ಪೌರಕಾರ್ಮಿಕರ ಆರೋಗ್ಯ ಭದ್ರತೆಗೆ ಸರ್ಕಾರ ಬದ್ಧ: ಮುರಳಿ ಅಶೋಕ ಸಾಲಪ್ಪ

KannadaprabhaNewsNetwork |  
Published : Jun 18, 2026, 01:15 AM IST
ಷಷ | Kannada Prabha

ಸಾರಾಂಶ

ಚಿಕ್ಕಮಗಳೂರುಆರೋಗ್ಯವನ್ನು ಪಣಕ್ಕಿಟ್ಟು ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರ ಕಷ್ಟ-ಸುಖಗಳನ್ನು ಹತ್ತಿರದಿಂದ ನೋಡಿದ್ದೇನೆ. ಪೌರಕಾರ್ಮಿಕರ ಕುಟುಂಬಗಳ ನೆಮ್ಮದಿಗಾಗಿ ಜಾರಿಗೆ ತಂದಿರುವ ಈ ಆರೋಗ್ಯ ವಿಮೆ ಯೋಜನೆಯನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿ ಅಶೋಕ ಸಾಲಪ್ಪ ಹೇಳಿದರು.

ಆರೋಗ್ಯ ವಿಮೆ ಕಾರ್ಡ್ ವಿತರಣಾ ಸಮಾರಂಭ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಆರೋಗ್ಯವನ್ನು ಪಣಕ್ಕಿಟ್ಟು ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರ ಕಷ್ಟ-ಸುಖಗಳನ್ನು ಹತ್ತಿರದಿಂದ ನೋಡಿದ್ದೇನೆ. ಪೌರಕಾರ್ಮಿಕರ ಕುಟುಂಬಗಳ ನೆಮ್ಮದಿಗಾಗಿ ಜಾರಿಗೆ ತಂದಿರುವ ಈ ಆರೋಗ್ಯ ವಿಮೆ ಯೋಜನೆಯನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿ ಅಶೋಕ ಸಾಲಪ್ಪ ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ, ನೇರ ಪಾವತಿ ಪೌರಕಾರ್ಮಿಕರ ವಿಶೇಷ ಆರೋಗ್ಯ ತಪಾಸಣಾ ಶಿಬಿರ, ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಆರೋಗ್ಯ ವಿಮೆ ಕಾರ್ಡ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ನಿವೃತ್ತಿಯ ವಯಸ್ಸಿಗೆ ಬಂದಾಗ ಹತ್ತಾರು ಕಾಯಿಲೆಗಳಿಗೆ ತುತ್ತಾಗುತ್ತಾರೆ. ನಿವೃತ್ತಿಯ ನಂತರ ಸಿಗುವ ಗ್ರಾಚ್ಯುಯಿಟಿ, ಪೆನ್ಷನ್ ಹಣವೆಲ್ಲಾ ಆಸ್ಪತ್ರೆಯ ಬಿಲ್ ಪಾವತಿಸಲೇ ಮುಗಿದು ಹೋಗುತ್ತದೆ. ಇದನ್ನು ತಪ್ಪಿಸಲು 5 ಲಕ್ಷ ರು.ಮೌಲ್ಯದ ವಿಶೇಷ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಪೌರಕಾರ್ಮಿಕರ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದಂತೆ. ಧೈರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.

ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳ ಮಕ್ಕಳು ಕೇವಲ ಕಸ ಗುಡಿಸಲು ಅಥವಾ ಶೌಚಾಲಯ ಸ್ವಚ್ಛಗೊಳಿಸಲು ಸೀಮಿತವಾಗಬಾರದು. ಪೌರಕಾರ್ಮಿಕರು ಮಕ್ಕಳನ್ನು ಬರೀ ಎಂಜಿನಿಯರ್, ಡಾಕ್ಟರ್ ಮಾಡುವುದಷ್ಟೇ ಅಲ್ಲ, ಅವರಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸಿ ಚುನಾವಣಾ ರಾಜಕೀಯಕ್ಕೆ ತರಬೇಕು. ಹಣವಿಲ್ಲದಿದ್ದರೂ ಪರವಾಗಿಲ್ಲ, ಮನೆಮನೆಗೆ ಹೋಗಿ ಮತ ಕೇಳಿ ಗೆದ್ದು ಬರಬೇಕು ಎಂದು ಹೇಳಿದರು.

ಕುಟುಂಬಗಳು ಶಾಶ್ವತವಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಎಂಟು-ಒಂಬತ್ತು ಬೃಹತ್ ಕಲ್ಯಾಣ ಯೋಜನೆಗಳನ್ನು ನಿಗಮದಿಂದ ಸಿದ್ಧಪಡಿಸಿದ್ದೇವೆ. ಈ ನೂತನ ಯೋಜನೆಗಳಿಗೆ ಅನುಮೋದನೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಗುರುವಾರ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಹತ್ವದ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು.

ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ಮಾತನಾಡಿ, ಪೌರಕಾರ್ಮಿಕರ ಆರೋಗ್ಯ ರಕ್ಷಣೆ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಹಾಗೂ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅರ್ಹರು ಇದರ ಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪೌರಕಾರ್ಮಿಕರು ಹಾಗೂ ಅವರ ಅವಲಂಬಿತರ ಸ್ವಾವಲಂಬಿ ಜೀವನಕ್ಕಾಗಿ ನಿಗಮದಲ್ಲಿ ಹಲವು ಯೋಜನೆಗಳಿವೆ. ಆಸಕ್ತರು ಸ್ವತಂತ್ರವಾಗಿ ಉದ್ಯೋಗ ಕೈಗೊಳ್ಳಲು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಬ್ಯಾಂಕ್‌ಗಳ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ಒದಗಿಸುವ ಯೋಜನೆ ಹಾಗೂ ಮಹಿಳೆಯರು ಒಗ್ಗೂಡಿ ಕಟ್ಟಿಕೊಂಡಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಬಲ ತುಂಬುವ ಯೋಜನೆಗಳು ಚಾಲ್ತಿಯಲ್ಲಿವೆ. ಪೌರಕಾರ್ಮಿಕ ವೃತ್ತಿಯಿಂದ ಹೊರಬಂದು ಪರ್ಯಾಯ ಉದ್ಯೋಗ ಮಾಡಲು ಇಚ್ಛಿಸುವವರಿಗೆ ಸರಕು ಸಾಗಣೆ ವಾಹನ ಮತ್ತು ಪ್ರಯಾಣಿಕರ ವಾಹನ ಖರೀದಿಸಲು ಧನಸಹಾಯ ನೀಡಲು ನಿಗಮದಲ್ಲಿ ಅವಕಾಶವಿದೆ ಎಂದು ತಿಳಿಸಿದರು.

ನಗರಸಭೆಯ ಅಧ್ಯಕ್ಷೆ ಭವ್ಯ ಮಂಜುನಾಥ್, ಉಪಾಧ್ಯಕ್ಷೆ ಲಲಿತ ರವಿನಾಯ್ಕ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲ್ ಜಾಧವ್, ಪೌರಾಯುಕ್ತ ಬಿ.ಸಿ.ಬಸವರಾಜು, ನಿಗಮದ ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಉಪಸ್ಥಿತರಿದ್ದರು.

(ಈಗಾಗಲೇ ಕಳುಹಿಸಲಾದ ಫೋಟೋ ಬಳಸುವುದು)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಧಿಕಾರಿಗಳಿಂದ ರೈತರಿಂದ ಅರ್ಜಿಗಳ ಸ್ವೀಕಾರ
ಕಾಮಗಾರಿಗೆ ಶಾಸಕ ಸುರೇಶ್‌ಗೌಡ ಚಾಲನೆ