆಚ್ಚಿನ ಹಣ ಪಡೆಯುವ ಸಾಧ್ಯತೆ ಇರುತ್ತದೆ. ಅದ್ದರಿಂದ ಹಾಲಿ ಚಾಲ್ತಿಯಲ್ಲಿರುವ ಕೆಎಸ್‌ಆರ್‌ಟಿಸಿ ದರಪಟ್ಟಿಯನ್ನು ಸಾರ್ವಜನಿಕವಾಗಿ ಕಾಣುವಂತೆ ಬಸ್ ನಿಲ್ದಾಣಗಳಲ್ಲಿ ಹಾಕಲಾಗಿತ್ತು. ನಿಗಧಿತ ದರಕ್ಕಿಂತ ಹೆಚ್ಚಿನ ಹಣ ಪಡೆಯಬಾರದೆಂದು ಸೂಚನೆ ನೀಡಲಾಗಿತ್ತು.ಕ್ಷೀಣಿಸಿದ ಪ್ರಯಾಣಿಕರು:
ಬಸ್‌ಗಳು ಇಲ್ಲದಿರುವುದರಿಂದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಕೆಲವು ವಿದ್ಯಾರ್ಥಿಗಳು ಶಾಲೆಗಳು ಬಂದಿದ್ದರು. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಮುಷ್ಕರ ಬಿಸಿ ಪ್ರಯಾಣಿಕರಿಗೆ ತಟ್ಟಿತ್ತು.
- ಬಾಕ್ಸ್ -ಜಿಲ್ಲೆಯ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದೊಳಗೆ ಖಾಸಗಿ ಬಸ್‌ಗಳನ್ನು ಬಿಡಲಾಗಿದೆ. ಬೆಳಿಗ್ಗೆ 4 ಗಂಟೆಯಿಂದಲೇ ಪೊಲೀಸ್ ಅಧಿಕಾರಿಗಳು ಬಸ್ ನಿಲ್ದಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಸ್ಥಳದಲ್ಲಿ ತಹಸೀಲ್ದಾರ್ ಹಾಗೂ ಗ್ರೇಡ್ - 2 ತಹಸೀಲ್ದಾರ್‌ರ ಇರುವ ವ್ಯವಸ್ಥೆ ಮಾಡಲಾಗಿದೆ. ಒಂದೇ ಮಾರ್ಗದಲ್ಲಿ ಹೆಚ್ಚು ಮಂದಿ ಪ್ರಯಾಣಿಕರು ಕಂಡು ಬಂದರೆ ಅಂತಹ ಮಾರ್ಗಗಳಲ್ಲಿ ಬಸ್‌ಗಳನ್ನು ಬಿಡಲಾಗುತ್ತಿದೆ. ಕೆಎಸ್ಆರ್‌ಟಿಸಿಯಲ್ಲಿ 75 ಜನ ಹೊರ ಗುತ್ತಿಗೆಯಲ್ಲಿ ನೇಮಕ ಗೊಂಡಿರುವ ಚಾಲಕರು ಇದ್ದಾರೆ. ತುರ್ತು ಅವಶ್ಯಕತೆ ಇದ್ದರೆ ಅವರನ್ನು ಬಳಸಿಕೊಳ್ಳಲಾಗುವುದು. - ನಾರಾಯಣರಡ್ಡಿ ಕನಕರಡ್ಡಿ