ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಸಂಸ್ಥೆ ಸಿಬ್ಬಂಧಿ ಮಂಗಳವಾರದಿಂದ ಕೈಗೊಂಡ ಮುಷ್ಕರಕ್ಕೆ ಚಿತ್ರದುರ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾರಿಗೆ ಸಂಸ್ಥೆಯ ಚಿತ್ರದುರ್ಗ ಡಿಪೋದ ಒಂದೂ ಬಸ್ಸುಗಳ ರಸ್ತೆಗೆ ಇಳಿಯಲಿಲ್ಲ. ಇದರಿಂದಾಗಿ ರಾಜಧಾನಿ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಪರದಾಡಬೇಕಾಯಿತು. ಉಳಿದಂತೆ ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಕಡೆ ಹೋಗುವ ಪ್ರಯಾಣಿಕರಿಗೆ ಮುಷ್ಕರ ಬಿಸಿ ತಟ್ಟಲಿಲ್ಲ.ಚಿತ್ರದುರ್ಗ ಜಿಲ್ಲೆ ಮೊದಲಿನಿಂದಲೂ ಅರೆ ರಾಷ್ಟ್ರೀಕರಣ ಮಾರ್ಗ ಹೊಂದಿದೆ. ಧಾರವಾಡ-ಬೆಂಗಳೂರು ರಾಷ್ಟ್ರೀಕರಣ ಮಾರ್ಗ ಹೊರತು ಪಡಿಸಿ ಉಳಿದಂತೆ ಶಿವಮೊಗ್ಗ,ಬಳ್ಳಾರಿ, ಮಂಗಳೂರು ಮಾರ್ಗಗಳಲ್ಲಿ ಖಾಸಗಿ ಬಸ್ಸುಗಳ ಓಡಾಟವಿದೆ. ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರು ಸಾರಿಗೆ ಸಂಸ್ಥೆ ಬಸ್ಸುಗಳ ಅವಲಂಬಿಸಿದ್ದರಿಂದ ಸಹಜವಾಗಿಯೇ ಖಾಸಗಿ ಬಸ್ಸುಗಳು ನಷ್ಟ ಅನುಭವಿಸಿದ್ದವು. ಇದೀಗ ಸಾರಿಗೆ ಸಂಸ್ಥೆ ಸಿಬ್ಬಂದಿ ಮುಷ್ಕರದಲ್ಲಿ ನಿರತರಾಗಿರವುದರಿಂದ ಸಹಜವಾಗಿಯೇ ಖಾಸಗಿ ಬಸ್ಸುಗಳಲ್ಲಿ ಜನ ಕಾಣಿಸುತ್ತಿದ್ದಾರೆ.
ಸೋಮವಾರವೇ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಮುಷ್ಕರದ ಸಂಗತಿ ಗೊತ್ತಿಲ್ಲದೆ ನಿಲ್ದಾಣಕ್ಕೆ ಬಂದವರು ಪರದಾಡಬೇಕಾಯಿತು. ಇಡೀ ಬಸ್ ನಿಲ್ದಾಣ ಪ್ರಯಾಣಿಕರು, ಬಸ್ಸುಗಳು ಇಲ್ಲದೇ ಬಿಕೋ ಎನ್ನುತ್ತಿತ್ತು. ಖಾಸಗಿ ಬಸ್ಸಿನವರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ ಮುಂಭಾಗ ನಿಂತು ಕೂಗಿ ಪ್ರಯಾಣಿಕರ ಕರೆದೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಕೆಎಸ್‍ಆರ್.ಟಿಸಿ ಮುಷ್ಕರದ ಹಿನ್ನೆಲೆ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದು ಕಂಡು ಬಂತು. ಶಾಲಾ ಕಾಲೇಜುಗಳಲ್ಲಿ ಹಾಜರಾತಿ ಪ್ರಮಾಣ ಕಡಿಮೆ ಇತ್ತು.ಕೆಲ ಕಾಲೇಜುಗಳಲ್ಲಿನ ಆಂತರಿಕ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಖಾಸಗಿ ಬಸ್ಸಿನವವರು ಕೂಗಿ ಕರೆದರೂ ಪ್ರಯಾಣಿಕರು ಕಣ್ಣಾಯಿಸದೇ ಇರುವ ಪ್ರಸಂಗವೂ ಆಗಾಗ್ಗೆ ಕಂಡು ಬಂತು. ಸೀಟುಗಳು ಭರ್ತಿಯಾಗದ ಕಾರಣ ಚಾಲಕರ ಬಸ್ಸನ್ನು ಚಾಲನೆ ಮಾಡದೇ ಇದ್ದುದರಿಂದ ಪ್ರಯಾಣಿಕರು, ಚಾಲಕನ ನಡುವೆ ಜಟಾಪಟಿಗಳೂ ಕೂಡಾ ನಡೆದವು.ಉಳಿದಂತೆ ಯಾವುದೇ ಅಹಿತಕರ ಘಟನೆಗಳು ದಾಖಲಾಗಿಲ್ಲ.